ADVERTISEMENT

‘ಜಾಲಿವುಡ್‌’ ವಿರುದ್ಧ ನಕ್ಷೆ ಅನುಮೋದನೆ ಪಡೆಯದ ಆರೋಪ

ಬಿಎಂಆರ್‌ಡಿಎಯಲ್ಲಿ ದೂರು ದಾಖಲು; ವಿಚಾರಣೆ ಆರಂಭಿಸಿದ ಎಸ್‌ಟಿಎಫ್; ವಿದ್ಯುತ್ ಕಡಿತಗೊಳಿಸುವುದಾಗಿ ಬೆಸ್ಕಾಂ ನೋಟಿಸ್

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 17:34 IST
Last Updated 18 ಆಗಸ್ಟ್ 2025, 17:34 IST
ಬಿಡದಿಯ ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿರುವ ಜಾಲಿವುಡ್ ಪಾರ್ಕ್
ಬಿಡದಿಯ ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿರುವ ಜಾಲಿವುಡ್ ಪಾರ್ಕ್   

ರಾಮನಗರ: ತಾಲ್ಲೂಕಿನ ಬಿಡದಿಯ ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿರುವ ಮೇ ಇನ್ನೋವೇಟಿವ್ ಸ್ಟುಡಿಯೊ ಪ್ರೈವೇಟ್ ಲಿಮಿಟೆಡ್ (ಜಾಲಿವುಡ್ ಎಂಟರ್‌ಟೈನ್‌ಮೆಂಟ್ ಪಾರ್ಕ್) ಸ್ಥಳೀಯ ಪ್ರಾಧಿಕಾರದಿಂದ ನಕ್ಷೆಯ ಅನುಮೋದನೆ ಪಡೆಯದೆ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಆರೋಪ ಕುರಿತು ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ (ಬಿಎಂಆರ್‌ಡಿಎ) ವಿಶೇಷ ಕಾರ್ಯಾಚರಣೆ ಪಡೆಗೆ (ಎಸ್‌ಟಿಎಫ್‌) ದೂರು ಬಂದಿದೆ.

ಎಸ್‌ಟಿಎಫ್ ದೂರಿನ ವಿಚಾರಣೆ ಆರಂಭಿಸಿರುವ ಬೆನ್ನಲ್ಲೇ ಬಿಎಂಆರ್‌ಡಿಎ ಸೂಚನೆ ಮೇರೆಗೆ ಬೆಸ್ಕಾಂ ಬಿಡದಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಜಾಲಿವುಡ್‌ಗೆ ಇತ್ತೀಚೆಗೆ ನೋಟಿಸ್ ನೀಡಿದ್ದಾರೆ. ಪಾರ್ಕ್‌ಗೆ ವಿದ್ಯುತ್‌ ಕಡಿತಗೊಳಿಸುವ ಎಚ್ಚರಿಕೆ ನೀಡಿದ್ದಾರೆ.

ಬಿಎಂಆರ್‌ಡಿಎಯಿಂದ ನಕ್ಷೆ ಅನುಮೋದನೆ ಪಡೆಯದೆ ಅನಧಿಕೃತವಾಗಿ ಪಾರ್ಕ್ ನಡೆಸುತ್ತಿರುವ ಕುರಿತು ಸಾರ್ವಜನಿಕ ದೂರಿನ ಮೇರೆಗೆ, ಕಾರ್ಯಚರಣೆಯ ಪಡೆ ಪೊಲೀಸ್ ಇನ್‌ಸ್ಪೆಕ್ಟರ್ ಪಾರ್ಕ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಬೆಸ್ಕಾಂ ಬಿಡದಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗೆ ಪತ್ರ ಬರೆದಿರುವ ಇನ್‌ಸ್ಪೆಕ್ಟರ್, ವಿಚಾರಣೆ ಹಿನ್ನೆಲೆಯಲ್ಲಿ ಜಾಲಿವುಡ್‌ಗೆ ತಕ್ಷಣ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಸೂಚಿಸಿದ್ದಾರೆ.

ADVERTISEMENT

ನೋಟಿಸ್‌ನಲ್ಲಿ ಏನಿದೆ?: ತಮ್ಮ ವಿದ್ಯುತ್ ಸ್ಥಾವರ ಸಂಖ್ಯೆ: ಬಿಡಿಎಚ್‌ಟಿ–14 ಒಳಗೊಂಡಂತೆ ತಮ್ಮ ವಿರುದ್ಧದ ದೂರಿನ ವಿಚಾರಣೆಯನ್ನು ಎಸ್‌ಟಿಎಫ್ ನಡೆಸುತ್ತಿರುವುದರಿಂದ ವಿದ್ಯುತ್ ಸ್ಥಾವರ ಸ್ಥಗಿತಗೊಳಿಸುವಂತೆ ಬಿಎಂಆರ್‌ಡಿಎ ಕೋರಿದೆ. ಹಾಗಾಗಿ ಸ್ಥಳೀಯ ಪ್ರಾಧಿಕಾರದಿಂದ ತಾವು ಅನುಮೋದನೆ ಪಡೆದಿರುವ ನಕ್ಷೆಯನ್ನು ಈ ಪತ್ರ ತಲುಪಿದ ಏಳು ದಿನದ ಒಳಗಾಗಿ ನಮ್ಮ ಕಚೇರಿಗೆ ತಲುಪಿಸಬೇಕು. ಇಲ್ಲದಿದ್ದರೆ, ಬೆಸ್ಕಾಂ ನಿಯಮಾನುಸಾರ ತಮ್ಮ ಸ್ಥಾವರಕ್ಕೆ ವಿದ್ಯುತ್‌ ಕಡಿತಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.

