ADVERTISEMENT

ಬಿಜೆಪಿಯಲ್ಲಿ ಗಂಡಸರಿದ್ದರೆ ರಾಜ್ಯದ ತೆರಿಗೆ ಪಾಲಿಗೆ ದನಿ ಎತ್ತಲಿ: ಬಾಲಕೃಷ್ಣ

ಟಿ.ಎ, ಡಿ.ಎ.ಗಾಗಿ ದೆಹಲಿಗೆ ಹೋಗುವ ಬಿಜೆಪಿ ಸಚಿವರು, ಸಂಸದರು ಕೇವಲ ಷೋ ಪೀಸ್‌ಗಳು

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2024, 12:42 IST
Last Updated 5 ಫೆಬ್ರುವರಿ 2024, 12:42 IST
   

ರಾಮನಗರ: ‘ನಮ್ಮ ಪಾಲಿನ ಅನುದಾನಕ್ಕಾಗಿ ಕಾಂಗ್ರೆಸ್ ನಡೆಸುತ್ತಿರುವ ಹೋರಾಟ ನೋಡಿಯಾದರೂ, ಬಿಜೆಪಿಯಲ್ಲಿ ಗಂಡಸರಿದ್ದರೆ ಅನ್ಯಾಯದ ವಿರುದ್ಧ ದನಿ ಎತ್ತಲಿ. ಬಿಜೆಪಿ ಸಚಿವರು ಹಾಗೂ ಸಂಸದರು, ದೆಹಲಿಗೆ ಹೋಗಿ ಟಿ.ಎ ಮತ್ತು ಡಿ.ಎ ತಗೊಂಡು ಬರ್ತಾರಷ್ಟೆ. ಇವರೆಲ್ಲಾ ಷೋ ಪೀಸ್‌ಗಳು. ತಮ್ಮ ಹಕ್ಕಿಗಾಗಿ ತಮಿಳುನಾಡು ಸಂಸದರು ಹೇಗೆ ದನಿ ಎತ್ತುತ್ತಾರೆ ಎಂಬುದನ್ನು ನೋಡಿ ಕಲಿಯಲಿ’ ಎಂದು ಮಾಗಡಿ ಶಾಸಕ ಎಚ್‌.ಸಿ. ಬಾಲಕೃಷ್ಣ ವ್ಯಂಗ್ಯವಾಡಿದರು.

ತಾಲ್ಲೂಕಿನ ನಾಗರಕಲ್ಲುದೊಡ್ಡಿ ಗ್ರಾಮದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೇಂದ್ರಕ್ಕೆ ಹೆಚ್ಚು ತೆರಿಗೆ ಪಾವತಿಸುವ ದೇಶದ ಎರಡನೇ ರಾಜ್ಯ ನಮ್ಮದು. ಹೀಗಿದ್ದರೂ, ನಮಗೆ ಕೊಡಬೇಕಾದ ಅನಯದಾನ ಕೊಡುತ್ತಿಲ್ಲ. ರಾಜ್ಯದ ಬಿಜೆಪಿ ಸಚಿವರು ಮತ್ತು ಸಂಸದರಿಗೆ ಪ್ರಧಾನಿ ಮೋದಿ ಅವರ ಮುಂದೆ ನಿಲ್ಲುವುದಕ್ಕೂ ಆಗುವುದಿಲ್ಲ. ವೈಯಕ್ತಿಕ ವರ್ಚಸ್ಸಿಲ್ಲದ ಅವರು, ಕೇವಲ ಮೋದಿ ಹೆಸರಲ್ಲಿ ಗೆಲ್ಲುತ್ತಾರೆ’ ಎಂದು ವಾಗ್ದಾಳಿ ನಡೆಸಿದರು.

‘ಬಿಜೆಪಿಯವರು ದನಿ ಕಳೆದುಕೊಂಡಿರುವುದರಿಂದ ಅನುದಾನಕ್ಕಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಇದರ ಅರ್ಥ ಬಿಜೆಪಿಯಲ್ಲಿ ಗಂಡಸರಿಲ್ಲ ಎಂದರ್ಥ. ಅನುದಾನದ ವಿಷಯದಲ್ಲಿ ಅನ್ಯಾಯ ಸರಿಪಡಿಸದಿದ್ದರೆ ಪ್ರತ್ಯೇಕ ದೇಶದ ದನಿ ಎಳುತ್ತದೆ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿರುವುದನ್ನು, ಬಿಜೆಪಿಯವರು ತಿರುಚಿದ್ದಾರೆ. ಇಷ್ಟಕ್ಕೂ ಅವರು ಹೇಳಿರುವುದರಲ್ಲಿ ತಪ್ಪೇನಿದೆ?’ ಎಂದು ಪ್ರಶ್ನಿಸಿದರು.

ADVERTISEMENT

‘ದೇಶ ವಿಭಜನೆಯಾಗಬೇಕು ಎಂದು ಅವರು ಹೇಳಿಲ್ಲ. ದೇಶ ಒಡೆಯುವ ಉದ್ದೇಶವೂ ಹೇಳಿಕೆಯಲ್ಲಿಲ್ಲ. ದೇಶ ಕಟ್ಟಿದ್ದು ಕಾಂಗ್ರೆಸ್ ಪಕ್ಷ. ಬಿಜೆಪಿಯವರು ಈಗ ಅರಚಿಕೊಳ್ಳುತ್ತಿದ್ದಾರೆ. ನಮಗಾಗಿರುವ ಅನ್ಯಾಯಕ್ಕೆ ಹೋರಾಟ ಮಾಡಬೇಕಿದೆ. ಈ ವಿಷಯದಲ್ಲಿ ಬಿಜೆಪಿಯವರು ಬಹಿರಂಗ ಚರ್ಚೆಗೆ ಬರಲಿ’ ಎಂದು ಸವಾಲು ಹಾಕಿದರು.

‘ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿಕೂಟದಲ್ಲಿ ಸುರೇಶ್ ಅವರನ್ನು ಎದುರಿಸುವಂತಹ ಅಭ್ಯರ್ಥಿ ಇಲ್ಲ.  ಅವರ ವಿರುದ್ಧ ಮೈತ್ರಿ ತಂತ್ರ ಫಲ ನೀಡುವುದಿಲ್ಲ. ಬೇಕಿದ್ದರೆ ಎಚ್‌.ಡಿ. ಕುಮಾರಸ್ವಾಮಿ ಮತ್ತು ಸಿ.ಪಿ. ಯೋಗೇಶ್ವರ್ ಸ್ಪರ್ಧೆ ಮಾಡಲಿ. ಆನಂತರ ಮಾತನಾಡೋಣ. ಸಂಸದರು ಜನಸಾಮಾನ್ಯರ ಜೊತೆ ಬೆರೆತು ಹೇಗೆ ಕೆಲಸ ಮಾಡಬಹುದು ಎಂಬುದನ್ನು ಸುರೇಶ್ ತೋರಿಸಿ ಕೊಟ್ಟಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.