
ರಾಮನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶನಿವಾರ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ರಾಮನಗರ: ‘ಸಮಾಜಕ್ಕೆ ದಾರಿದೀಪವಾಗಿರುವ ದಾಸಶ್ರೇಷ್ಠ ಕನಕದಾಸರಲ್ಲಿ ಭಕ್ತಿಯಷ್ಟೇ ಬಂಡಾಯವೂ ಇತ್ತು. ಉಡುಪಿ ಕೃಷ್ಣನ ದರ್ಶನಕ್ಕೆ ಅವಕಾಶ ನೀಡದಿದ್ದಾಗ, ಕೃಷ್ಣನೇ ಅವರತ್ತ ತಿರುಗಿದ. ಇದು ಅವರಲ್ಲಿದ್ದ ಭಕ್ತಿ ಮತ್ತು ಬಂಡಾಯಕ್ಕೆ ಸಾಕ್ಷಿ’ ಎಂದು ಉಪನ್ಯಾಸಕ ಸುರೇಶ್ ಅಭಿಪ್ರಾಯಪಟ್ಟರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ ಶನಿವಾರ ಹಮ್ಮಿಕೊಂಡಿದ್ದ ಕನಕದಾಸ ಜಯಂತಿಯಲ್ಲಿ ಉಪನ್ಯಾಸ ನೀಡಿದ ಅವರು, ‘ವರ್ಣ ವ್ಯವಸ್ಥೆ, ಜಾತಿ ವ್ಯವಸ್ಥೆ ಹಾಗೂ ಮನುಷ್ಯ ವಿರೋಧಿ ಕಟ್ಟುಪಾಡುಗಳ ವಿರುದ್ಧ ಸಮಾಜವನ್ನು ಕನಕದಾಸರು ಎಚ್ಚರಿಸಿದರು’ ಎಂದರು.
‘12ನೇ ಶತಮಾನದಲ್ಲಿನ ಸಮಾನತೆಯು ಕ್ರಾಂತಿಯ ರಥವನ್ನು ಕನಕದಾಸರು ಹದಿನಾರನೇ ಶತಮಾನದಲ್ಲಿ ಎಳೆದರು. ಕುಲ ಕುಲವೆಂದು ಹೊಡೆದಾಡದಿರಿ ಎನ್ನುವ ಮೂಲಕ ಜಾತಿ,ಮತದ ಶ್ರೇಷ್ಠತೆ ವಿರುದ್ಧ ಬಂಡೆದ್ದರು. ಎಲ್ಲರನ್ನೂ ಪ್ರೀತಿ ಮತ್ತು ಗೌರವದಿಂದ ಕಾಣುವುದೇ ನಾವು ಅವರಿಗೆ ಕೊಡುವ ನಿಜವಾದ ಗೌರವ’ ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಮಾತನಾಡಿ, ‘ಹಾಲುಮತ ಸಮಾಜವು ಕನಕದಾಸ, ಕಾಳಿದಾಸ, ಹಕ್ಕ ಬುಕ್ಕರು, ಅಹಲ್ಯಬಾಯಿ ಹೋಳ್ಕರ್ ಸೇರಿದಂತೆ ಹಲವು ಮಹನೀಯರನ್ನು ಈ ಸಮಾಜಕ್ಕೆ ಕೊಡುಗೆಯಾಗಿ ನೀಡಿದೆ. ಭಕ್ತಿ ಮತ್ತು ಬಂಡಾಯಕ್ಕೆ ಇನ್ನೊಂದು ಹೆಸರಾದ ಕನಕದಾಸರು, ಸಮಾಜದಲ್ಲಿದ್ದ ಜಾತೀಯತೆ ಹಾಗೂ ಅಂಕುಡೊಂಕುಗಳನ್ನು ಹೋಗಲಾಡಿಸಲು ಶ್ರಮಿಸಿದರು’ ಎಂದರು.
ರಾಮನಗರ ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ರೇಣುಕಪ್ಪ, ‘ನಗರಸಭೆ ವ್ಯಾಪ್ತಿಯ ಎರಡು ಜಾಗಗಳಿಗೆ ಕನಕದಾಸ ಮತ್ತು ಸಂಗೊಳ್ಳಿ ರಾಯಣ್ಣ ವೃತ್ತ ಎಂದು ನಾಮಕರಣ ಮಾಡಬೇಕು’ ಎಂದು ಒತ್ತಾಯಿಸಿದರು.
ಉಪ ವಿಭಾಗಾಧಿಕಾರಿ ಬಿನೋಯ್ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ್ ತೇಜಸ್ವಿನಿ, ಜಿ.ಪಂ. ಸಹ ಕಾರ್ಯದರ್ಶಿ ಶಿವಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ, ಬಿಡದಿ ಪುರಸಭೆ ಸದಸ್ಯ ಮನು ರವಿ, ರೇಣುಕಾ, ತಾಲ್ಲೂಕು ಕುರುಬರ ಸಂಘದ ಗೌರವಾಧ್ಯಕ್ಷ ಸಿದ್ದಯ್ಯ, ಹಿಂದುಳಿದ ವರ್ಗಗಳ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷ ರೈಡ್ ನಾಗರಾಜ್, ಶಿವಕುಮಾರಸ್ವಾಮಿ, ಚಲುವರಾಜು, ಶಿವಶಂಕರ್ ಹಾಗೂ ಇತರರು ಇದ್ದರು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪುರಸ್ಕರಿಸಲಾಯಿತು. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೆ. ಸತೀಶ್ ಸ್ವಾಗತಿಸಿದರು. ಡಾ. ಅಂಕನಹಳ್ಳಿ ಪಾರ್ಥ ನಿರೂಪಣೆ ಮಾಡಿದರು.
