ADVERTISEMENT

ಕಾಂಗ್ರೆಸ್‌ ಸೇರ್ಪಡೆ ಆತ್ಮಹತ್ಯೆ ಇದ್ದಂತೆ: ಮಾಜಿ ಸಚಿವ ಸಿ.ಪಿ ಯೋಗೇಶ್ವರ್

ಕನಕಪುರದಲ್ಲೂ ಸ್ಪರ್ಧೆಗೆ ಸಿದ್ಧ: ಯೋಗೇಶ್ವರ್‌

​ಪ್ರಜಾವಾಣಿ ವಾರ್ತೆ
Published 7 ಜನವರಿ 2022, 1:24 IST
Last Updated 7 ಜನವರಿ 2022, 1:24 IST
ಗುರುವಾರ ಸುದ್ದಿಗೋಷ್ಠಿಯಲ್ಲಿ ಸಿ.ಪಿ. ಯೋಗೇಶ್ವರ್ ಮಾತನಾಡಿದರು
ಗುರುವಾರ ಸುದ್ದಿಗೋಷ್ಠಿಯಲ್ಲಿ ಸಿ.ಪಿ. ಯೋಗೇಶ್ವರ್ ಮಾತನಾಡಿದರು   

ರಾಮನಗರ: ‘ಕಾಂಗ್ರೆಸ್‌ಗೆ ಹೋಗುವುದು ಆತ್ಮಹತ್ಯೆ ಮಾಡಿಕೊಡಂತೆ. ಆ ಪಕ್ಷಕ್ಕೆ ಹೋಗುವ ಪ್ರಶ್ನೆಯೇ ಇಲ್ಲ. ರಾಜಕೀಯದಲ್ಲಿ ಇರುವವರೆಗೂ ಬಿಜೆಪಿಯಲ್ಲೇ ಉಳಿಯುತ್ತೇನೆ’ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಪಿ. ಯೋಗೇಶ್ವರ್‌ ಸ್ಪಷ್ಟನೆ ನೀಡಿದರು.

‘25 ವರ್ಷಗಳಿಂದ ರಾಜಕೀಯ ಜೀವನದಲ್ಲಿದ್ದೇನೆ. ಕಾರಣಾಂತರಗಳಿಂದ ಪಕ್ಷಾಂತರ ಮಾಡಿ ಪಕ್ಷಾಂತರಿ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದೇನೆ. ಮುಂದಿನ ರಾಜಕೀಯ ಜೀವನವನ್ನು ಬಿಜೆಪಿಯಲ್ಲೇ ಕಳೆಯುತ್ತೇನೆ’ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘1999 ರಲ್ಲಿ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದಾಗ ಶಿವಕುಮಾರ್ ನನಗೆ ಕಾಂಗ್ರೆಸ್ ಟಿಕೆಟ್ ತಪ್ಪಿಸಿದರು. ಚನ್ನಪಟ್ಟಣದ ನೀರಾವರಿಗಾಗಿ ಬಿಜೆಪಿ ಸೇರಿದ ನಾನು 2013 ರಲ್ಲಿ ಬಿಜೆಪಿ ಮೂರು ಭಾಗವಾದಾಗ ನನ್ನ ಅಸ್ಥಿತ್ವಕ್ಕಾಗಿ ಮತ್ತೆ ಕಾಂಗ್ರೆಸ್‍ಗೆ ಬಂದೆ. ಆಗಲೂ ಇದೇ ವ್ಯಕ್ತಿ ಮತ್ತೊಮ್ಮೆ ಟಿಕೆಟ್‌ ತಪ್ಪಿಸಿದರು. ಕಳೆದ 25 ವರ್ಷಗಳಿಂದ ನನಗೆ ಕಿರುಕುಳ ಕೊಟ್ಟುಕೊಂಡು ಬಂದಿದ್ದಾರೆ. ಅವರ ಜೊತೆಗೆ ನಾನು ಹೇಗೆ ಹೋಗಲಿ’ ಎಂದು ಪ್ರಶ್ನಿಸಿದರು.

