ADVERTISEMENT

ರೈತರು ವಿರೋಧಿಸಿದ್ದಕ್ಕೆ ಭೂ ಸ್ವಾಧೀನ ಕೈ ಬಿಟ್ಟಿದ್ದೆ: ಡಿಸಿಎಂಗೆ HDK ತಿರುಗೇಟು

ಜಿಬಿಐಟಿ ವಿರುದ್ಧದ ಜೆಡಿಎಸ್ ಪ್ರತಿಭಟನೆ; ಡಿಸಿಎಂ ಆರೋಪಕ್ಕೆ ಎಚ್‌ಡಿಕೆ ತಿರುಗೇಟು; ಪ್ರತಿಭಟನೆಯಲ್ಲಿ ಪಕ್ಷದ ನಾಯಕರು ಭಾಗಿ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 7:19 IST
Last Updated 29 ಸೆಪ್ಟೆಂಬರ್ 2025, 7:19 IST
ರಾಮನಗರ ತಾಲ್ಲೂಕಿನ ಬಿಡದಿಯಲ್ಲಿ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಜಿಬಿಐಟಿ) ಯೋಜನೆ ವಿರೋಧಿಸಿ, ಭೈರಮಂಗಲದಲ್ಲಿ ಭಾನುವಾರ ಜೆಡಿಎಸ್ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆ ಉದ್ದೇಶಿಸಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, ನವದೆಹಲಿಯಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದರು
ರಾಮನಗರ ತಾಲ್ಲೂಕಿನ ಬಿಡದಿಯಲ್ಲಿ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಜಿಬಿಐಟಿ) ಯೋಜನೆ ವಿರೋಧಿಸಿ, ಭೈರಮಂಗಲದಲ್ಲಿ ಭಾನುವಾರ ಜೆಡಿಎಸ್ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆ ಉದ್ದೇಶಿಸಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, ನವದೆಹಲಿಯಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದರು   

ರಾಮನಗರ: ‘ಬಿಡದಿ ಸಮಗ್ರ ಉಪನಗರ ಯೋಜನೆಯನ್ನು ನಾನು ರೂಪಿಸಿದಾಗ, ಅದರ ಕುರಿತು ರೈತರ ಜೊತೆ ನಾಲ್ಕೈದು ಸಭೆ ನಡೆಸಿದ್ದೆ. ರೈತರು ವಿರೋಧ ಮಾಡಿದ್ದರಿಂದ ಭೂ ಸ್ವಾಧೀನಕ್ಕೆ ಮುಂದಾಗಲಿಲ್ಲ. ರೈತರ ಭೂಮಿ ಕಿತ್ತುಕೊಂಡು ಅಭಿವೃದ್ಧಿ ಮಾಡುತ್ತೇನೆ ಎಂದು ನಾನು ಸುಳ್ಳು ಹೇಳಿರಲಿಲ್ಲ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ತಿರುಗೇಟು ನೀಡಿದರು.

ಜಿಬಿಐಟಿ ವಿರೋಧಿಸಿ ಹೋಬಳಿಯ ಭೈರಮಂಗಲದಲ್ಲಿ ನಡೆಯುತ್ತಿರುವ ರೈತರ ಅನಿರ್ದಿಷ್ಟಾವಧಿ ಧರಣಿ ಬೆಂಬಲಿಸಿ ಜೆಡಿಎಸ್ ಭಾನುವಾರ ಹಮ್ಮಿಕೊಂಡಿದ್ದ ‘ಬಿಡದಿ ಉಳಿಸಿ, ಜಿಬಿಐಟಿ ನಿಲ್ಲಿಸಿ’ ಪ್ರತಿಭಟನಾ ಸಭೆಯಲ್ಲಿ ನವದೆಹಲಿಯಿಂದಲೇ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ಭಾಷಣದುದ್ದಕ್ಕೂ ಡಿಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.

