
ಹಾರೋಹಳ್ಳಿ: ಹಾರೋಹಳ್ಳಿಗೆ ಕುಡಿಯುವ ನೀರು ಪೂರೈಸುತ್ತಿರುವ ಜಲಮಂಡಳಿಗೆ ಪಟ್ಟಣ ಪಂಚಾಯಿತಿ ₹1.34 ಕೋಟಿ ನೀರಿನ ಶುಲ್ಕ ಬಾಕಿ ಉಳಿಸಿಕೊಂಡಿದೆ. ಬಾಕಿ ವಸೂಲಾಗದಿರುವುದು ಜಲಮಂಡಳಿಗೆ ತಲೆಬೇನೆ ತಂದಿದೆ.
ಜಲಮಂಡಳಿಯು ಹಾರೋಹಳ್ಳಿ ಪಟ್ಟಣದಲ್ಲಿ 1.50 ದಶಲಕ್ಷ ಲೀಟರ್ ಶುದ್ಧ ನೀರನ್ನು ಸರಬರಾಜು ಮಾಡುತ್ತಿದೆ. ಪಟ್ಟಣದಲ್ಲಿ 2,600 ಗೃಹ ಸಂಪರ್ಕಗಳಿದ್ದು ಪಟ್ಟಣ ಪಂಚಾಯಿತಿ ವರ್ಷಗಳಿಂದ ನೀರಿನ ಶುಲ್ಕ ಪಾವತಿಸದೆ ಬಾಕಿ ಉಳಿಸಿಕೊಂಡಿದೆ.
ಹಾರೋಹಳ್ಳಿಯ 2,600 ನೀರಿನ ಸಂಪರ್ಕಗಳಿಂದ ಬಾಕಿ ನೀರಿನ ಶುಲ್ಕ ₹1.28 ಕೋಟಿಯಷ್ಟಿದೆ.
₹2.56 ಲಕ್ಷ ವಾರ್ಷಿಕ ಬಡ್ಡಿ ವಿಧಿಸಲಾಗಿದೆ. ಒಟ್ಟು ₹1.34 ಕೋಟಿ ಶುಲ್ಕ ಪಾವತಿಸಬೇಕಿದೆ. ಬಾಕಿ ಪಾವತಿಸುವಂತೆ ಪಟ್ಟಣ ಪಂಚಾಯಿತಿಗೆ ನೋಟಿಸ್ ಜಾರಿ ಮಾಡಲಾಗಿದೆ. ಹಲವು ತಿಂಗಳಿಂದ ಸಮಯಾವಕಾಶ ಕೋರುತ್ತಿರುವ ಪಟ್ಟಣ ಪಂಚಾಯಿತಿ ಇದೂವರೆಗೂ ಬಾಕಿ ಪಾವತಿಸಿಲ್ಲ ಎಂದು ಜಲಮಂಡಳಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಒಂದೇ ಟ್ಯಾಂಕ್:ಸುಮಾರು 30ಸಾವಿರಕ್ಕೂ ಅಧಿಕ ಜನಸಂಖ್ಯೆ ಇರುವ ಇಡೀ ಪಟ್ಟಣಕ್ಕೆ ಒಂದೇ ಒಂದು ಕಾವೇರಿ ನೀರಿನ ಟ್ಯಾಂಕ್ ಇದೆ. ಟ್ಯಾಂಕ್ ತುಂಬಿದ ನಂತರ ಎಲ್ಲ ಕಡೆಯೂ ನೀರು ಬಿಡಬೇಕು. ಟ್ಯಾಂಕ್ ಕೂಡ ಸರಿಯಾಗಿ ತುಂಬಿಸುವುದಿಲ್ಲ. ಪ್ರತಿ ವಾರ್ಡ್ ನಲ್ಲಿ 2-3 ದಿನಕ್ಕೆ ನೀರು ಬಿಡಲಾಗುತ್ತಿದೆ. ಆದರೆ, ನೀರು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿಲ್ಲ ಎಂಬುದು ಸಾರ್ವಜನಿಕರ ಅಳಲು.