ADVERTISEMENT

ಕ್ಷಮೆ ಕೇಳಿ: ಮುಖ್ಯಮಂತ್ರಿ ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ. ಸುರೇಶ್ ಮತ್ತು ಪರಿಷತ್ ಸದಸ್ಯ ರವಿ ಅವರ ವರ್ತನೆ ಯಿಂದಾಗಿ ಇಡೀ ಜಿಲ್ಲೆಯ ಜನತೆಗೆ ಅಪಮಾನವಾಗಿದೆ. ಇದಕ್ಕಾಗಿ ಅವರು ಜಿಲ್ಲೆಯ ಜನರ ಕ್ಷಮೆ ಯಾಚಿಸಬೇಕು ಎಂದು ಅವರು ಒತ್ತಾಯಿಸಿದರು.

ಕೆಂಪೇಗೌಡ ಮತ್ತು ಡಾ. ಅಂಬೇಡ್ಕರ್ ಅವರ ಪ್ರತಿಮೆ ಉದ್ಘಾಟನೆಯಾಗುವುದು ಇವರಿಗೆ ಬೇಕಿರಲಿಲ್ಲ. ತಾವೇ ಉದ್ಗಾಟನೆ ಮಾಡಬೇಕು ಎಂಬ ಬಯಕೆ ಇತ್ತು. ಹೀಗಾಗಿ ಕಾರ್ಯಕ್ರಮ ಹಾಳು ಮಾಡುವ ಸಂಚು ರೂಪಿಸಿದ್ದರು ಎಂದು ದೂರಿದರು. ಜಿಲ್ಲೆಯಲ್ಲಿ ಬಿಜೆಪಿ ಬೆಳವಣಿಗೆ ಕಾಣುತ್ತಿದ್ದು, ಉಸ್ತುವಾರಿ ಸಚಿವರಾಗಿ ಅಶ್ವತ್ಥನಾರಾಯಣ ಉತ್ತಮ ಕೆಲಸ ಮಾಡುತ್ತಿದ್ದಾರೆ. ಇದರಿಂದ ಹತಾಶರಾಗಿ ಕಾಂಗ್ರೆಸ್‌ನವರು ಈ ರೀತಿ ವರ್ತಿಸುತ್ತಿದ್ದಾರೆ ಎಂದರು.

ಸ್ಪರ್ಧೆಗೆ ಸಿದ್ಧ: 'ಪಕ್ಷದವರಿಷ್ಠರು ಎಲ್ಲಿ ಸ್ಪರ್ಧೆ ಮಾಡು ಎನ್ನುತ್ತಾರೋ ಅಲ್ಲಿಂದ ಸ್ಪರ್ಧೆ ಮಾಡುವುದಕ್ಕೆ ಸಿದ್ದನಿದ್ದೇನೆ. ಒಂದು ವೇಳೆ ಕನಕಪುರದಿಂದ ಸ್ಪರ್ಧೆಮಾಡು ಎಂದರೂ ನಾನುಸಿದ್ಧ’ ಎಂದು ಹೇಳಿದರು.

ಬಿಜೆಪಿಗೆ ಸೇರ್ಪಡೆ: ಹಳೇ ಮೈಸೂರು ಭಾಗದ ಅನೇಕ ಮುಖಂಡರು ಬಿಜೆಪಿ ಸೇರ್ಪಡೆಗೆ ಉತ್ಸಾಹ ತೋರಿದ್ದಾರೆ. ಈ ಬಗ್ಗೆ ಪಕ್ಷದ ವರಿಷ್ಟರಿಗೂ ಮಾಹಿತಿ ನೀಡಿದ್ದೇನೆ. ಅವರು ಅನುಮತಿ ನೀಡಿದರೆ ಅವರನ್ನೆಲ್ಲ ಪಕ್ಷಕ್ಕೆ ಕರೆತರುತ್ತೇನೆ ಎಂದರು. ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿದ್ದೆವು. ಆದರೆ ಮತದಾರರು ವೈಯಕ್ತಿಕ ನಿಲುವಿನ ಆಧಾರದಲ್ಲಿ ಮತದಾನ ಮಾಡಿದ ಕಾರಣ ಹಿನ್ನಡೆ ಆಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.