
ಕುದೂರು: ಹೇಮಾವತಿ ನೀರು ಮಾಗಡಿ ತಾಲ್ಲೂಕಿಗೆ ಬರುವ ಕಾಲ ಹತ್ತಿರವಾಗಿದೆ ತುಮಕೂರಿನಲ್ಲಿ ಎಕ್ಸ್ ಪ್ರೆಸ್ ಕ್ಯಾನಲ್ ನಿರ್ಮಾಣ ಮಾಡಲು ರೈತರು ಸಹಕಾರ ನೀಡಬೇಕು ಎಂದು ಜಗಣಯ್ಯನ ಮಠದ ಚನ್ನಬಸವ ಶ್ರೀಗಳು ಮನವಿ ಮಾಡಿದರು.
ಕುದೂರಿನ ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ಆಯೋಜನೆ ಮಾಡಲಾಗಿದ್ದ ಸಾಮೂಹಿಕ ಸಹಸ್ರ ಬಿಲ್ವಾರ್ಚನೆ ಮತ್ತು ಪಂಚಾಕ್ಷರಿ ಮಂತ್ರ ಪಠಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, ನೀರು ಜೀವ ಜಲ ರೈತರ ಜೀವನ ಹೀಗಾಗಿ ನಮ್ಮ ನೀರು ನಮ್ಮ ಹಕ್ಕು ರೈತರು ಸುಭಿಕ್ಷವಾಗಬೇಕಾದರೆ ಹಾಗೂ ನಮ್ಮ ಭಾಗದಲ್ಲಿ ಅಂತರ್ಜಲ ಹೆಚ್ಚಬೇಕಾದರೆ ಹೇಮಾವತಿ ನೀರನ್ನು ಬರಮಾಡಿಕೊಳ್ಳೋಣ ಮತ್ತು ಅದಕ್ಕೆ ಇರುವ ಅಡತಡೆಗಳಿಗೆ ಹೋರಾಟ ಮಾಡೋಣ ಎಂದರು.
ಆಧ್ಯಾತ್ಮ ಭಾರತೀಯ ಸಂಸ್ಕೃತಿಯ ತಾಯಿ ಬೇರು ದೇಶ ವಿದೇಶಗಳಲ್ಲಿ ಹೊಸ ವರ್ಷವನ್ನು ಶಿವನಾಮಸ್ಮರಣೆ ಜಪ ತಪಗಳ ಮೂಲಕ ಹೊಸ ವರ್ಷವನ್ನು ಸ್ವಾಗತಿಸಿದರೆ ನಮ್ಮ ದೇಶದ ಕೆಲ ಪಟ್ಟಣಗಳಲ್ಲಿ ಕುಡಿದು ಕುಣಿದು ಕುಪ್ಪಳಿಸಿ ಹೊಸ ವರ್ಷ ಆಚರಣೆ ಮಾಡುವ ಪದ್ಧತಿ ರೂಡಿಸಿಕೊಳ್ಳುತ್ತಿರುವುದನ್ನು ಕೈಬಿಡಬೇಕು, ತಾಯಂದಿರು ಮಕ್ಕಳಿಗೆ ಸಂಸ್ಕಾರವನ್ನು ಕಲಿಸಿಕೊಡುವ ಕೆಲಸ ಮಾಡಬೇಕು ಪೂಜೆ ಮಾಡುವುದು ಜಪ ಮಾಡುವುದು ಹಾಗೂ ನಮ್ಮ ಹುಟ್ಟಿನಿಂದ ಕೊನೆಯವರೆಗೂ ಬೆಸೆದುಕೊಂಡಿರುವ ಧಾರ್ಮಿಕ ಸಂಪ್ರದಾಯಗಳನ್ನು ಪಾಲಿಸಿ ಮೌಲ್ಯಧಾರಿತ ಬದುಕನ್ನು ಕಟ್ಟುವ ಕೆಲಸವನ್ನು ಮಾಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕುದೂರು ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ರಾಜಕುಮಾರ್ ಮಾತನಾಡಿ, ಗುಡಿ ಕೈಗಾರಿಕೆಗೆ ಒತ್ತು ನೀಡುವ ಕೆಲಸವನ್ನು ಕುದೂರು ಮಹಿಳೆಯರು ಮಾಡಬೇಕು ಕೇಂದ್ರ ಸರ್ಕಾರ ಗುಡಿ ಕೈಗಾರಿಕೆ ಉತ್ತೇಜನಕ್ಕೆ ಸಾಕಷ್ಟು ಯೋಜನೆಗಳನ್ನು ಮತ್ತು ಸಹಾಯಧನವನ್ನು ನೀಡುತ್ತಿದ್ದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮಾರ್ಗದರ್ಶನದೊಂದಿಗೆ ಮಾಗಡಿ ತಾಲೂಕಿನಲ್ಲಿಯೂ ಗುಡಿ ಕೈಗಾರಿಕೆಗಳು ಸ್ಥಾಪನೆ ಆಗಲಿ ಎಂದರು.
