ಕನಕಪುರದಲ್ಲಿ ಅತಿಥಿ ಶಿಕ್ಷಕರಿಗೂ ಬರ
ರಾಮನಗರ: ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಅತಿಥಿ ಶಿಕ್ಷಕರ ನೇಮಕಾತಿ ಜಿಲ್ಲೆಯಲ್ಲಿ ಪೂರ್ಣಗೊಂಡಿದೆ. ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ಖಾಲಿ ಹುದ್ದೆಗಳು ಅತಿಥಿಗಳಿಂದ ಭರ್ತಿಯಾಗಿವೆ. ಆದರೆ, ಕನಕಪುರಕ್ಕೆ ಹಂಚಿಕೆಯಾಗಿರುವ ಹುದ್ದೆಗಳು ಪೂರ್ಣ ಭರ್ತಿಯಾಗಿಲ್ಲ. ವಿವಿಧ ಕಾರಣಗಳಿಗಾಗಿ ಶಿಕ್ಷಕರು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.
ಜಿಲ್ಲೆಗೆ 763 ಪ್ರಾಥಮಿಕ ಮತ್ತು 164 ಪ್ರೌಢಶಾಲಾ ಅತಿಥಿ ಶಿಕ್ಷಕರನ್ನು ಹಂಚಿಕೆ ಮಾಡಲಾಗಿದೆ. ಈ ಪೈಕಿ, ರಾಮನಗರ (ಹಾರೋಹಳ್ಳಿ ಸೇರಿ), ಚನ್ನಪಟ್ಟಣ ಹಾಗೂ ಮಾಗಡಿ ತಾಲ್ಲೂಕುಗಳಿಗೆ ಹಂಚಿಕೆಯಾಗಿದ್ದ ಎಲ್ಲಾ ಹುದ್ದೆಗಳಿಗೂ ಶಿಕ್ಷಕರು ಬಂದಿದ್ದಾರೆ. ಆದರೆ, ಕನಕಪುರಕ್ಕೆ ಅಗತ್ಯ ಪ್ರಮಾಣದ ಶಿಕ್ಷಕರು ಬಂದಿಲ್ಲ.
‘ಕನಕಪುರಕ್ಕೆ 387 ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರನ್ನು ಮತ್ತು 63 ಪ್ರೌಢಶಾಲಾ ಶಿಕ್ಷಕರನ್ನು ಹಂಚಿಕೆ ಮಾಡಲಾಗಿದೆ. ಈ ಪೈಕಿ, 225 ಪ್ರಾಥಮಿಕ ಮತ್ತು 30 ಪ್ರೌಢಶಾಲಾ ಶಿಕ್ಷಕರನ್ನು ನೇಮಕ ಮಾಡಲಾಗಿದೆ’ ಎಂದು ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ದೂರದಲ್ಲಿರುವ ಶಾಲೆಗಳಿಗೆ ಅತಿಥಿ ಶಿಕ್ಷಕರು ಬರಲು ಆಸಕ್ತಿ ತೋರುತ್ತಿಲ್ಲ. ಇದಕ್ಕೆ ಇಲಾಖೆಯು ನಿಗದಿಪಡಿಸಿರುವ ಕೇವಲ ₹10 ಸಾವಿರ ವೇತನ ಒಂದು ಕಾರಣವಾದರೆ, ಶಾಲೆಗಳು ತಾಲ್ಲೂಕು ಕೇಂದ್ರದಿಂದ 25 ಕಿ.ಮೀ.ಗೂ ಹೆಚ್ಚು ದೂರ ಇರುವುದು ಮತ್ತೊಂದು ಕಾರಣ. ಅಲ್ಲದೆ, ಸ್ಥಳೀಯವಾಗಿ ಅತಿಥಿ ಶಿಕ್ಷಕರಾಗಲು ಯಾರೂ ಆಸಕ್ತಿ ತೋರುತ್ತಿಲ್ಲ.