ಕನಕದಾಸ ಜಯಂತಿಯಲ್ಲಿ ಎಲ್ಲರನ್ನೂ ಒಳಗೊಳ್ಳದೆ ಜಾತಿ ಜಯಂತಿ ಮಾಡಲಾಗಿದೆ. ಕಾರ್ಯಕ್ರಮವನ್ನು ಸರಿಯಾಗಿ ಆಯೋಜಿಸಿಲ್ಲ. ನಮ್ಮವರೇ ಮುಖ್ಯಮಂತ್ರಿ ಇದ್ದರೂ ಸಮುದಾಯದ ಬಗ್ಗೆ ಇಷ್ಟೊಂದು ತಾತ್ಸಾರವೇಕೆ ?– ರೇಣುಕಾ ಪ್ರಸಾದ್ ಅಧ್ಯಕ್ಷ ರಾಮನಗರ ತಾಲ್ಲೂಕು ಕುರುಬರ ಸಂಘ
ಕನಕದಾಸರ ಚಿಂತನೆಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಜೊತೆಗೆ ಸಮಾಜದಲ್ಲಿ ಹೆಚ್ಚು ಪಸರಿಸಬೇಕು. ಕನಕದಾಸರ ಬದುಕು ವಿಚಾರಧಾರೆ ಹಾಗೂ ಕೊಡುಗೆ ಬಗ್ಗೆ ಎಲ್ಲರಲ್ಲೂ ಜಾಗೃತಿ ಮೂಡಿಸಬೇಕು– ಜಿ.ಎನ್. ನಟರಾಜ್ ಅಧ್ಯಕ್ಷ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
ಜಿಲ್ಲಾಡಳಿತದ ವಿರುದ್ಧ ಆಕ್ರೋಶ; ಪೊಲೀಸ್ ಬಂದೋಬಸ್ತ್‌ನಲ್ಲಿ ಕಾರ್ಯಕ್ರಮ
ಕಾರ್ಯಕ್ರಮ ಆರಂಭಕ್ಕೆ ಮುಂಚೆ ಜೂನಿಯರ್ ಕಾಲೇಜು ಮೈದಾನದಿಂದ ಅಂಬೇಡ್ಕರ್ ಭವನದವರೆಗೆ ಕನಕದಾಸರ ಚಿತ್ರದ ಮೆರವಣಿಗೆಯನ್ನು ಸರಿಯಾಗಿ ಆಯೋಜಿಸಿಲ್ಲ ಎಂದು ಕುರುಬ ಸಮುದಾಯದ ಮುಖಂಡರು ಹಾಗೂ ಹಿಂದುಳಿದ ವರ್ಗಗಳ ಮಹಾ ಒಕ್ಕೂಟದ ಪದಾಧಿಕಾರಿಗಳು ಜಿಲ್ಲಾಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಒಳ್ಳೆಯ ಬೆಳ್ಳಿರಥ ತಂದಿಲ್ಲ ಹೇಳಿಕೊಳ್ಳುವಂತಹ ಕಲಾತಂಡಗಳಿಲ್ಲ. ಜಿಲ್ಲಾಮಟ್ಟದ ಅಧಿಕಾರಿಗಳಿಲ್ಲ. ಇದು ಸಮುದಾಯಕ್ಕೆ ಮತ್ತು ಕನಕದಾಸರಿಗೆ ಮಾಡಿದ ಅವಮಾನ ಎಂದು ಸಮುದಾಯದ ನಾರಾಯಣಪ್ಪ ನಾಗ ಸಂದೀಪ್ ಮಲ್ಲೇಶ್ ಹಿಂದುಳಿದ ವರ್ಗಗಳ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷ ರೈಡ್ ನಾಗರಾಜ್ ಹಾಗೂ ಇತರರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲಿದ್ದ ಉಪ ವಿಭಾಗಾಧಿಕಾರಿ ಬಿನೋಯ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ. ಸತೀಶ್ ಸಮಾಧಾನಪಡಿಸಲು ಯತ್ನಿಸಿದರೂ ಶಾಂತರಾಗದ ಮುಖಂಡರು ಜಿಲ್ಲಾಡಳಿತದ ವಿರುದ್ಧ ಧಿಕ್ಕಾರ ಕೂಗಿದರು. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಸರ್ಕಲ್ ಇನ್‌ಸ್ಪೆಕ್ಟರ್ ಕೃಷ್ಣ ಸೇರಿದಂತೆ ಹಲವರು ಬಂದರು. ಪೊಲೀಸರ ಮನವೊಲಿಕೆಗೂ ಮುಖಂಡರು ಬಗ್ಗದಿದ್ದಾಗ ವಾಗ್ವಾದ ನಡೆಯಿತು. ಕಡೆಗೆ ಮುಖಂಡರು ಮೆರವಣಿಗೆ ಬಹಿಷ್ಕರಿಸಿ ಹೊರನಡೆದರು. ಪೊಲೀಸ್ ಬಂದೋಬಸ್ತ್‌ನಲ್ಲಿ ಮೆರವಣಿಗೆ ಅಂಬೇಡ್ಕರ್ ಭವನಕ್ಕೆ ಬಂತು. ಅಲ್ಲಿಯೂ ಮುಖಂಡರು ಜಮಾಯಿಸಿ ಧಿಕ್ಕಾರ ಕೂಗಿದರು. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಕೆಲ ಮುಖಂಡರು ಸ್ಥಳದಿಂದ ಹೊರಟರೆ ಉಳಿದವರು ಒಳಕ್ಕೆ ಹೋದರು. ಪೊಲೀಸ್ ಬಂದೋಬಸ್ತ್‌ನಲ್ಲಿ ಕಾರ್ಯಕ್ರಮ ಜರುಗಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.