ಜಿಲ್ಲಾ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮುಖ್ಯಸ್ಥರಾದ ಜೈಕರ್ ಶೆಟ್ಟಿ ಮಾತನಾಡಿ, ರಾಮನಗರ ವಲಯದಲ್ಲಿ ಅದರಲ್ಲೂ ಮಾಗಡಿ ತಾಲೂಕಿನಲ್ಲಿ ಈ ವರ್ಷ ನಾಲ್ಕು ಹೋಬಳಿಗಳಲ್ಲಿ ಸಾಮೂಹಿಕ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸುವ ಕೆಲಸ ಮಾಡಿದ್ದೇವೆ ಎಂದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ತಿ.ನಾ ಪದ್ಮನಾಭ ಮಾತನಾಡಿ, ಕೋವಿಡ್ ಬಳಿಕ ಸಂಪೂರ್ಣ ಮದ್ಯಪಾನವನ್ನು ನಿಲ್ಲಿಸುವಂತೆ ಧರ್ಮಸ್ಥಳದ ಧರ್ಮ ಅಧಿಕಾರಿಗಳಾದ ವೀರೇಂದ್ರ ಹೆಗಡೆ ರವರು ಸರ್ಕಾರಕ್ಕೆ ಪತ್ರ ಬರೆದಿದ್ದರು ಆದರೆ ಸರ್ಕಾರ ಧರ್ಮಾಧಿಕಾರಿಗಳ ಮನವಿಯನ್ನು ಪುರಸ್ಕಾರ ಮಾಡಲಿಲ್ಲ,ಇಂದು ಹಳ್ಳಿಹಳ್ಳಿಗೂ ಬಾರ್ ಗಳನ್ನು ಕೊಟ್ಟಿರುವುದು ಶೋಚನೀಯ, ಧರ್ಮಸ್ಥಳ ಸಂಘ ನಿರ್ಗತಿಕರಿಗೆ ಮತ್ತು ವೃದ್ಧರಿಗೆ ವಾತ್ಸಲ್ಯ ಯೋಜನೆ ಅಡಿಯಲ್ಲಿ ಉಚಿತವಾಗಿ ಮನೆಯನ್ನು ಕಟ್ಟಿಕೊಡುವ ಕೆಲಸ ಮಾಡುತ್ತಿರುವುದು ಮಹಾ ಮಾನವೀಯತೆಯನ್ನು ಮೆರೆಯುವಂತಾಗಿದೆ ಎಂದರು.
ಮಾಗಡಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ಯೋಜನಾ ಅಧಿಕಾರಿ ಅಣ್ಣಪ್ಪ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಹಿಳೆಯರು ಮತ್ತು ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಂಧ್ಯಾ, ಹರೀಶ್, ರಮೇಶ್, ರಂಗನಾಥ್, ಸಂತೋಷ್ ಹಾಗೂ ವಿವಿಧ ಹಳ್ಳಿಗಳಿಂದ ಆಗಮಿಸಿದ್ದ ಸ್ವಸಹಾಯ ಸಂಘದ ಮಹಿಳೆಯರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.