ADVERTISEMENT

ಜನರ ಓಡಾಟ: ಅಧಿಕಾರಿಗಳಿಗೆ ತಲೆ ಬಿಸಿ

ಮನೆಯಲ್ಲಿರುವಂತೆ ಕಬ್ಬಿನ ಹಾಲು ನೀಡಿ ಗೋಗೆರೆದ ಸಂಚಾರ ತಪಾಸಣಾ ತಂಡ

​ಪ್ರಜಾವಾಣಿ ವಾರ್ತೆ
Published 4 ಮೇ 2021, 4:41 IST
Last Updated 4 ಮೇ 2021, 4:41 IST
ಚನ್ನಪಟ್ಟಣ ತಾಲ್ಲೂಕಿನ ತಿಟ್ಟಮಾರನಹಳ್ಳಿ ರಾಮಮ್ಮನ ಕೆರೆ ಏರಿ ರಸ್ತೆಯಲ್ಲಿ ಸಾರ್ವಜನಿಕರನ್ನು ತಡೆದು ಅನಗತ್ಯವಾಗಿ ಓಡಾಡದಂತೆ ಬುದ್ಧಿ ಹೇಳಿದರು
ಚನ್ನಪಟ್ಟಣ ತಾಲ್ಲೂಕಿನ ತಿಟ್ಟಮಾರನಹಳ್ಳಿ ರಾಮಮ್ಮನ ಕೆರೆ ಏರಿ ರಸ್ತೆಯಲ್ಲಿ ಸಾರ್ವಜನಿಕರನ್ನು ತಡೆದು ಅನಗತ್ಯವಾಗಿ ಓಡಾಡದಂತೆ ಬುದ್ಧಿ ಹೇಳಿದರು   

ಚನ್ನಪಟ್ಟಣ: ಲಾಕ್‌ಡೌನ್ ನಡುವೆಯೂ ಅನಗತ್ಯವಾಗಿ ಓಡಾಡುತ್ತಿರುವ ಸಾರ್ವಜನಿಕರನ್ನು ಸಂಚಾರ ತಪಾಸಣಾ ತಂಡ ತಾಲ್ಲೂಕಿನ ತಿಟ್ಟಮಾರನಹಳ್ಳಿ ರಾಮಮ್ಮನ ಕೆರೆ ಏರಿ ರಸ್ತೆಯಲ್ಲಿ ತಡೆದು ಕಬ್ಬಿನ ಹಾಲು ನೀಡಿ ವಿನೂತನವಾಗಿ ಮನವಿ ಮಾಡಿದ ಪ್ರಸಂಗ ಸೋಮವಾರ ನಡೆಯಿತು.

ತಾಲ್ಲೂಕಿನಲ್ಲಿ ಸಾರ್ವಜನಿಕರ ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಲು ಅಧಿಕಾರಿಗಳ ತಂಡ ನಾನಾ ರೀತಿಯಲ್ಲಿ ಪ್ರಯತ್ನಿಸುತ್ತಿದ್ದು, ಇಷ್ಟಿದ್ದರೂ ವಾಹನ ಸವಾರರು ಲಾಕ್‌ಡೌನ್ ಲೆಕ್ಕಿಸದೆ ಬೇಕಾಬಿಟ್ಟಿ ಓಡಾಟ ನಡೆಸುತ್ತಿದ್ದಾರೆ. ಇದನ್ನು ತಡೆಯಲು ಸಂಚಾರ ತಪಾಸಣಾ ತಂಡದ ಅಧಿಕಾರಿಗಳು ವಾಹನ ಸವಾರರನ್ನು ತಡೆದು ಕೆರೆ ಏರಿ ರಸ್ತೆಯಲ್ಲಿ ಕಬ್ಬಿನ ಹಾಲು ಮಾರಾಟ ಮಾಡುತ್ತಿದ್ದ ಅಂಗಡಿಯಿಂದ ಕಬ್ಬಿನ ಹಾಲು ಖರೀದಿಸಿ ವಾಹನ ಸವಾರರಿಗೆ ನೀಡಿ, ಮನೆಯಲ್ಲಿ ಇರುವಂತೆ ಮನವಿ ಮಾಡಿದರು.

