ಬಿಡದಿ (ರಾಮನಗರ): ಹೋಬಳಿಯ ನಂಜೇಗೌಡನದೊಡ್ಡಿ, ಸುತ್ತಲಿನ ಅರಣ್ಯ ಪ್ರದೇಶದಲ್ಲಿ 2 ಜಿಂಕೆ ಹಾಗೂ 2 ಕಾಡುಹಂದಿ ಬೇಟೆಯಾಡಿ, ಬೆಂಗಳೂರಿಗೆ ಸಾಗಿಸುತ್ತಿದ್ದ ಮೂವರನ್ನು ಅರಣ್ಯ ಇಲಾಖೆಯ ಬೆಂಗಳೂರಿನ ಅಪರಾಧ ನಿಯಂತ್ರಣ ಕೋಶ ಮತ್ತು ಜಾಗೃತ ದಳ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ, ಬಿಡದಿ ಸಮೀಪ ಶುಕ್ರವಾರ ನಸುಕಿನಲ್ಲಿ ಬಂಧಿಸಿದೆ.
ಬೆಂಗಳೂರಿನ ತೋಟದಗುಡ್ಡನಹಳ್ಳಿ ಶ್ರೀನಿವಾಸ್ (47), ನೆಲಮಂಗಲ ತಾಲ್ಲೂಕು ಪಾದನಕುಂಟೆ ಗ್ರಾಮದ ಹನುಮಂತರಾಜು (44), ರಾಮನಗರ ತಾಲ್ಲೂಕು ನಂಜೇಗೌಡನ
ದೊಡ್ಡಿ ಗ್ರಾಮದ ಮುನಿರಾಜು (38) ಬಂಧಿತರು.
ಆರೋಪಿಗಳಿಂದ ಥಾರ್ ವಾಹನ, ಪ್ರಾಣಿಗಳ ಕಳೇಬರ, ಸಿಂಗಲ್ ಬ್ಯಾರೆಲ್ ರೈಫಲ್, ಏರ್‌ಗನ್, ಬುಲೆಟ್‌ಗಳು, 3 ಮೊಬೈಲ್, ಬ್ಯಾಟರಿಗಳು, ಚಾಕು ವಶಪಡಿಸಿಕೊಳ್ಳಲಾಗಿದೆ.
ಶ್ರೀನಿವಾಸ್ ಮತ್ತು ಹನುಮಂತರಾಜು, ಸ್ಥಳೀಯನಾದ ಮುನಿರಾಜು ಪರಿಚಯ ಮಾಡಿಕೊಂಡಿದ್ದರು. ನಂಜೇಗೌಡನದೊಡ್ಡಿ ಹಾಗೂ ಸುತ್ತಲಿನ ಭಾಗದಲ್ಲಿ ಕಾಡುಹಂದಿ ಮತ್ತು ಜಿಂಕೆ ಓಡಾಡುವುದರ ಮಾಹಿತಿ ಪಡೆದಿದ್ದ ಇಬ್ಬರೂ, ಮುನಿರಾಜು ಸಹಕಾರದೊಂದಿಗೆ ಬೇಟೆಯಾಡುತ್ತಿದ್ದರು ಎಂದು ಇಲಾಖೆಯ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಾಣಿಗಳ ಮಾಂಸ ಭಕ್ಷಣೆ ಜೊತೆಗೆ, ಇತರರಿಗೂ ಮಾರುತ್ತಿದ್ದರು. ಆರೋಪಿಗಳು ಗುರುವಾರ (ಜ. 9) ರಾತ್ರಿ ನಂಜೇಗೌಡನದೊಡ್ಡಿಗೆ ಬೇಟೆಗೆ ಬಂದಿರುವ ಖಚಿತ ಆಧರಿಸಿ ಕಾರ್ಯಾಚರಣೆ ಬಿಡದಿ ಸಮೀಪದ ಚಿಕ್ಕಕುಂಟನಹಳ್ಳಿ ಬಳಿ ಬಂಧಿಸಲಾಯಿತು ಎಂದು ತಿಳಿಸಿದರು.
ಆರೋಪಿಗಳು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸಂಚಾರಿ ಜಾಗೃತ ದಳದ ಡಿಸಿಎಫ್ ಸುನೀತಾ ಬಾಯಿ, ಅಪರಾಧ ನಿಯಂತ್ರಣ ಕೋಶದ ಆರ್‌ಎಫ್‌ಒ ರಮೇಶ್, ನೇತೃತ್ವದಲ್ಲಿ ಡಿಆರ್‌ಎಫ್‌ಒಗಳಾದ ಅಮೃತ ದೇಸಾಯಿ, ಸಿದ್ದರಾಜು, ರಾಜು, ಫಾರೆಸ್ಟ್ ಗಾರ್ಡ್ ಅಶ್ವಿನ್, ಚಾಲಕ ಸುರೇಶ್ ಅವರಿದ್ದ ತಂಡ ಕಾರ್ಯಾಚರಣೆ ನಡೆಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.