ಜನರ ಬಳಿ ನೀರಿನ ಕಂದಾಯ ವಸೂಲಿ: ನಿಗದಿತ ಅವಧಿಯಲ್ಲಿ ಜನರ ಬಳಿ ನೀರಿನ ಕಂದಾಯ ವಸೂಲಿ ಮಾಡಲಾಗುತ್ತಿದೆ. ಆದರೆ, ಜಲಮಂಡಳಿಗೆ ಪಾವತಿ ಮಾಡದೇ ಇರುವುದು ಏಕೆಂದು ತಿಳಿಯುತ್ತಿಲ್ಲ. ಇದರಿಂದ ಸರಿಯಾದ ಪ್ರಮಾಣದಲ್ಲಿ ನೀರು ಸರಬರಾಜು ಆಗುತ್ತಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.
ಬೇಸಿಗೆ ಮುನ್ನವೇ ನೀರಿಗೆ ಹಾಹಾಕಾರ: ಪಟ್ಟಣದ ಕೆಲವು ವಾರ್ಡ್ ಗಳಲ್ಲಿ ಬೇಸಿಗೆ ಮುನ್ನವೇ ನೀರಿಗೆ ಹಾಹಾಕಾರ ಉಲ್ಬಣಿಸಿದೆ. ಪಟ್ಟಣ ಪಂಚಾಯಿತಿ ನಿರ್ಲಕ್ಷ್ಯವಹಿಸಿದೆ. ವಾರ್ಡ್‌ಗಳಲ್ಲಿ ಕುಡಿವ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ಕೈಗೊಳ್ಳಬೇಕು. ಗಂಭೀರವಿರುವ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡಬೇಕು. ಅಗತ್ಯ ಬಿದ್ದರೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂಬುವುದು ಸಾರ್ವಜನಿಕರ ಒತ್ತಾಸೆ.
ಬಾಕಿ ನೀರಿನ ಶುಲ್ಕವನ್ನು ಪಾವತಿಸುವಂತೆ ಹಾರೋಹಳ್ಳಿ ಪಟ್ಟಣ ಪಂಚಾಯತ್ ಗೆ ನೋಟಿಸ್ ನೀಡಿಲಾಗಿದೆ ಇದೂವರೆಗೂ ಪಾವತಿಸಿಲ್ಲ– ಸುಹಾಸ್, ಕಾರ್ಯನಿರ್ವಾಹಕ ಅಭಿಯತರ, ಬೆಂಗಳೂರು ಜಲ ಮಂಡಳಿ, ಹಾರೋಹಳ್ಳಿ ಘಟಕ
ಜನರು ಬಿಲ್ ಪಾವತಿಸಿಲ್ಲ ಎಂದು ನೀರು ಸರಬರಾಜು ನಿಲ್ಲಿಸಿಲ್ಲ. ಜಲ ಮಂಡಳಿಗೆ ತಿಂಗಳಿಗೆ ಇಂತಿಷ್ಟು ಎಂದು ಪಾವತಿಸಲಾಗುತ್ತಿದೆ.ಶ್ವೇತಾಬಾಯಿ, ಪುರಸಭೆ ಮುಖ್ಯಾಧಿಕಾರಿ, ಹಾರೋಹಳ್ಳಿ
ನೀರಿನ ಸಮಸ್ಯೆ ಪರಿಹಾರಕ್ಕೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ವಿಫಲರಾಗಿದ್ದಾರೆ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಪಟ್ಟಣ ಪಂಚಾಯಿತಿಯಲ್ಲಿ ಸಾರ್ವಜನಿಕರ ಹಿತದಷ್ಟಿಯಿಂದ ಕುಡಿವ ನೀರಿನ ಸಮಸ್ಯಯ ಬಗೆಹರಿಸುವ ಕೆಲಸ ಮಾಡಬೇಕು.ಕೋಟೆ ಕುಮಾರ್ ಹಾರೋಹಳ್ಳಿ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.