ADVERTISEMENT

ಜನಾಂಗ ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ: ಶಾಸಕ ಎಚ್‌.ಸಿ ಬಾಲಕೃಷ್ಣ

ಜನರ ಬಯಕೆಯಂತೆ ಮರು ಸಮೀಕ್ಷೆ ನಡೆಯಲಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2025, 12:29 IST
Last Updated 18 ಏಪ್ರಿಲ್ 2025, 12:29 IST
ಎಚ್‌.ಸಿ. ಬಾಲಕೃಷ್ಣ, ಶಾಸಕ
ಎಚ್‌.ಸಿ. ಬಾಲಕೃಷ್ಣ, ಶಾಸಕ   

ಬಿಡದಿ (ರಾಮನಗರ): ‘ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ (ಜಾತಿಗಣತಿ) ಬಗ್ಗೆ ಜನರಲ್ಲಿರುವ ಗೊಂದಲ ನಿವಾರಣೆಯಾಗಬೇಕು. ವಿರೋಧ ಪಕ್ಷದವರ ಆರೋಪಗಳಿಗೆ ತೆರೆ ಎಳೆಯಬೇಕು. ಹಾಗಾಗಿ, ಜನರ ಬಯಕೆಯಂತೆ ಮರು ಸಮೀಕ್ಷೆ ಮಾಡಬೇಕು ಎಂದು ಉಪ ಮುಖ್ಯಮಂತ್ರಿ ಮತ್ತು ಸಚಿವರಿಗೆ ಒಕ್ಕಲಿಗ ಜನಪ್ರತಿನಿಧಿಗಳ ಸಭೆಯಲ್ಲಿ ಮನವಿ ಮಾಡಿದ್ದೇವೆ’ ಎಂದು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಸಮೀಕ್ಷೆ ಸರಿಯಾಗಿದೆ ಎಂದು ನಾವೂ ಅಂದುಕೊಂಡಿದ್ದೆವು. ಇದೀಗ ವಿರೋಧ ವ್ಯಕ್ತವಾಗುತ್ತಿದೆ. ನಮ್ಮ ವಿರೋಧಿಗಳು ಅದನ್ನೇ ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಮರು ಸಮೀಕ್ಷೆಯಿಂದ ತಪ್ಪಾಗುವುದಿಲ್ಲ. ಹಾಗಾಗಿ, ಮುಖ್ಯಮಂತ್ರಿಯನ್ನು ಇದಕ್ಕೆ ಒಪ್ಪಿಸಿ ಎಂದು ಮನವಿ ಮಾಡಿದ್ದೇವೆ’ ಎಂದರು.

‘ನಮ್ಮ ಜನಾಂಗದವರನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಶಾಸಕ ಮತ್ತು ಸಚಿವ ಸ್ಥಾನಮಾನವನ್ನು ಜಾತಿ ಮೇಲೆಯೇ ಗುರುತಿಸುವುದರಿಂದ ನಮ್ಮ ಸಮುದಾಯದ ಹಿತ ಕಾಪಾಡಬೇಕಾಗುತ್ತದೆ. ಹೀಗಾಗಿ ಒಕ್ಕಲಿಗ ಶಾಸಕರ ಸಭೆ ಮಾಡಿದ್ದೇವೆ. ನಾವು ವರದಿ ಜಾರಿ ಮಾಡಬೇಡಿ ಎನ್ನುತ್ತಿಲ್ಲ. ಆದರೆ, ವೈಜ್ಞಾನಿಕವಾಗಿ ಮರು ಸಮೀಕ್ಷೆ ಮಾಡಿ ಜಾರಿಗೊಳಿಸಿ ಎನ್ನುತ್ತಿದ್ದೇವೆ’ ಎಂದು ತಿಳಿಸಿದರು.

ADVERTISEMENT

‘ಸರ್ಕಾರ ಜನರ ಬಯಕೆಯಂತೆ ಕೆಲಸ ಮಾಡಬೇಕು. ಜನಗಣತಿ ವಿಷಯದಲ್ಲಿ ಜನ ಮರು ಸಮೀಕ್ಷೆ ಬಯಸುತ್ತಿದ್ದಾರೆ. ಜನರ ಬಯಕೆಗೆ ಮನ್ನಣೆ ಕೊಡಿ ಎಂದು ನಾವು ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದೇವೆ. ಮರು ಸಮೀಕ್ಷೆ ನಡೆದು ಸರಿಯಾದ ಅಂಕಿಅಂಶಗಳು ಹೊರಗೆ ಬಂದರೆ ಗೊಂದಲ ನಿವಾರಣೆಯಾಗಲಿದೆ’ ಎಂದು ಹೇಳಿದರು.

‘ಜಾತಿಗಣತಿ ಅಲ್ಲ, ದ್ವೇಷದ ಗಣತಿ’ ಎಂಬ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರ ಟೀಕೆಗೆ ಪ್ರತಿಕ್ರಿಯಿಸಿದ ಬಾಲಕೃಷ್ಣ, ‘ಅವರು ಏನೇ ಮಾತನಾಡಿದರೂ ರಾಜಕೀಯವಾಗಿಯೇ ಮಾತನಾಡುತ್ತಾರೆ. ಅವರೇ ಮುಖ್ಯಮಂತ್ರಿಯಾಗಿದ್ದಾಗ ಈ ವಿಷಯಕ್ಕೆ ತೆರೆ ಎಳೆಯಬಹುದಿತ್ತು. ಸಿಎಂ ಮತ್ತು ಡಿಸಿಎಂ ಅವರನ್ನು ಟಾರ್ಗೆಟ್ ಮಾಡುವ ಅವರ ಮಾತುಗಳು ರಾಜಕೀಯ ಪ್ರೇರಿತವೆ. ಅದಕ್ಕೆ ಮಹತ್ವ ಕೊಡುವ ಅಗತ್ಯವಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.