ನಾವು ಅಧಿಕಾರಿಗಳು ಬಿಸಿಲಲ್ಲಿ ನಿಂತು ನಿಮ್ಮ ರಕ್ಷಣೆ ಮಾಡುತ್ತಿದ್ದೇವೆ. ನೀವು ಕೊರೊನಾ ಗಂಭೀರತೆ ಲೆಕ್ಕಿಸದೆ ಆರಾಮವಾಗಿ ತಿರುಗಾಟ ನಡೆಸುತ್ತಿದ್ದೀರಿ. ನಮಗಿಂತ ನಿಮಗೇ ಹೆಚ್ಚು ತಾಪ ಇದೆ. ಕಬ್ಬಿನ ಹಾಲು ಕುಡಿದು ತಂಪು ಮಾಡಿಕೊಳ್ಳಿ ಎಂದು ಹೇಳುತ್ತಾ ಅಧಿಕಾರಿಗಳು ಕಬ್ಬಿನ ಹಾಲು ವಿತರಿಸುತ್ತಿದ್ದರೆ, ವಾಹನ ಸವಾರರ ಮುಖ ಹಾಗಲಕಾಯಿ ರಸ ಕುಡಿದಂತೆ ಕಪ್ಪಿಡುತ್ತಿದ್ದುದ್ದು ಸುಳ್ಳಲ್ಲ.

ADVERTISEMENT

ಇಡೀ ತಾಲ್ಲೂಕಿನಲ್ಲಿ ಲಾಕ್‌ಡೌನ್ ಇದ್ದರೂ ಸಾರ್ವಜನಿಕರ ಓಡಾಟ ಮಾತ್ರ ನಿಂತಿಲ್ಲ. ಮಧ್ಯಾಹ್ನದ ವೇಳೆಗೆ ಪಟ್ಟಣ ಸೇರಿದಂತೆ ಎಲ್ಲಡೆ ದಿನಸಿ ಅಂಗಡಿ, ತರಕಾರಿ ಅಂಗಡಿಗಳೆಲ್ಲವೂ ಮುಚ್ಚಿದ್ದರೂ ಸಾರ್ವಜನಿಕರು ಮಾತ್ರ ಓಡಾಡುತ್ತಿದ್ದಾರೆ. ಅದೆಲ್ಲಿಗೆ ಹೋಗುತ್ತಾರೋ ತಿಳಿಯುತ್ತಿಲ್ಲ. ಕೊರೊನಾ ದಿನ ಕಳೆದಂತೆ ತೀವ್ರಗತಿಯಲ್ಲಿ ಹೆಚ್ಚುತ್ತಿದ್ದರೂ ಸಾರ್ವಜನಿಕರು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎನ್ನುವುದು ಇದರಿಂದ ಗೊತ್ತಾಗುತ್ತಿದೆ. ಮನೆಯಲ್ಲಿರಿ, ಅನಗತ್ಯವಾಗಿ ಆಚೆ ಬರಬೇಡಿ ಎಂದು ಎಷ್ಟು ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ ಎಂದು ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದರು.

ಹಾಗೆಯೇ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿಯೂ ವಾಹನಗಳ ಓಡಾಟ ಇದೆ. ಪೊಲೀಸರು ಹಲವಾರು ವಾಹನಗಳನ್ನು ತಡೆದು ದಂಡ ಹಾಕುತ್ತಿದ್ದಾರೆ. ಆದರೂ, ವಾಹನಗಳ ಓಡಾಟ ಮಾತ್ರ ನಿಂತಿಲ್ಲ. ಜನರಿಗೆ ಕೊರೊನಾ ಮಾರ್ಗಸೂಚಿ ಬಗ್ಗೆ ಯಾವುದೇ ಗಂಭೀರತೆ ಇಲ್ಲ. ಎಲ್ಲರೂ ಸೋಂಕು ತಡೆಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.‌‌

ಮೊಬೈಲ್ ಸ್ಕ್ವಾರ್ಡ್ ತಂಡದಲ್ಲಿ ಕಾರ್ಮಿಕ ಇಲಾಖಾಧಿಕಾರಿ ಮುನಿಲಿಂಗೇಗೌಡ, ಕಾರ್ಮಿಕ ಇಲಾಖೆಯ ಸಂತೋಷ್, ಗ್ರಾಮಾಂತರ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಪಾಂಡು ಮತ್ತು ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.