ಏನಕ್ಕೂ ಸಾಲದು
‘ಕೆಲ ಹಳ್ಳಿಗಳಿಗೆ ಬೆಳಿಗ್ಗೆ ಮತ್ತು ಸಂಜೆ ಮಾತ್ರ ಬಸ್ ವ್ಯವಸ್ಥೆ ಇದೆ. ಇನ್ನುಳಿದೆಡೆ ಆ ವ್ಯವಸ್ಥೆಯೂ ಇಲ್ಲ. ಇಲಾಖೆಯವರು ಅತಿ ಕಡಿಮೆ ಸಂಬಳ ಕೊಡುತ್ತಾರೆ. ಅಂತಹದ್ದರಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗಿ ಬರುತ್ತೇವೆಂದರೂ ಆ ಸಂಬಳ ಸಾಲದು. ಕನಿಷ್ಠ ₹20 ಸಾವಿರ ಸಂಬಳ ನಿಗದಿಪಡಿಸಿದ್ದರೆ ಹೋಗಿ ಕೆಲಸ ಮಾಡಬಹುದಿತ್ತು. ಅತಿಥಿ ಉಪನ್ಯಾಸಕರಿಗೆ ಹೆಚ್ಚಿಗೆ ಸಂಬಳ ಕೊಡುವ ಸರ್ಕಾರ, ಶಿಕ್ಷಕರ ವಿಷಯದಲ್ಲಿ ಮಾತ್ರ ಮೀನಮೇಷ ಎಣಿಸುತ್ತಿದೆ’ ಎಂದು ಶಿಕ್ಷಕ ಹುದ್ದೆಯ ಆಕಾಂಕ್ಷಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಸರ್ಕಾರಿ ಶಾಲೆಗಳಲ್ಲಿ ಖಾಲಿ ಹುದ್ದೆಗಳಿಗೆ ಅತಿಥಿ ಶಿಕ್ಷಕರಾಗಿ ನೇಮಕಗೊಂಡು ಸೇವೆ ಸಲ್ಲಿಸುವವರಿಗೆ ಮುಂದೆ ನಡೆಯುವ ನೇಮಕಾತಿಯಲ್ಲಿ ವಿಶೇಷ ಆದ್ಯತೆ ನೀಡಿದರೆ, ಶಿಕ್ಷಕರು ಕೆಲಸಕ್ಕೆ ಬರುತ್ತಾರೆ. ಆದರೆ, ಅಂತಹ ಯಾವುದೇ ಆದ್ಯತೆಯನ್ನು ಇಲಾಖೆ ನೀಡುವುದಿಲ್ಲ. ಹಾಗಾಗಿ, ತುಂಬಾ ದೂರ ಮತ್ತು ಸಂಬಳ ಕಮ್ಮಿ ಎಂಬ ಕಾರಣಕ್ಕೆ ಅತಿಥಿ ಶಿಕ್ಷಕರಾಗಿ ಕೆಲಸ ಮಾಡಲು ಹಲವರು ಮುಂದೆ ಬರುವುದಿಲ್ಲ. ಖಾಸಗಿ ಶಾಲೆಗಳಿಗೆ ಅಥವಾ ಬೇರೆ ಕೆಲಸಕ್ಕೆ ಹೋಗುತ್ತಾರೆ’ ಎಂದರು.
ಜಿಲ್ಲೆಗೆ ಇತ್ತೀಚೆಗೆ ಮಂಜೂರಾಗಿದ್ದ 135 ಕಾಯಂ ಪದವೀಧರ ಪ್ರಾಥಮಿಕ ಶಿಕ್ಷಕರಿಗಾಗಿ ನಡೆದ ಸ್ಥಳ ಆಯ್ಕೆಯ ಕೌನ್ಸೆಲಿಂಗ್‌ನಲ್ಲಿ, ಶಿಕ್ಷಕರ ಕೊರತೆ ಎದುರಿಸುತ್ತಿರುವ ಕನಕಪುರ ತಾಲ್ಲೂಕಿಗೆ 57 ಮಂದಿಯನ್ನು ಆಯ್ಕೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.