‘ಯೋಜನಾ ಪ್ರದೇಶದಲ್ಲಿ ಶೇ 40ರಷ್ಟು ಭೂಮಿಯನ್ನು ರೈತರೇ ಉಳಿಸಿಕೊಳ್ಲಲು ನಾನು ಅವಕಾಶ ನೀಡಿದ್ದೆ. ನಾನೆಂದೂ ರೈತರಿಗೆ ಅನ್ಯಾಯ ಮಾಡಿಲ್ಲ. ಡಿಕೆಶಿ ಭೂಮಿ ಕಬಳಿಸಲು ಅಧಿಕಾರಿಗಳು ಸಹ ಕುಮ್ಮಕ್ಕು ನೀಡಿ ಜನರಿಗೆ ಸುಳ್ಳು ಅಂಕಿಅಂಶ ಹೇಳುತ್ತಿದ್ದಾರೆ. 9 ಸಾವಿರ ಎಕರೆಯಲ್ಲಿ ಮೂರ್ನಾಲ್ಕು ಸಾವಿರ ಎಕರೆ ಸರ್ಕಾರಿ ಭೂಮಿ ಇದೆ ಎಂದವರು, ಈಗ 700 ಎಕರೆ ಮಾತ್ರ ಎಂದು ತೋರಿಸುವ ಮೂಲಕ ಆ ಭೂಮಿ ಲೂಟಿ ಹೊಡೆಯಲು ಮುಂದಾಗಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಉಪನಗರ ಯೋಜನೆಗೆ ರೈತರು ಭೂಮಿಯನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ನಾನೂ ನಿಮ್ಮ ಹೋರಾಟಕ್ಕೆ ಬೆಂಬಲ ನೀಡುತ್ತೇನೆ. ಖುದ್ದಾಗಿ ನಾನೇ ಬಂದು ಹೋರಾಟದಲ್ಲಿ ಭಾಗವಹಿಸುತ್ತೇನೆ. ರೈತರಿಗಾಗಿ ನನ್ನ ಆರೋಗ್ಯದ ಹಂಗು ತೊರೆದು ಹೋರಾಡುತ್ತೇನೆ. ಅದ್ಯಾರು ಬಂದು ಭೂ ಸ್ವಾ ಧೀನ ಮಾಡಿಕೊಳ್ಳುತ್ತಾರೋ ನೋಡೋಣ’ ಎಂದು ಸರ್ಕಾರಕ್ಕೆ ಸವಾಲು ಹಾಕಿದರು.

‘ಭೂಮಿ ಕೊಡಲು ನಿರಾಕರಿಸುತ್ತಿರುವ ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಅಧಿಕಾರಿಳೇ ಮತ್ತು ಪೊಲೀಸರೇ ನೀವು ತಪ್ಪು ಮಾಡುತ್ತಿದ್ದೀರಿ. ಮುಂದೆ ಇದರ ಪ್ರತಿಫಲವನ್ನು ನೀವು ಪ್ರತಿಫಲ ಅನುಭವಿಸಬೇಕಾಗುತ್ತದೆ. ತಪ್ಪಿಗಾಗಿ ಜೈಲಿಗೂ ಹೋಗಬೇಕಾಗುತ್ತದೆ. ಸ್ಥಳೀಯರಿಗೆ ರಕ್ಷಣೆ ನೀಡುವಲ್ಲಿ ಸಣ್ಣ ಲೋಪವಾದರೂ ನಾನು ಸುಮ್ಮನಿರುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಜವರಾಯಿ ಗೌಡ, ಮಾಜಿ ಸದಸ್ಯ ರಮೇಶ್ ಗೌಡ, ಚನ್ನಪಟ್ಟಣ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಯಮುತ್ತು, ರಾಮನಗರ ಅಧ್ಯಕ್ಷ ಶಿವಲಿಂಗಯ್ಯ, ಭೈರಮಂಗಲ ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ರೈತರ ಭೂ ಹಿತರಕ್ಷಣಾ ಸಂಘದ ರಾಮಯ್ಯ, ಪ್ರಕಾಶ್, ಶೀನಪ್ಪ ರೆಡ್ಡಿ, ಪ್ರಕಾಶ್, ಮಂಡಲಹಳ್ಳಿ ನಾಗರಾಜು, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಗೋಪಾಲ್‌ ಹಾಗೂ ಇತರರು ಇದ್ದರು.

