ಎಚ್.ಸಿ. ಬಾಲಕೃಷ್ಣ ಮತ್ತು ಎಚ್.ಡಿ. ಕುಮಾರಸ್ವಾಮಿ
ಬಿಡದಿ (ರಾಮನಗರ): ‘ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಜಿಬಿಐಟಿ) ಯೋಜನೆಯು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಕನಸಿನ ಕೂಸು. ನಾವೀಗ ಅವರ ಕನಸನ್ನು ನನಸು ಮಾಡುತ್ತಿದ್ದೇವೆ. ಹೀಗಿರುವಾಗ, ರಾಜಕೀಯಕ್ಕಾಗಿ ರೈತರನ್ನು ಎತ್ತಿ ಕಟ್ಟುವ ಕೆಲಸವನ್ನು ಮೊದಲು ಬಿಡಲಿ’ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ತಿರುಗೇಟು ನೀಡಿದರು.
ಯೋಜನೆ ವಿರೋಧಿಸಿ ಹೋಬಳಿಯ ಭೈರಮಂಗಲದಲ್ಲಿ ಭಾನುವಾರ ನಡೆದಿದ್ದ ಜೆಡಿಎಸ್ ಪ್ರತಿಭಟನೆ ಕುರಿತು ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಯೋಜನಾ ಪ್ರದೇಶವನ್ನು ಕೆಂಪುವಲಯಕ್ಕೆ ಸೇರಿಸಿದ್ದೇ ಎಚ್‌ಡಿಕೆ. ಬಿಜೆಪಿಯವರು ಬಂದು ಪ್ರತಿಭಟಿಸಿದರು ಎಂದು ಈಗ ಜೆಡಿಎಸ್‌ನವರು ಪ್ರತಿಷ್ಠೆಗಾಗಿ ಪ್ರತಿಭಟಿಸಿದ್ದಾರೆ. ಇದರಲ್ಲಿ ರಾಜಕೀಯ ಬಿಟ್ಟರೆ ಬೇರೇನೂ ಇಲ್ಲ’ ಎಂದರು.
‘ಯೋಜನೆಗೆ ಭೂಮಿ ಕೊಟ್ಟವರಿಗೆ ಶೇ 40ರಷ್ಟು ಭೂಮಿ ಕೊಡಲು ನಾನು ನಿರ್ಧರಿಸಿದ್ದೆ ಎಂದು ಕುಮಾರಸ್ವಾಮಿ ಅವರು ವಿಡಿಯೊ ಕಾನ್ಫರೆನ್ಸ್ ಭಾಷಣದಲ್ಲಿ ತಿಳಿಸಿದ್ದಾರೆ. ಆದರೆ, ನಾವು ವಸತಿ ಉದ್ದೇಶದ ಭೂಮಿಯಲ್ಲಿ 50:50 ಅನುಪಾತದಲ್ಲಿ ಹಾಗೂ ವಾಣಿಜ್ಯ ಉದ್ದೇಶದ ಭೂಮಿಯಲ್ಲಿ 45:50 ಅನುಪಾತದಲ್ಲಿ ರೈತರಿಗೆ ಪಾಲುದಾರಿಕೆ ಕೊಡುತ್ತಿದ್ದೇವೆ. ಎಚ್‌ಡಿಕೆಗಿಂತ ಹೆಚ್ಚಿನ ಕೊಡುಗೆ ನೀಡುತ್ತಿದ್ದೇವೆ’ ಎಂದು ತಿಳಿಸಿದರು.
‘ನಾನು ರೈತರ ಜೊತೆ ಸಭೆ ಮಾಡಿಲ್ಲ ಎನ್ನುವ ಎಚ್‌ಡಿಕೆ, ಆಗ ರೈತರ ಜೊತೆ ಎಷ್ಟು ಸಲ ಸಭೆ ಮಾಡಿದ್ದರು? ಸಭೆಗಿಂತ ಹೆಚ್ಚಾಗಿ ನಾವು ಸೂಕ್ತ ಪರಿಹಾರ ಸೇರಿದಂತೆ ರೈತರ ನಿರೀಕ್ಷೆಗಳನ್ನು ತಲುಪುವ ಕೆಲಸ ಮಾಡುತ್ತಿದ್ದೇವೆ. ಹಲವು ರೈತರನ್ನು ಮನೆಗೆ ಕರೆದು ಮಾತನಾಡಿದ್ದೇನೆ. ಶೀಘ್ರದಲ್ಲೇ ಎಲ್ಲಾ ಮಾಹಿತಿಯೊಂದಿಗೆ ಸುದ್ದಿಗೋಷ್ಠಿ ಮಾಡುವೆ’ ಎಂದು ಹೇಳಿದರು.
‘ಕುಮಾರಸ್ವಾಮಿ ಅವರ ಬಳಿ ನಮ್ಮ ಬಗ್ಗೆ ಏನಾದರೂ ದಾಖಲೆಗಳಿದ್ದರೆ ಸಿಬಿಐ ಸೇರಿದಂತೆ ಯಾರಿಗಾದರೂ ದೂರು ಕೊಟ್ಟು ತನಿಖೆ ಮಾಡಿಸಲಿ. ಇತ್ತೀಚೆಗೆ ಅನಿತಾ ಕುಮಾರಸ್ವಾಮಿ ಅವರು ಜಿಬಿಡಿಎ ಆಯುಕ್ತರಿಗೆ ಪತ್ರ ಬರೆದು ಏನೆಂದು ಕೋರಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಬೇನಾಮಿ ಹೆಸರಿನಲ್ಲಿ ಆಸ್ತಿ ಹೊಂದಿದ್ದ ಅವರು, ತಮ್ಮ ಹೆಸರಿಗೆ ನೋಟಿಸ್ ಮತ್ತು ದಾಖಲೆ ಕೊಡುವಂತೆ ಕೇಳಿಲ್ಲವೆ? ಎಲ್ಲರೂ ಗಾಜಿನ ಮನೆಯಲ್ಲಿದ್ದೇವೆ. ಹಾಗಾಗಿ, ಕಲ್ಲು ಹೊಡೆಯುವುದು ಬೇಡ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.