
ಕನಕಪುರ: ಹಲವು ವರ್ಷಗಳಿಂದ ಗಿಡಗಂಟೆ ಬೆಳೆದು ಕಾಡಿನಂತಾಗಿದ್ದ ಬಿಜಿಎಸ್ ಬಡಾವಣೆ ಲೋಕಾಯುಕ್ತರ ಇತ್ತೀಚಿನ ಒಂದೇ ಭೇಟಿಗೆ ಸ್ವಚ್ಛಗೊಂಡು ನಳನಳಿಸುತ್ತಿದೆ.
ರಾಜೀವ್ ಗಾಂಧಿ ವಸತಿ ಯೋಜನೆ ಅಡಿ ಇಲ್ಲಿನ ಕರಡಿಗುಡ್ಡೆ ಬಳಿ ನಗರಸಭೆ ನಿರ್ಮಿಸಿರುವ ಬಿಜಿಎಸ್ ಬಡಾವಣೆಗೆ ಶುಕ್ರವಾರ ಭೇಟಿ ನೀಡಿದ್ದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅಲ್ಲಿಯ ಪರಿಸ್ಥಿತಿ ಕಂಡು ನಗರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.
ಲೋಕಾಯುಕ್ತರ ಭೇಟಿಯಿಂದ ತತ್ತರಿಸಿದ ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಶನಿವಾರ ಬೆಳಗ್ಗೆಯೇ ಬಿಜಿಎಸ್ ಬಡಾವಣೆಯ ಸ್ವಚ್ಛತಾ ಕಾರ್ಯಕ್ಕೆ ಮುಂದಾದರು. ಪೌರಾಯುಕ್ತ ಶ್ರೀನಿವಾಸ್ ಉಸ್ತುವಾರಿಯಲ್ಲಿ ನಗರಸಭೆ ಸಿಬ್ಬಂದಿ, ಪೌರಕಾರ್ಮಿಕರು ಯಂತ್ರಗಳ ಮೂಲಕ ಗಿಡಗಂಟೆ ಕತ್ತರಿಸಿದರು.
ಬಡಾವಣೆಯ ಮನೆಗಳ ಅಕ್ಕಪಕ್ಕ ಆಳೆತ್ತರ ಬೆಳೆದು ಗಿಡಗಂಟೆ, ರಸ್ತೆಯಲ್ಲಿ ಗಲೀಜು ತೆರವುಗೊಳಿಸಿ ಸ್ವಚ್ಛ ಮಾಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು. ಚರಂಡಿ ಇಲ್ಲದೆ ಅವೈಜ್ಞಾನಿಕ ಬಡಾವಣೆ ನಿರ್ಮಾಣ ಕಂಡು ಬೇಸರ ವ್ಯಕ್ತಪಡಿಸಿದ್ದರು.
ನಗರಸಭೆ ಅಧಿಕಾರಿಗಳು ಏನು ಮಾಡುತ್ತಿದ್ದೀರಿ? ಈ ಬಡಾವಣೆ ನಗರಸಭೆ ವ್ಯಾಪ್ತಿಗೆ ಬರುವುದಿಲ್ಲವೇ? ಎಂದು ಅಧಿಕಾರಿಗಳ ಚಳಿ ಬಿಡಿಸಿದ್ದರು.
ಬಿಜಿಎಸ್ ಬಡಾವಣೆಯ ಸ್ವಚ್ಛತಾ ಕಾರ್ಯವನ್ನು ಶನಿವಾರ ಬೆಳಗ್ಗೆಯಿಂದ ಆರಂಭಿಸಿದ್ದೇವೆ. ಭಾನುವಾರವೂ ಸ್ವಚ್ಛತಾ ಕಾರ್ಯ ಮುಂದುವರೆದಿದೆ. ಪೂರ್ಣಗೊಳಿಸಲು ಇನ್ನೂ ಒಂದು ವಾರ ಬೇಕಾಗುತ್ತದೆ. ಬಡಾವಣೆ ಪೂರ್ತಿಯಾಗಿ ಸ್ವಚ್ಛಗೊಳಿಸುವಂತೆ ಪೌರ ಸಿಬ್ಬಂದಿಗೆ ತಾಕೀತು ಮಾಡಲಾಗಿದೆ. ಮುಂದೆ ಈ ರೀತಿ ಆಗದಂತೆ ಕ್ರಮ ವಹಿಸಲಾಗುವುದು.ಶ್ರೀನಿವಾಸ್ ಪೌರಾಯುಕ್ತ ಕನಕಪುರ ನಗರಸಭೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.