ರಾಮನಗರ ತಾಲ್ಲೂಕಿನ ಬಿಡದಿಯಲ್ಲಿ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಜಿಬಿಐಟಿ) ಯೋಜನೆ ವಿರೋಧಿಸಿ ಭೈರಮಂಗಲದಲ್ಲಿ ಭಾನುವಾರ ಜೆಡಿಎಸ್ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಗೆ ಪಕ್ಷದ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಇತರ ನಾಯಕರೊಂದಿಗೆ ಎತ್ತಿನಗಾಡಿಯಲ್ಲಿ ಬಂದರು. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್ ಬಾಬು ಮಾಜಿ ಶಾಸಕ ಎ. ಮಂಜುನಾಥ್ ಹಾಗೂ ಇತರು ಇದ್ದಾರೆ
ದಬ್ಬಾಳಿಕೆ ಹೆಚ್ಚಿಸಿರುವ ಡಿ.ಕೆ. ಶಿವಕುಮಾರ್ ಅವರಿಗೆ ಹಣ ಮಾಡುವುದೇ ಕಾಯಕವಾಗಿದೆ. ಅಧಿಕಾರವಿದ್ದಾಗ ತಗ್ಗಿ ‌ಬಗ್ಗಿ ನಡೆಯಬೇಕು. ರೈತರ ಸಮಸ್ಯೆಗಳಿಗೆ ದನಿಯಾಗಬೇಕು. ಇಲ್ಲದಿದ್ದರೆ ಜನ ನಿಮ್ಮನ್ನು ಅಧಿಕಾರದಿಂದ ಇಳಿಸುವ ದಿನ ದೂರವಿಲ್ಲ
– ಸಿ.ಬಿ. ಸುರೇಶ್ ಬಾಬು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ
ಚಳಿಗಾಲದ ಅಧಿವೇಶನದಲ್ಲಿ ಬಿಡದಿ ಟೌನ್‌ಶಿಪ್‌ ಭೂ ಸ್ವಾಧೀನ ವಿಷಯ ಪ್ರಸ್ತಾಪಲಾಗುವುದು. ರೈತರ ಭೂಮಿ ಉಳಿಸುವುದಕ್ಕಾಗಿ ನಮ್ಮ ಪಕ್ಷವು ಸದನದ ಒಳಗೆ ಮತ್ತು ಹೊರಗೂ ಹೋರಾಟ ನಡೆಸಲಿದೆ
– ಟಿ.ಎ. ಶರವಣ ವಿಧಾನ ಪರಿಷತ್ ಸದಸ್ಯ
ಭೂ ಸ್ವಾಧೀನ ರದ್ದುಪಡಿಸದಿದ್ದರೆ ಇಲ್ಲಿನ ಹೋರಾಟವು ದೇವನಹಳ್ಳಿ ಹೋರಾಟಕ್ಕಿಂತಲೂ ತೀವ್ರವಾಗಲಿದೆ. ರೈತರ ಮಕ್ಕಳೇ ಆಗಿರುವ ಸಿಎಂ ಡಿಸಿಎಂ ಹಾಗೂ ಶಾಸಕ ಬಾಲಕೃಷ್ಣ ಅವರೇ ರೈತರ ಭೂಮಿಯನ್ನು ಕಿತ್ತುಕೊಳ್ಳದೆ ಯೋಜನೆ ಕೈ ಬಿಡಿ
– ಡಾ. ಕೆ. ಅನ್ನದಾನಿ ಜೆಡಿಎಸ್ ಮಾಜಿ ಶಾಸಕ

‘ಹೋಟೆಲ್ ಮಾಲೀಕ ಮಾಜಿ ಸೈನಿಕನಿಂದ ಭೂಮಿ ಕಿತ್ತುಕೊಂಡ ಡಿಕೆಶಿ’

