
ರಾಮನಗರ: ‘ಬರಪೀಡಿತ ಹನೂರು ತಾಲ್ಲೂಕಿನಲ್ಲಿ ಕುಡಿಯುವ ನೀರು ಮತ್ತು ಕೃಷಿ ಚಟುವಟಿಕೆಗಳಿಗೆ ನೀರಿನ ಸಮಸ್ಯೆ ಎದುರಾಗಿದೆ. ತಾಲ್ಲೂಕಿನಲ್ಲಿ ನೀರಾವರಿ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಬಜೆಟ್‌ನಲ್ಲಿ ಅನುದಾನ ಘೋಷಿಸಬೇಕು’ ಎಂದು ರೈತ ಸಂಘದ ಚಾಮರಾಜನಗರದ ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ ಆಗ್ರಹಿಸಿದರು.
ನೀರಾವರಿ ಯೋಜನೆಗೆ ಅನುದಾನ ಬಿಡುಗಡೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಹನೂರಿನಿಂದ ಬೆಂಗಳೂರಿಗೆ ಕೈಗೊಂಡಿರುವ ರೈತ ಸಂಘದ ಕಾರ್ಯಕರ್ತರ ಪಾದಯಾತ್ರೆ ಶನಿವಾರ ರಾಮನಗರ ತಲುಪಿದಾಗ, ಸ್ಥಳೀಯ ರೈತ ಮುಖಂಡರಿಂದ ಸ್ವಾಗತ ಸ್ವೀಕರಿಸಿ ಅವರು ಮಾತನಾಡಿದರು.
‘ತಾಲ್ಲೂಕಿನಲ್ಲಿ ಸಾವಿರ ಅಡಿ ಕೊಳವೆ ಬಾವಿ ಕೊರೆಸಿದರೂ ನೀರು ಸಿಗದ ಸ್ಥಿತಿ ಇದೆ. ಇದನ್ನು ಮನಗಂಡು 2021-22ನೇ ಸಾಲಿನಲ್ಲಿ ಅಂದಿನ ಬಿಜೆಪಿ ಸರ್ಕಾರ ತಾಲ್ಲೂಕಿನ ಉಡುಕುತೊರೆ ಜಲಾಶಯಕ್ಕೆ ಕಾವೇರಿ ನದಿಯಿಂದ ಏತ ನೀರಾವರಿ ಮೂಲಕ 1.31 ಟಿಎಂಸಿ ನೀರು ಹರಿಸಲು ₹180 ಕೋಟಿ ಮೊತ್ತದ ಯೋಜನೆಗೆ ಡಿಪಿಆರ್ ರೂಪಿಸಿತ್ತು’ ಎಂದು ಹೇಳಿದರು.
‘ಡಿಪಿಆರ್ ರೂಪಿಸಲು ಆಸಕ್ತಿ ತೋರಿದ ಸರ್ಕಾರ ಯೋಜನೆಗೆ ಹಣ ಬಿಡುಗಡೆ ಮಾಡಲಿಲ್ಲ. ಈಗ ಮತ್ತೆ ತಯಾರಿಸಿರುವ ಡಿಪಿಆರ್‌ನಲ್ಲಿ ಯೋಜನೆಯ ಮೊತ್ತ ₹490 ಕೋಟಿಗೆ ಏರಿಕೆಯಾಗಿದೆ. ಈಗಲಾದರೂ ಯೋಜನೆಗೆ ಹಣ ಬಿಡುಗಡೆ ಮಾಡಿ, ತಾಲ್ಲೂಕಿಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.
‘ಮಲೆ ಮಹದೇಶ್ವರ ಸ್ವಾಮಿ ದೇವಾಲಯ ಕಟ್ಟಿದ ಜುಂಜೇಗೌಡರ ಸ್ವಗ್ರಾಮವಾದ ಆಲಂಬವಾಡಿಯಲ್ಲೂ ಕುಡಿಯುವ ನೀರು ಸೇರಿದಂತೆ ಯಾವುದೇ ಮೂಲಸೌಕರ್ಯವಿಲ್ಲದೆ ಜನತೆ ತೊಂದರೆ ಅನುಭವಿಸುತ್ತಿದ್ದಾರೆ. ಗಡಿ ಜಿಲ್ಲೆಯ ಹಲವು ಗ್ರಾಮಗಳು ಮೂಲಸೌಕರ್ಯ ಕೊರತೆಯಿಂದ ಬಳಲುತ್ತಿವೆ’ ಎಂದು ಹೇಳಿದರು.
‘ತಾಲ್ಲೂಕಿನ ನೀರಾವರಿ ಯೋಜನೆಗೆ ಹಣ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಹನೂರಿನಿಂದ ನಾವು ಪಾದಯಾತ್ರೆ ಕೈಗೊಂಡಿದ್ದೇವೆ. ಮಾರ್ಚ್ 2ರಂದು ಪಾದಯಾತ್ರೆ ಬೆಂಗಳೂರು ತಲುಪಲಿದ್ದು, ಅಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು. ಅಷ್ಟರೊಳಗೆ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಬೇಕು’ ಎಂದು ಆಗ್ರಹಿಸಿದರು.
ರಾಮನಗರ ತಲುಪಿದ ರೈತರ ಪಾದಯಾತ್ರೆಗೆ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ಮಲ್ಲಯ್ಯ, ಜಿಲ್ಲಾಧ್ಯಕ್ಷ ಕೃಷ್ಣಪ್ಪ, ಜಯ ಕರ್ನಾಟಕ ಜನಪರ ವೇದಿಕೆಯ ಕುಮಾರಸ್ವಾಮಿ, ವಿಜಯಕುಮಾರ್ ಸೇರಿದಂತೆ ಸಂಘದ ಪದಾಧಿಕಾರಿಗಳು ಸ್ವಾಗತ ಕೋರಿ, ಜೊತೆಗೆ ಕೆಲ ದೂರ ಹೆಜ್ಜೆ ಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.