ADVERTISEMENT

ಭಗವದ್ಗೀತೆಯಿಂದ ಮಕ್ಕಳ ಹೊಟ್ಟೆ ತುಂಬುತ್ತದೆಯೇ?: ಎಚ್‌ಡಿ ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2022, 9:28 IST
Last Updated 19 ಮಾರ್ಚ್ 2022, 9:28 IST
ಎಚ್.ಡಿ. ಕುಮಾರಸ್ವಾಮಿ
ಎಚ್.ಡಿ. ಕುಮಾರಸ್ವಾಮಿ   

ರಾಮನಗರ: ಶಾಲೆಗಳಲ್ಲಿ ಭಗವದ್ಗೀತೆ ಪಾಠ ಮಾಡಿದರೆ ಅದರಿಂದ ಮಕ್ಕಳ ಹೊಟ್ಟೆ ತುಂಬುತ್ತದೆಯೇ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.

ಶಾಲೆಗಳಲ್ಲಿ ಭಗವದ್ಗೀತೆ ‌ಬೋಧನೆಗೆ ಮುಂದಾಗಿರುವ ಸರ್ಕಾರದ‌ ನಿರ್ಧಾರದ ಕುರಿತು ಚನ್ನಪಟ್ಟಣದ ಕದರಮಂಗಲದಲ್ಲಿ ಶನಿವಾರ ಅವರು ಪತ್ರಕರ್ತರಿಗೆ ಪ್ರತಿಕ್ರಿಯೆ ನೀಡಿದರು.

ಬಿಜೆಪಿಯ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಜನರ ಸಮಸ್ಯೆ ಬಗ್ಗೆ ಅರಿವಿಲ್ಲ. ಅದನ್ನು ಬಗೆಹರಿಸುವುದೂ ಅವರಿಗೆ ಬೇಕಿಲ್ಲ. ಸರ್ಕಾರದ ಮುಂದೆ ಟನ್ ಗಟ್ಟಲೆ‌ ಸಮಸ್ಯೆಗಳಿವೆ. ಮೊದಲು ಅದನ್ನು ಬಗೆಹರಿಸಲಿ ಎಂದರು.

ADVERTISEMENT

ಅಧಿಕಾರಕ್ಕಾಗಿ ಅಮಾಯಕರನ್ನು ಭಾವನಾತ್ಮಕವಾಗಿ ದಾರಿ‌ ತಪ್ಪಿಸುತ್ತಿದ್ದಾರೆ. ಅಂತಹ ವಿಚಾರಗಳೇ ದೊಡ್ಡದಾಗಿ ಪ್ರಚಾರ ಆಗುತ್ತಿವೆ.‌ ಇದಕ್ಕೂ ಒಂದು ಅಂತಿಮ ಎಂಬುದು ಇರುತ್ತದೆ. ಯಾವುದೂ ಶಾಶ್ವತ ಅಲ್ಲ ಎಂದರು.

ತುಮಕೂರು‌ ಜಿಲ್ಲೆಯ ಪಾವಗಡದಲ್ಲಿ ನಡೆದ ಬಸ್ ಅಪಘಾತಕ್ಕೆ ಸಂಬಂಧಿಸಿದಂತೆ ಮಾಹಿತಿ‌ ಪಡೆದು ಸರ್ಕಾರ ಮೃತರ‌ ಕುಟುಂಬಗಳಿಗೆ ಪರಿಹಾರ ಒದಗಿಸಬೇಕು. ಬಸ್ ಅವಘಡದಲ್ಲಿ ಯಾರ ತಪ್ಪಿದೆ ಎಂಬುದನ್ನು ಪರಿಶೀಲಿಸಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು.

ರಾಜ್ಯದಲ್ಲಿ ಸಾರಿಗೆ ವ್ಯವಸ್ಥೆ ಉತ್ತಮವಾಗಿದ್ದರೆ ಇಂತಹ ಅನಾಹುತ ನಡೆಯುತ್ತಿರಲಿಲ್ಲ. ಕೋವಿಡ್ ಬಳಿಕ ಸಾರಿಗೆ ಇಲಾಖೆ ಕೆಟ್ಟ ಪರಿಸ್ಥಿತಿ ಎದುರಿಸುತ್ತಿದೆ. ಯಾರೋ ಪ್ರತಿಭಟನೆ ಮಾಡಿಸಿ ಸಾರಿಗೆ ನೌಕರರನ್ನು ಬೀದಿಪಾಲು‌ ಮಾಡಿದರು. ನೌಕರರು ಈಗ ಕಣ್ಣೀರು ಹಾಕುತ್ತಿದ್ದಾರೆ. ಯಾರೋ ಮಾಡಿದ ತಪ್ಪಿಗೆ ಸಾರ್ವಜನಿಕರಿಗೆ ಅನಾನುಕೂಲ ಆಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.