
ಅಂಬಿಗನಹಳ್ಳದಲ್ಲಿ ನಿರ್ಮಿಸುತ್ತಿರುವ ನಾಲೆಯ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿರುವುದರಿಂದ ನಿಂತಲ್ಲೇ ನಿಂತಿರುವ ನೀರು – ಪ್ರಜಾವಾಣಿ ಚಿತ್ರ
ಹಾರೋಹಳ್ಳಿ: ತಾಲ್ಲೂಕಿನ ಭೈರಮಂಗಲ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಅಂಬಿಗನಹಳ್ಳದಲ್ಲಿ ನಿರ್ಮಿಸುತ್ತಿರುವ ನಾಲೆಯ ಕಾಮಗಾರಿ ಕಳೆದ 6 ತಿಂಗಳಿಂದ ಕಾಮಗಾರಿ ಸ್ಥಗಿತಗೊಂಡಿದೆ. ಅರ್ಧಂಬರ್ಧ ಕಾಮಗಾರಿಯಿಂದ ನಾಲೆಯಲ್ಲಿ ನೀರು ಹರಿಯುತ್ತಿಲ್ಲ.
ಅಣೆದೊಡ್ಡಿಯಿಂದ ಕುರುಬರಹಳ್ಳಿಗೆ ವೃಷಭಾವತಿ ನದಿ ನೀರು ಹರಿಯುತ್ತಿದೆ. ನೀರು ಸರಾಗವಾಗಿ ಹರಿಯುವ ಸಲುವಾಗಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ಈ ನಾಲೆ ನಿರ್ಮಿಸಲಾಗುತ್ತಿದೆ.
ನಾಲೆ ನಿರ್ಮಾಣದಿಂದ ನಾರಾಯಣಪುರ ಹೊನ್ನಾಲಗನದೊಡ್ಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಉಪಯೋಗವಾಗಲಿದೆ.
ಆದರೆ, ವಿವಿಧ ಕಾರಣಗಳಿಂದ ಇದೀಗ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇದರಿಂದಾಗಿ ನೀರು ನಿಂತಲ್ಲೇ ನಿಂತಿದೆ. ಕಾಮಗಾರಿಯಿಂದಾಗಿ ಸುತ್ತಮುತ್ತಲಿನ ಕೃಷಿಕರಿಗೆ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದು ಎಂದು ಹೊನ್ನಾಲಗನದೊಡ್ಡಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಂತಲ್ಲೇ ನಿಂತ ನೀರು: ಕಾಮಗಾರಿ ಸ್ಥಗಿತವಾಗಿದ್ದರಿಂದ ಹಲವು ತಿಂಗಳಿನಿಂದ ನಾಲೆಯಲ್ಲಿ ನೀರು ನಿಂತಲ್ಲೇ ನಿಂತಿದೆ. ಇದರಿಂದ ನೀರು ವಾಸನೆ ಬಂದು, ಹುಳುಗಳ ಆವಾಸಸ್ಥಾನವಾಗಿ ಮಾರ್ಪಟ್ಟಿದೆ. ಇದರಿಂದ ಸೊಳ್ಳೆಗಳು ಹೆಚ್ಚಾಗಿದ್ದು ಆರೋಗ್ಯ ಸಮಸ್ಯೆಯ ಆತಂಕ ಎದುರಾಗಿದೆ ಎಂದು ಗ್ರಾಮದ ಶೇಖರ್ ಆಕ್ರೋಶ ವ್ಯಕ್ತಪಡಿಸಿದರು.
ಕಾಮಗಾರಿ ನಿಂತಿದ್ದರೂ ಇದುವರೆಗೆ ಯಾರೂ ಆ ಬಗ್ಗೆ ಗಮನ ಹರಿಸಿಲ್ಲ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಕಾಮಗಾರಿಯನ್ನು ಆದಷ್ಟು ಬೇಗ ಶುರು ಮಾಡಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.
ಬೇಕಾಬಿಟ್ಟಿ ಕಾಮಗಾರಿ: ನಾಲೆ ನಿರ್ಮಿಸುವ ಸಲುವಾಗಿ ನಾರಾಯಣಪುರ ಗ್ರಾಮದಲ್ಲಿ ಕಾಮಗಾರಿಯನ್ನು ಅನುಷ್ಠಾನ ಮಾಡಲಾಗಿದೆ. ಆದರೆ, ಕಾಮಗಾರಿಯನ್ನು ಸರಿಯಾಗಿ ಮಾಡದೆ ಬೇಕಾಬಿಟ್ಟಿಯಾಗಿ ಮಾಡಲಾಗುತ್ತಿದೆ.
