ಚನ್ನಪಟ್ಟಣ: ನಗರದ ಇತಿಹಾಸ ಪ್ರಸಿದ್ಧ ಮಂಡೀಪೇಟೆ ಗರುಡಗಂಬ ಬೀದಿ ಕಾಮನ ಹಬ್ಬದ ಉತ್ಸವ ಸಮಿತಿಯಿಂದ ಶುಕ್ರವಾರ ನಡೆದ ಹೋಳಿ ಹಬ್ಬದಲ್ಲಿ (ಕಾಮನಹಬ್ಬ) ಬಾಲಕರು, ಯುವಕರು, ಮಧ್ಯವಯಸ್ಕರು, ವಯಸ್ಕರು ವಯಸ್ಸಿನ ತಾರತಮ್ಯವಿಲ್ಲದೆ ಬಣ್ಣದೋಕುಳಿಯಾಡಿದರು.
ಉತ್ಸವ ಸಮಿತಿ ವತಿಯಿಂದ ರತಿ ಮನ್ಮಥರನ್ನು ಪ್ರತಿಷ್ಠಾಪನೆ ಮಾಡಿ ದಿನಕ್ಕೊಂದು ವಿಶೇಷ ಅಲಂಕಾರ ಮಾಡಿ, ಪ್ರತಿದಿನ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುತ್ತಾ ಹನ್ನೆರಡು ದಿನಗಳ ಕಾಲ ವಿಜೃಂಭಣೆಯಿಂದ ನಡೆದ ಕಾಮನ ಹಬ್ಬದ ಅಂತಿಮ ದಿನವಾದ ಶುಕ್ರವಾರ ನಗರದಲ್ಲೆಡೆ ರತಿಮನ್ಮಥರನ್ನು ಮೆರವಣಿಗೆ ಮಾಡಿ ನಂತರ ಕಾಮದಹನ ಮಾಡಲಾಯಿತು.
ಕಾಮದಹನ ಅಂಗವಾಗಿ ಗುರುವಾರ ರಾತ್ರಿ ಕೃತಕ ಆನೆ ಅಂಬಾರಿ ನಿರ್ಮಿಸಿ ಅಂಬಾರಿ ಮೇಲೆ ಮಹಾರಾಜ ಪಾತ್ರಧಾರಿಯನ್ನು ಕೂರಿಸಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆ ವೇಳೆ ಎತ್ತಿನಗಾಡಿ, ಟ್ರ್ಯಾಕ್ಟರ್, ಟೆಂಪೊಗಳಲ್ಲಿ ರಾಮ ಲಕ್ಷ್ಮಣ ಸೀತೆ, ಕೃಷ್ಣ, ಆಂಜನೇಯ ಸೇರಿದಂತೆ ವಿಶೇಷ ವೇಷಧಾರಿಗಳ ಮೆರವಣಿಗೆ ನಡೆಯಿತು.
ಶುಕ್ರವಾರ ಮಂಡೀಪೇಟೆ ಲಕ್ಷ್ಮಿನಾರಾಯಣ ದೇವಸ್ಥಾನ ಬಳಿಯಿಂದ ನಗರದ ಎಂ.ಜಿ.ರಸ್ತೆ ಸೇರಿದಂತೆ ವಿವಿಧೆಡೆ ಬೆಳಿಗ್ಗೆಯಿಂದ ಸಂಜೆವರೆಗೆ ರತಿಮನ್ಮಥರ ವಿಜೃಂಭಣೆಯ ಬೆಳ್ಳಿ–ಪಲ್ಲಕ್ಕಿ ಉತ್ಸವ ಮೆರವಣಿಗೆ ನಡೆಯಿತು.
ಈ ವೇಳೆ ಮಂಡೀಪೇಟೆ ಹಾಗೂ ಅಕ್ಕಪಕ್ಕದ ನಿವಾಸಿಗಳು ಬಣ್ಣದೋಕುಳಿಯಲ್ಲಿ ಮಿಂದೆದ್ದು ಸಂಭ್ರಮಿಸಿದರು. ಮೆರವಣಿಗೆ ವೇಳೆ ಪರಸ್ಪರ ಬಣ್ಣ ಹಚ್ಚುವ ಜತೆಗೆ ನರ್ತನವೂ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.