‘ಬಿಲ್ಲಕೆಂಪನಹಳ್ಳಿ ಗ್ರಾಮದ ಕೃಷ್ಣಮೂರ್ತಿ ಎಂಬ ವ್ಯಕ್ತಿ ಬೆಂಗಳೂರು-ಮೈಸೂರು ಮುಖ್ಯರಸ್ತೆಯಲ್ಲಿ ಸಾಲ ಮಾಡಿ ಕಟ್ಟಿಸಿದ್ದ ಹೋಟೆಲ್ ಖಾಲಿ ಮಾಡಿಸಿದ ಡಿಕೆಶಿ ಅಲ್ಲಿ ಶಾಲಾ–ಕಾಲೇಜು ಕಟ್ಟಡ ಕಟ್ಟಿಕೊಂಡಿದ್ದಾರೆ. ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ರಾಮಸ್ವಾಮಿ ಎಂಬುವರ ಭೂಮಿ ಮೇಲೂ ಕಣ್ಣಾಕಿದರು. ಕೊಡಲು ನಿರಾಕರಿಸಿದಾಗ ಅವರ ಪುತ್ರಿಯನ್ನು ಅಪಹರಿಸಿ ಜಮೀನು ಬರೆಯಿಸಿಕೊಂಡರು. ಇಂತಹ ನೀಚ ಕೆಲಸ ನಾವು ಮಾಡಿದ್ದೇವೆಯೇ?’ ಎಂದು ಡಿಕೆಶಿ ವಿರುದ್ದ ಕುಮಾರಸ್ವಾಮಿ ಕಿಡಿಕಾರಿದರು. ‘ನೈಸ್ ರಸ್ತೆಯ ಹೊಸಕೆರೆಹಳ್ಳಿ ಸುತ್ತಮುತ್ತ ಸ್ವಾಧೀನಪಡಿಸಿಕೊಂಡಿರುವ ಭೂಮಿಯನ್ನೂ ಡಿಕೆಶಿ ಕಬಳಿಸಿದ್ದಾರೆ. ಹಿಂದೆ ಎಸ್.ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಗಿದ್ದ ಇದೇ ಶಿವಕುಮಾರ್ ಬೆಂಗಳೂರು-ಮೈಸೂರು ಎಕ್ಸ್‌ ಪ್ರೆಸ್‌ ರಸ್ತೆ ಮಾಡುತ್ತೇವೆ ಎಂದು ಭಾರೀ ಪ್ರಮಾಣ ಭೂಮಿ ಸ್ವಾಧೀನ ಮಾಡಿಕೊಂಡರು. ಅದಕ್ಕೊಂದು ಪ್ರಾಧಿಕಾರ ಮಾಡಿ ಇವರೇ ಅಧ್ಯಕ್ಷರಾದರು. ಇಪ್ಪತ್ತು ವರ್ಷವಾದರೂ ರಸ್ತೆ ನಿರ್ಮಿಸಲಿಲ್ಲ. ಆ ಭೂಮಿಯನ್ನು ನುಂಗಲು ಹೊರಟಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರು-ಮೈಸೂರು ನೂತನ ಹೆದ್ದಾರಿಯನ್ನು ಎರಡ್ಮೂರು ವರ್ಷದಲ್ಲಿ ನಿರ್ಮಿಸಿ ಭೂಮಿ ಕಳೆದುಕೊಂಡವರಿಗೆ ಶೀಘ್ರ ಪರಿಹಾರ ನೀಡಲಾಯಿತು’ ಎಂದು ಕುಮಾರಸ್ವಾಮಿ ಹೇಳಿದರು.

‘ರೈತರು ಒಪ್ಪಿದ್ದರೆ ಬಹಿರಂಗ ಸಭೆ ಕರೆಯಿರಿ’

