ADVERTISEMENT

ರಾಮನಗರದಲ್ಲಿ ವಕೀಲರ ಧರಣಿಗೆ ಕುಮಾರಸ್ವಾಮಿ ಕಾರಣ: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2024, 7:55 IST
Last Updated 21 ಫೆಬ್ರುವರಿ 2024, 7:55 IST
<div class="paragraphs"><p>ಡಿಸಿಎಂ ಡಿ ಕೆ ಶಿವಕುಮಾರ್ ಅವರು ಕನಕಪುರದಲ್ಲಿ ಬುಧವಾರ ಸಂವಿಧಾನ ಜಾಥಾ ಉದ್ಘಾಟಿಸಿ ಮಾತನಾಡಿದರು</p></div>

ಡಿಸಿಎಂ ಡಿ ಕೆ ಶಿವಕುಮಾರ್ ಅವರು ಕನಕಪುರದಲ್ಲಿ ಬುಧವಾರ ಸಂವಿಧಾನ ಜಾಥಾ ಉದ್ಘಾಟಿಸಿ ಮಾತನಾಡಿದರು

   

ಕನಕಪುರ: ರಾಮನಗರದಲ್ಲಿ ವಕೀಲರಿಂದ ಧರಣಿ ಮಾಡಿಸುತ್ತಿರುವುದೇ ಜೆಡಿಎಸ್. ಧರಣಿಗೆ ಜೆಡಿಎಸ್ ಅಧ್ಯಕ್ಷ ಎಚ್. ಡಿ. ಕುಮಾರಸ್ವಾಮಿ ಅವರೇ ಕಾರಣ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದರು.

ರಾಮನಗರದಲ್ಲಿ ಡಿ.ಕೆ. ಸಹೋದರರಿಂದ ಅಶಾಂತಿ ಸೃಷ್ಟಿ ಎಂದಿದ್ದ ಕುಮಾರಸ್ವಾಮಿ ಅವರ ಹೇಳಿಕೆ ಕುರಿತು ಪಟ್ಟಣದಲ್ಲಿ ಬುಧವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ವಕೀಲರ ವಿಷಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನವರು ರಾಜಕೀಯ ಮಾಡಿದ್ದಾರೆ. ಅವರಿಗೆ ಬೇರೆ ಕೆಲಸವಿಲ್ಲ. ಮೊಸರಲ್ಲಿ‌ ಕಲ್ಲು ಹುಡುಕುವ ಕೆಲಸ ಮಾಡುತ್ತಾರೆ ಎಂದರು.

ADVERTISEMENT

ಬಿಜೆಪಿಯವರು ಅಶಾಂತಿ ಸೃಷ್ಟಿಸುವುದು ಮಾಮೂಲಿ. ಕೋಮು ವಿಷಯದಲ್ಲಿ ಅವರು ಯಾವಾಗಲೂ ರಾಜಕೀಯ ಮಾಡುತ್ತಾರೆ. ಅವರಿಗೆ ಅಲ್ಪಸಂಖ್ಯಾತರನ್ನು ಕಂಡರೆ ಆಗುವುದಿಲ್ಲ.

ಸ್ಥಳೀಯ ಶಾಸಕ ಮತ್ತು ಪಿಎಸ್ಐ ಸಹ ಅಲ್ಪಸಂಖ್ಯಾತರಾಗಿದ್ದರಿಂದ ವಕೀಲರ ವಿಷಯದಲ್ಲಿ ರಾಜಕೀಯ ಮಾಡಿದ್ದಾರೆ. ಈ ಬಗ್ಗೆ ನೆನ್ನೆ ಅಧಿವೇಶನದಲ್ಲಿ ಸಹ ಅಲ್ಪಸಂಖ್ಯಾತ ಅಧಿಕಾರಿ ಬೇಡ ಎಂದಿದ್ದರು ಎಂದು ಟೀಕಿಸಿದರು.

ವಕೀಲರ ಹೋರಾಟಕ್ಕೆ ಸಂಬಂಧಿಸಿದಂತೆ, ಪಿಎಸ್ಐ ವಿರುದ್ಧ ತನಿಖೆ ನಡೆಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೆ. ಯಾರಿಗೂ ಅನ್ಯಾಯ ಆಗಬಾರದು ಅಂತ ಹೇಳಿದ್ದೆ ಎಂದರು.

ಕಟ್ಟಿ ಹಾಕಲಿ:

ನಾವು ಕಳೆದ ಲೋಕಸಭಾ ಚುನಾವಣೆ ಮುಗಿದ ಮರುದಿನದಿಂದಲೇ ಮುಂದಿನ ಚುನಾವಣೆಗೆ ಕೆಲಸ ಆರಂಭಿಸಿದ್ದೇವೆ. ನಮ್ಮನ್ನು ಕಟ್ಟು ಹಾಕುತ್ತೇವೆ ಅನ್ನುವವರು ಕಟ್ಟಿ ಹಾಕಲಿ ನೋಡೋಣ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ನನ್ನ ಕ್ಷೇತ್ರದಲ್ಲೇ ಕಾಡಾನೆ ಹಾವಳಿ ಹೆಚ್ಚಾಗಿರೋದು ನಿಜ. ದಾಳಿಯಿಂದ ಒಂಬತ್ತು ಮಂದಿ ಮೃತಪಟ್ಟಿರುವ ಬಗ್ಗೆ ಅರಿವಿದೆ. ನಾನು ಅರಣ್ಯ ಸಚಿವರ ಬಳಿ ಮಾತನಾಡಿದ್ದೇನೆ. ರೈಲ್ವೆ ಬ್ಯಾರಿಕೇಡ್ ಹೆಚ್ಚಿಸುವಂತೆ ಹೇಳಿದ್ದೇನೆ. ಕಾಡು ಜಾಸ್ತಿ ಬೆಳೆಯುತ್ತಿದ್ದು, ಕಾಡಾನೆಗಳು ನಗರಕ್ಕೆ ಬರುತ್ತಿವೆ‌.

ಇದು ಪ್ರಕೃತಿ ಏನು ಮಾಡೋಕಾಗಲ್ಲ. ಕಾಡಾನೆಗಳ ನಿಯಂತ್ರಣಕ್ಕೆ ಸಾಧ್ಯವಾದಷ್ಟು ಕ್ರಮ ಕೈಗೊಳ್ಳಲಾಗುವುದು ಎಂದರು.

ವಕೀಲರ ಹೋರಾಟಕ್ಕೆ ಸಂಬಂಧಿಸಿದಂತೆ, ಪಿಎಸ್ಐ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ ಎಂದು ನಾನು ಮತ್ತು ಸ್ಥಳೀಯ ಶಾಸಕರು ಅಧಿಕಾರಿಗಳಿಗೆ ಸೂಚಿಸಿದ್ದೆವು
- ಡಿ.ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.