ಇದರಿಂದ ನೀರು ಸರಾಗವಾಗಿ ಹರಿಯದೆ ನಾಲೆಯ ಮೇಲೆಯೇ ನಿಲ್ಲುತ್ತಿದೆ ಎಂದು ಮತ್ತೊಬ್ಬ ಗ್ರಾಮಸ್ಥರ ಶಿವಣ್ಣ ದೂರಿದರು.
ಕಾಲುವೆಯಲ್ಲಿ ಹೆಚ್ಚಿನ ನೀರು ಹರಿದರೆ ಕಾಲುವೆಗೇ ಧಕ್ಕೆಯಾಗುವ ಸಾಧ್ಯತೆ ಇದೆ. ಹಾಗಾಗಿ, ಅಧಿಕಾರಿಗಳು ಕಾಮಗಾರಿಯ ಸಾಧಕ–ಬಾಧಕ ಎಲ್ಲದರ ಬಗ್ಗೆ ಗಮನ ಹರಿಸಿ ಈಗಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಕಾಮಗಾರಿ ನಡೆಸಬೇಕು ಎಂದು ಒತ್ತಾಯಿಸಿದರು.
‘ಸಂಬಂಧಪಟ್ಟವರು ಗಮನ ಹರಿಸಲಿ’
‘ಭೈರಮಂಗಲ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ನಾರಾಯಣಪುರ ಗ್ರಾಮದಲ್ಲಿ ನೀರು ಸರಾಗವಾಗಿ ಹರಿಯುವ ಸಲುವಾಗಿ ನಾಲೆ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ. ಕಾಮಗಾರಿಯಿಂದ ಈ ಭಾಗದ ರೈತರಿಗೆ ಅನುಕೂಲವಾಗಲಿದೆ. ಆದರೆ, ಕಾಮಗಾರಿ ಸರಿಯಾದ ರೀತಿಯಲ್ಲಿ ಅನುಷ್ಠಾನಗೊಳಿಸುವ ಕೆಲಸ ಮಾಡಬೇಕು. ಅರ್ಧಂಬರ್ಧ ಕಾಮಗಾರಿಯಿಂದ ನೀರು ಹರಿಯದೆ ನಿಂತಲ್ಲೇ ನಿಂತಿದೆ. ಕೂಡಲೇ ಸಂಬಂಧಪಟ್ಟವರು ಗಮನಹರಿಸಿ ಕೆಲಸ ಪುನರಾರಂಭಿಸಬೇಕು’ ಎಂದು ಹೊನ್ನಾಲಗನದೊಡ್ಡಿ ಗ್ರಾಮಸ್ಥ ಶೇಖರ್ ಒತ್ತಾಯಿಸಿದರು.
₹2 ಕೋಟಿ ಮೊತ್ತದ ಕಾಮಗಾರಿ
ನಾರಾಯಣಪುರ ಗ್ರಾಮದ ಅಂಬಿಗನಹಳ್ಳದಿಂದ ದೊಡ್ಡ ಕುರುಬರಹಳ್ಳಿವರೆಗಿನ ಈ ನಾಲೆಯನ್ನು ₹2 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. 2023ರಲ್ಲಿ ಆರಂಭವಾಗಿದ್ದ ಕಾಮಗಾರಿ 2024ರಲ್ಲಿ ಮುಗಿಯಬೇಕಿತ್ತು. ಆದರೆ, ವಿವಿಧ ಕಾರಣಗಳಿಗಾಗಿ ಅವಧಿ ಮುಗಿದರೂ ಪೂರ್ಣಗೊಂಡಿಲ್ಲ. ಈ ಭಾಗದ ಕೃಷಿ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸುವುದಕ್ಕಾಗಿ ನಿರ್ಮಿಸುತ್ತಿರುವ ನಾಲೆಯಿಂದ ನಾರಾಯಣಪುರ, ಹೊನ್ನಾಗಲದೊಡ್ಡಿ, ಕಡಸಿಕೊಪ್ಪ, ಸೋಟ್ಟೆನಹಳ್ಳಿ, ದೊಡ್ಡ ಕುರುಬಹಳ್ಳಿ, ಚಿಕ್ಕಕುರುಬಹಳ್ಳಿ ಸೇರಿದಂತೆ ಈ ಭಾಗದ ಹಲವು ಗ್ರಾಮಗಳಿಗೆ ಅನುಕೂಲವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿರುವ ಕುರಿತು ಕೂಡಲೇ ಪರಿಶೀಲನೆ ನಡೆಸಿ, ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲು ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚನೆ ನೀಡಲಾಗುವುದುಕೊಟ್ರೇಶ್,ಕಾರ್ಯನಿರ್ವಾಹಕ ಎಂಜಿನಿಯರ್, ಕಾವೇರಿ ನೀರಾವರಿ ನಿಗಮ, ಬೆಂಗಳೂರು ದಕ್ಷಿಣ ಜಿಲ್ಲೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.