‘ಯೋಜನಾ ಪ್ರದೇಶದಲ್ಲಿರುವ ತಮ್ಮ ಜಮೀನಿನ ಭೂ ಸ್ವಾಧೀನದ ಪರಿಹಾರಕ್ಕೆ ಅನಿತಾ ಕುಮಾರಸ್ವಾಮಿ ಅವರು ಅರ್ಜಿ ಹಾಕಿದ್ದಾರೆ ಎಂದು ಹೇಳಿರುವ ಡಿಸಿಎಂ ಅವರೇ ಅರ್ಜಿ ಹಾಕಿರುವುದನ್ನು ಸಾಬೀತುಪಡಿಸಿದರೆ ಆ ಜಮೀನನನ್ನು ರೈತರಿಗೆ ಬಿಟ್ಟು ಕೊಡುತ್ತೇನೆ. ಯಾರೋ ಪಕ್ಕದಲ್ಲಿ ನಿಂತುಕೊಂಡು ಕಿವಿ ಊದುತ್ತಾರೆ ಅಂತ ಬಾಯಿಗೆ ಬಂದಂತೆ ಮಾತನಾಡಬೇಡಿ. ಯೋಜನೆಗೆ ರೈತರು ಒಪ್ಪಿದ್ದಾರೆ ಎನ್ನುವ ನೀವು ಆ ರೈತರನ್ನು ಬಹಿರಂಗ ವೇದಿಕೆ ಕರೆದು ಚರ್ಚೆ ಮಾಡಿ. ಆಗ ಎಷ್ಟು ಜನ ಪರ ಹಾಗೂ ವಿರೋಧ ಇದ್ದಾರೆ ಎಂಬುದು ಗೊತ್ತಾಗುತ್ತದೆ. ರೈತರ ಭೂಮಿ ಕಬಳಿಸುತ್ತಿರುವ ರಾಕ್ಷಸರ ವಿರುದ್ದದ ರೈತರ ಹೋರಾಟಕ್ಕೆ ನಾನು ಜೊತೆಗಾಗಿ ನಿಲ್ಲುವೆ’ ಎಂದು ನಿಖಿಲ್ ಕುಮಾರಸ್ವಾಮಿ ಭರವಸೆ ನೀಡಿದರು.

‘ಬಾಲಕೃಷ್ಣ ಎಲ್ಲಿದ್ದಿಯಪ್ಪಾ? ರೈತ ಸಮಸ್ಯೆ ಕೇಳಪ್ಪ’

‘ಯೋಜನೆ ಕುರಿತು ಸ್ಥಳೀಯರ ಅಭಿಪ್ರಾಯ ಕೇಳದ ಶಾಸಕ ಎಚ್.ಸಿ. ಬಾಲಕೃಷ್ಣ ಎಲ್ಲಿದ್ದಿಯಪ್ಪಾ? ಇನ್ನಾದರೂ ರೈತರ ಸಮಸ್ಯೆ ಕೇಳಪ್ಪ. ರೈತರನ್ನು ನಕಲಿ ಹಾಗೂ ವಸೂಲಿ ಗಿರಾಕಿಗಳು ಎನ್ನುವ ಡಿಸಿಎಂ ಅವರೇ ಇಷ್ಟು ಸಂಖ್ಯೆಯಲ್ಲಿ ಇಲ್ಲಿ ಸೇರಿರುವವರು ನಕಲಿ ರೈತರಾ ಎಂದು ಬಂದು ನೋಡಿ. ಮಾನ ಮರ್ಯಾದೆ ಇದ್ದರೆ ಇನ್ನಾದರೂ ರೈತರ ಸಭೆ ಮಾಡಿ. ಜಿಬಿಡಿಎಗೆ ನಿಮ್ಮ ಸಹೋದರ ಡಿ.ಕೆ. ಸುರೇಶ್ ಅವರನ್ನು ಯಾಕೆ ನಿರ್ದೇಶಕನ್ನಾಗಿ ಮಾಡಿದಿದ್ದೀರಿ? ಹಾಲಿ ಸಂಸದರನ್ನು ಯಾಕೆ ಮಾಡಲಿಲ್ಲ ಎಂಬುದಕ್ಕೆ ಉತ್ತರಿಸಿ. ನಿಮ್ಮ ಆಟ ಇನ್ನೊಂದು ವರ್ಷವಷ್ಟೇ. ಆಮೇಲೆ ನಡೆಯಲ್ಲ. ನಿಮ್ಮ ದಾದಾಗಿರಿಗೆ ನಾವು ಹೆದರಲ್ಲ. ನಾವು ತಾಳ್ಮೆ ಕಳೆದುಕೊಂಡು ಬೀದಿಗಿಳಿದಿರೆ ನೀವು ಈ ಭಾಗಕ್ಕೆ ಬರಲು ಆಗುವುದಿಲ್ಲ’ ಎಂದು ಮಾಜಿ ಶಾಸಕ ಎ. ಮಂಜುನಾಥ್ ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.