ADVERTISEMENT

ಎಚ್‌.ಎಂ. ರೇವಣ್ಣ ಪುತ್ರನ ಕಾರು ಡಿಕ್ಕಿ: ಮೃತ ಯುವಕ ಕುಟುಂಬದ ಏಕೈಕ ಕುಡಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 2:34 IST
Last Updated 13 ಡಿಸೆಂಬರ್ 2025, 2:34 IST
   

ಮಾಗಡಿ: ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್‌.ಎಂ. ರೇವಣ್ಣ ಅವರ‌ ಪುತ್ರ ಆರ್.‌ಶಶಾಂಕ್ ಅವರ ಕಾರು‌ ಗುರುವಾರ ರಾತ್ರಿ ತಾಲ್ಲೂಕಿನ ಗುಡೇಮಾರನಹಳ್ಳಿ ಮುಖ್ಯರಸ್ತೆಯ ಸಿಡಿಗನಹಳ್ಳಿ ಬಳಿ ಸ್ಕೂಟರ್‌ಗೆ ಡಿಕ್ಕಿ ಹೊಡೆದು ಸವಾರ ಬೆಳಗುಂಬ ಗ್ರಾಮದ ಗುಡ್ಡೇಗೌಡ ಅವರ ಪುತ್ರ ರಾಜೇಶ್ (27) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಮೃತ ಯುವಕ ರಾಜೇಶ್ ಅವರು ಗುಡ್ಡೇಗೌಡರ ಮೂವರು ಮಕ್ಕಳಲ್ಲಿ ಏಕೈಕ ಪುತ್ರ. ಬಡ ಕುಟುಂಬದ ಕೊನೆಯವರಾದ ಅವರಿಗೆ ಇಬ್ಬರು ಅಕ್ಕಂದಿರು‌ ಇದ್ದಾರೆ. ಆ ಪೈಕಿ ಒಬ್ಬರನ್ನು ಮದುವೆ ಮಾಡಲಾಗಿದೆ. ಮತ್ತೊಬ್ಬರು ಮದುವೆ ಮಾಡುವ ಜವಾಬ್ದಾರಿ ಹೊತ್ತಿದ್ದ ರಾಜೇಶ್ ಅವರು ಡಾಬಸ್ ಪೇಟೆಯ ಕಾರ್ಖಾನೆಯೊಂದಕ್ಕೆ‌ ಕೆಲಸಕ್ಕೆ ಹೋಗುತ್ತಿದ್ದರು. ಕರ್ತವ್ಯದ ಅವಧಿ ಮೀರಿ, ಹೆಚ್ಚುವರಿ ಸಮಯ ಕೆಲಸ ಮಾಡಿ ರಾತ್ರಿ ಮನೆಗೆ ಬರುತ್ತಿದ್ದರು. ಆಗ ಈ ದುರ್ಘಟನೆ ಸಂಭವಿಸಿದೆ. ರಾಜೇಶ್ ಅವರ ತಂದೆಗೆ ವಯಸ್ಸಾಗಿದ್ದು ಕಣ್ಣು ಸರಿಯಾಗಿ ಕಾಣದು. ತಾಯಿಗೂ ವಯಸ್ಸಾಗಿದ್ದು ಮನೆ ಕೆಲಸ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರು ತಿಳಿಸಿದರು.

ಘಟನೆಗೆ ಸಂಬಂಧಿಸಿದಂತೆ ಕುದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್‌ನಲ್ಲಿ ಅಪಘಾತ ಮಾಡಿದ ಕಾರಿನ ನೋಂದಣಿ ಸಂಖ್ಯೆ ದಾಖಲಾಗಿದೆ. ಆದರೆ, ಚಾಲಕ ಹಾಗೂ ಮಾಲೀಕನ ಹೆಸರು ನಮೂದಾಗಿಲ್ಲ. ಕಾರು ತನ್ನ ಪುತ್ರನದ್ದೇ ಎಂದು ಸ್ವತಃ ರೇವಣ್ಣ ಅವರೇ ಮಾಧ್ಯಮದವರಿಗೆ ಖಚಿತಪಡಿಸಿದ್ದಾರೆ. ಘಟನೆ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಕಾರು ಮಾಲೀಕ ಆರ್. ಶಶಾಂಕ್, ಕಾರನ್ನು ತಮ್ಮ ಚಾಲಕ ನಾಗಪ್ಪ ಚಲಾಯಿಸುತ್ತಿದ್ದರು ಎಂದಿದ್ದಾರೆ.

ADVERTISEMENT

ಶನಿವಾರ ರಾತ್ರಿ ನಡೆದ ಅಪಘಾತದ ಕುರಿತು ಭಾನುವಾರ ಪ್ರಕರಣ ದಾಖಲಾಗಿದೆ. ಪೊಲೀಸರು ಕಾರನ್ನು ಸಹ ವಶಕ್ಕೆ ಪಡೆದು‌ ಠಾಣೆಗೆ ತಂದು ನಿಲ್ಲಿಸಿಕೊಂಡಿದ್ದಾರೆ. ಆದರೂ, ಪೊಲೀಸರು ಎಫ್ಐಆರ್‌ನಲ್ಲಿ ಚಾಲಕ ಮತ್ತು ಕಾರಿನ ಮಾಲೀಕನ ಹೆಸರು ನಮೂದಿಸದಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಚಾಲಕನನ್ನು ಪತ್ತೆ ಹಚ್ಚಬೇಕಿದೆ: ಎಸ್.ಪಿ
ಘಟನೆ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ, ‘ಹಿಟ್ ಆ್ಯಂಡ್ ರನ್‌ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಅಪಘಾತ ನಡೆದಾಗ ಯಾರು ಕಾರು ಚಲಾಯಿಸುತ್ತಿದ್ದರು ಎಂಬುದನ್ನು ಪತ್ತೆ ಮಾಡಬೇಕಿದೆ. ಅದಕ್ಕಾಗಿ, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ’ ಎಂದರು.
ಎಚ್.ಎಂ. ರೇವಣ್ಣ ಅವರ ಪುತ್ರ ಶಶಾಂಕ್ ಅವರ ಕಾರು ಹಿಟ್ ಆ್ಯಂಡ್ ರನ್ ಮಾಡಿದ್ದರಿಂದ ನನ್ನ ಬಾಮೈದ ಮೃತಪಟ್ಟಿದ್ದಾರೆ. ಅಪಘಾತ ಮಾಡಿರರುವವರು ಪ್ರಭಾವಿಯಾಗಿದ್ದು, ನಮಗೆ ಈ ಪ್ರಕರಣದಲ್ಲಿ ನ್ಯಾಯ ಬೇಕು
ರಾಜೇಶ್, ಮೃತ ರಾಜೇಶ್ ಭಾವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.