‘ವಿದ್ಯುತ್ ಸಂಪರ್ಕಕ್ಕೆ ಅಗತ್ಯ ದಾಖಲೆ ಸಲ್ಲಿಸಿರುವುದಾಗಿ ಜಾಲಿವುಡ್‌ನವರು ನಮಗೆ ಪ್ರತಿಕ್ರಿಯೆ ನೀಡಿದ್ದಾರೆ. ಅದಕ್ಕೆ ಕೆಲ ದಾಖಲೆಗಳನ್ನು ಸಹ ನೀಡಿದ್ದಾರೆ. ಎಲ್ಲವನ್ನೂ ಬಿಎಂಆರ್‌ಡಿಎ ವಿಶೇಷ ಕಾರ್ಯಾಚರಣೆ ಪಡೆಯ ಇನ್‌ಸ್ಪೆಕ್ಟರ್‌ ಅವರಿಗೆ ಕಳಿಸಿ ಕೊಡಲಾಗಿದೆ. ದಾಖಲೆಗಳನ್ನು ಪರಿಶೀಲನೆ ನಡೆಸಿದ ಬಳಿಕ ನೀಡುವ ಸೂಚನೆಯಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಬೆಸ್ಕಾಂ ಬಿಡದಿ ಉಪ ವಿಭಾಗದ ಎಇಇ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಜಾಲಿವುಡ್ ಎಂಟರ್‌ಟೈನ್‌ಮೆಂಟ್ ಪಾರ್ಕ್ ಅಧಿಕಾರಿಯೊಬ್ಬರ ಮೊಬೈಲ್ ಸಂಖ್ಯೆಗೆ ‘ಪ್ರಜಾವಾಣಿ’ ಕರೆ ಮಾಡಿದಾಗ ಸ್ವೀಕರಿಸಲಿಲ್ಲ. ಸಂದೇಶಕ್ಕೂ ಪ್ರತಿಕ್ರಿಯೆ ನೀಡಲಿಲ್ಲ. ಕರೆ ಸ್ವೀಕರಿಸಿದ ಮತ್ತೊಬ್ಬರು, ‘ಈ ವಿಷಯ ನಮ್ಮ ವ್ಯಾಪ್ತಿಗೆ ಬರುವುದಿಲ್ಲ’ ಎಂದರು. 

ಬಿಎಂಆರ್‌ಡಿಎ

ದೂರಿನ ಮೇರೆಗೆ ಲಭ್ಯ ದಾಖಲೆಗಳನ್ನು ಪರಿಶೀಲಿಸುವ ಜೊತೆಗೆ ಜಾಲಿವುಡ್‌ ಪಾರ್ಕ್‌ ಸ್ಥಳೀಯ ಪ್ರಾಧಿಕಾರದಿಂದ ನಕ್ಷೆಗೆ ಅನುಮೋದನೆ ಪಡೆಯದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಮತ್ತಷ್ಟು ದಾಖಲೆಗಳನ್ನು ಒದಗಿಸಲು ಸೂಚಿಸಲಾಗಿದೆ. ಕಾಲಮಿತಿಯಲ್ಲಿ ನೀಡದಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು

ರವಿಕುಮಾರ್ ಡಿವೈಎಸ್ಪಿ ವಿಶೇಷ ಕಾರ್ಯಚರಣೆ ಪಡೆ ಬಿಎಂಆರ್‌ಡಿಎ

ಗಾಣಕಲ್ ನಟರಾಜ್ ಅಧ್ಯಕ್ಷ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ

ಅನಧಿಕೃವಾಗಿದ್ದರೆ ಕ್ರಮ: ನಟರಾಜ್

ಜಿಲ್ಲೆಯ ಬಿಎಂಆರ್‌ಡಿಎ ವ್ಯಾಪ್ತಿಗೆ ಒಳಪಡುವ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಜಿಬಿಡಿಎ) ಅನುಮೋದನೆ ಪಡೆಯದೆ ಹೋಮ್‌ ಸ್ಟೆ ರೆಸಾರ್ಟ್ ಮಾಲ್‌ ರೆಸ್ಟೊರೆಂಟ್‌ ಸೇರಿದಂತೆ ಮನರಂಜನಾ ಪಾರ್ಕ್‌ಗಳು ತಲೆ ಎತ್ತುತ್ತಿವೆ. ಸ್ಥಳೀಯ ಗ್ರಾಮ ಪಂಚಾಯಿತಿಯರೇ ಅನುಮೋದನೆ ನೀಡುತ್ತಿದ್ದಾರೆ. ಅದಕ್ಕೆ ಮಾನ್ಯತೆ ಇಲ್ಲ. ಸಕ್ಷಮ ಪ್ರಾಧಿಕಾರದಿಂದ ನಕ್ಷೆ ಅನುಮೋದನೆ ಪಡೆಯದ ಕಟ್ಟಡ ಸೇರಿದಂತೆ ಅನಧಿಕೃತ ಬಡಾವಣೆಗಳನ್ನು ಗುರುತಿಸಲು ಬಿಎಂಆರ್‌ಡಿಎ ವಿಶೇಷ ಕಾರ್ಯಚರಣೆ ಪಡೆ (ಎಸ್‌ಟಿಎಫ್) ರಚಿಸಿದೆ.

ಬಿಡದಿಯಲ್ಲಿರುವ ಜಾಲಿವುಡ್ ಪಾರ್ಕ್ ನಕ್ಷೆ ಅನುಮೋದನೆ ಪಡೆಯದ ದೂರಿನ ವಿಚಾರಣೆಯನ್ನು ಎಸ್‌ಟಿಎಫ್ ಆರಂಭಿಸಿದೆ. 40 ಎಕರೆಯಲ್ಲಿರುವ ಜಾಲಿವುಡ್‌ ನಕ್ಷೆ ಅನುಮೋದನೆ ಪಡೆಯದ ಜೊತೆಗೆ ಸುಮಾರು 15 ಎಕರೆಯನ್ನು ಮಾರಾಟ ಮಾಡಿ ನಿಯಮ ಉಲ್ಲಂಘಿಸಿದೆ ಎಂಬ ಆರೋಪವಿದೆ. ಈ ಬಗ್ಗೆಯೂ ಎಸ್‌ಟಿಎಫ್‌ ಪರಿಶೀಲನೆ ನಡೆಸುತ್ತಿದೆ. ಅನಧಿಕೃತವಾಗಿರುವುದು ಸಾಬೀತಾದರೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಬಿಡಿಎ ಅಧ್ಯಕ್ಷ ಗಾಣಕಲ್ ನಟರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

ನಿಯಮ ಉಲ್ಲಂಘನೆ ಮೇಲೆ ಎಸ್‌ಟಿಎಫ್ ನಿಗಾ

ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರವು (ಬಿಎಂಆರ್‌ಡಿಎ) ತನ್ನ ವ್ಯಾಪ್ತಿಯಲ್ಲಿರುವ ಯೋಜನಾ ಪ್ರಾಧಿಕಾರ ಮತ್ತು ನಗರಾಭಿವೃದ್ಧಿ ಪ್ರಾಧಿಕಾರ ಸೇರಿದಂತೆ ಒಟ್ಟು 11 ಪ್ರಾಧಿಕಾರಿಗಳ 2224 ಗ್ರಾಮಗಳ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡಗಳು ಬಡಾವಣೆಗಳು ಕಾನೂನುಬಾಹಿರವಾಗಿ ಭೂ ಉಪಯೋಗ ಅತಿಕ್ರಮಣದ ಮೇಲೆ ನಿಗಾ ಇಡಲು ವಿಶೇಷ ಕಾರ್ಯಾಚರಣೆ ಪಡೆ (ಎಸ್‌ಟಿಎಫ್) ರಚಿಸಿದೆ. ಡಿವೈಎಸ್ಪಿ ಇನ್‌ಸ್ಪೆಕ್ಟರ್ ತಹಶೀಲ್ದಾರ್ ಎಂಜಿನಿಯರ್ ಸೇರಿದಂತೆ 10 ಮಂದಿಯ ಈ ಪಡೆ ಸಾರ್ವಜನಿಕರು ಸೇರಿದಂತೆ ವಿವಿಧ ಮೂಲಗಳಿಂದ ಬರುವ ದೂರುಗಳ ಜೊತೆಗೆ ಸ್ವತಃ ಸ್ಥಳ ಪರಿಶೀಲನೆ ನಡೆಸಲಿದೆ. ಮೇಲ್ನೋಟಕ್ಕೆ ಉಲ್ಲಂಘನೆ ಕಂಡುಬಂದರೆ ನೋಟಿಸ್ ನೀಡಲಿದೆ. ಸೂಕ್ತ ಪ್ರಾಧಿಕಾರದ ಅನುಮತಿ ಪಡೆಯದಿರುವುದು ಕಂಡುಬಂದರೆ ಕ್ರಮ ಕೈಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.