
ಮಾಗಡಿ: ಹೇಮಾವತಿ ಯೋಜನೆಯಡಿ ಮಾಗಡಿ ತಾಲ್ಲೂಕಿನ ಕೆರೆಗಳಿಗೆ ಶುಕ್ರವಾರ ಪ್ರಾಯೋಗಿಕವಾಗಿ ನೀರು ಹರಿಸಲಾಗಿದ್ದು, ಬಹುವರ್ಷಗಳ ಬೇಡಿಕೆ ಮತ್ತು ಕನಸು ನನಸಾಗುವ ದಿನಗಳು ಸಮೀಪಿಸಿದೆ.
ಶ್ರೀರಂಗ ಏತ ನೀರಾವರಿ ಯೋಜನೆಯಡಿ ಹೇಮಾವತಿ ನದಿ ನೀರನ್ನು ಮಾಗಡಿ ತಾಲ್ಲೂಕು ಹಾಗೂ ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ಹೋಬಳಿ ಸೇರಿ ಒಟ್ಟು 83 ಕೆರೆಗಳಿಗೆ ನೀರು ತುಂಬಿಸುವ ಮಹತ್ವಕಾಂಕ್ಷಿ ಯೋಜನೆಗೆ 2016ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ನೆರವೇರಿಸಿದರು.
ಅಲ್ಲಿಂದ ಇಲ್ಲಿಯವರೆಗೂ ಹೇಮಾವತಿ ಯೋಜನೆ ಕುಂಟುತ್ತ ಸಾಗಿದ್ದು, ಇದೀಗ ₹170 ಕೋಟಿ ಮೊದಲ ಹಂತವಾಗಿ ಕಾಮಗಾರಿ ಪೂರ್ಣಗೊಂಡಿದೆ. ನೀರು ಸರಬರಾಜು ಮಾಡುವ ಮುಖ್ಯ ಕೊಳವೆ ಕಾಮಗಾರಿ ಮುಗಿದಿರುವುದರಿಂದ ಪ್ರಾಯೋಗಿಕ ಪರೀಕ್ಷೆಗಾಗಿ ಮಾಗಡಿ ತಾಲ್ಲೂಕಿನ ಕಾಳಾರಿಕಾವಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಪೇ ಗೌಡನಪಾಳ್ಯದ ಬಳಿ ಹೇಮಾವತಿ ನೀರನ್ನು ಹರಿಸಲಾಯಿತು. ಈ ವಿಡಿಯೊ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.
ಹಲವು ವಿರೋಧಗಳ ನಡುವೆ ಹೇಮಾವತಿ ನೀರು ಮಾಗಡಿ ತಾಲ್ಲೂಕಿಗೆ ಹರಿದಿರುವುದು ರೈತರ ಮೊಗದಲ್ಲಿ ಸಂತಸ ಮೂಡಿದೆ. ಸಾಕಷ್ಟು ಹೋರಾಟಗಳ ಶ್ರಮ ಫಲ ಕೊಡುವ ದಿನ ಸಮೀಪಸಿದೆ ಎಂದು ಸಾರ್ವಜನಿಕು ಖುಷಿ ವ್ಯಕ್ತಪಡಿಸಿದರು.
ನಾಲೆಯ ಮೂಲಕ ಬಂದ ಹೇಮಾವತಿ: ಶ್ರೀರಂಗ ಏತ ನೀರಾವರಿ ಯೋಜನೆಗಾಗಿ ಕುಣಿಗಲ್ ತಾಲ್ಲೂಕಿನ ಕಲ್ಲನಾಯಕನಹಳ್ಳಿ ಬಳಿ ಪಂಪ್ ಹೌಸ್ ನಿರ್ಮಾಣ ಮಾಡಲಾಗಿದ್ದು, ಕುಣಿಗಲ್ ನಾಲೆಯಿಂದ 200 ಕ್ಯೂಸೆಕ್ಸ್ ನೀರು ಹರಿಸಲಾಗುತ್ತಿದ್ದು, ಪಂಪ್‌ಹೌಸ್‌ನಿಂದ 9.6 ಕಿ.ಮೀ. ವ್ಯಾಪ್ತಿಯ ತೋಪೇಗೌಡನ ಪಾಳ್ಯದಲ್ಲಿ ಮೊದಲ ಹಂತದ ಪರೀಕ್ಷೆ ಆರಂಭಿಸಲಾಗಿದೆ.
ದೊಡ್ಡ ದೊಡ್ಡ ಪಂಪುಗಳ ಮೂಲಕ ನೀರು ಸರಬರಾಜು ಮಾಡುವ ಮುಖ್ಯ ಕೊಳವೆಯಲ್ಲಿ ನೀರು ಹರಿಯುವುದನ್ನು ಪರೀಕ್ಷೆ ನಡೆಸಲಾಗುತ್ತಿದ್ದು, ಶನಿವಾರ ಬೇರೆ ಬೇರೆ ಮಾರ್ಗದ ಪೈಪ್‌ಗಳ ಪರೀಕ್ಷೆ ಮಾಡಲಾಗುತ್ತದೆ.
224 ಕಿ.ಮೀ ಲಿಂಕ್ ಪೈಪ್ ಅಳವಡಿಕೆ ಬಾಕಿ ಇದೆ: ಈಗ ಪರೀಕ್ಷಾರ್ಥವಾಗಿ ರೈಸಿಂಗ್ ಕಾಮಗಾರಿ ಮಾತ್ರ ಪೂರ್ಣಗೊಳಿಸಲಾಗಿದ್ದು, 83 ಕೆರೆಗಳಿಗೆ ನೀರು ತುಂಬಿಸುವ ಲಿಂಕ್‌ಪೈಪ್ 224 ಕಿಲೋಮೀಟರ್ ಕಾಮಗಾರಿ ಇನ್ನೂ ಕೂಡ ಆರಂಭವಾಗಿಲ್ಲ. ಈ ಕಾಮಗಾರಿ ಸಂಪೂರ್ಣಗೊಂಡರೆ ಮಾತ್ರ ಶ್ರೀರಂಗ ಏತ ನೀರಾವರಿ ಯೋಜನೆಯಡಿ ಹೇಮಾವತಿ ನೀರನ್ನು 83 ಕೆರೆಗಳಿಗೆ ನೀರು ಹರಿಯಲಿದೆ.
ಮಾಗಡಿ ಜನರ ಬಹುದಿನಗಳ ಕನಸು ನನಸಾಗುವ ದಿನಗಳು ಸಮೀಪಿಸಿವೆ. ತಾಲ್ಲೂಕಿನ 83 ಕೆರೆಗಳಿಗೆ ಹೇಮಾವತಿ ನೀರು ಹರಿಸುವ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ.– ಬಾಲಕೃಷ್ಣ, ಶಾಸಕ
ಹೇಮಾವತಿ ನೀರು ಮಾಗಡಿಗೆ ಹರಿಯುವ ಮೂಲಕ ಬಹು ವರ್ಷಗಳ ಕನಸು ನನಸಾಗಿದೆ. ಈ ಯೋಜನೆ ಅನುಷ್ಠಾನಕ್ಕೆ ಶ್ರಮಿಸಿದ ಎಲ್ಲರಿಗೂ ಧನ್ಯವಾದ. ಎಲ್ಲಾ ಕೆರೆಗಳಿಗೂ ನೀರು ತುಂಬಿ ರೈತರ ಮೊಗದಲ್ಲಿ ಹರ್ಷ ತರುವಂತೆ ಆಗಲಿ.– ವೆಂಕಟೇಶ್, ಹೇಮಾವತಿ ಹೋರಾಟಗಾರರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.