ಕನಕಪುರ: ನ್ಯಾಯಾಲಯದ ಆದೇಶ ಉಲ್ಲಂಘಿಸಿ ಪೇಟೆ ಕೆರೆ ಕಾಯ್ದಿರಿಸಿದ್ದ ಜಾಗದಲ್ಲಿ ಕೋರ್ಟ್ ನಿರ್ಮಾಣ ಮಾಡಲಾಗಿದೆ ಎಂದು ಸಂಘದ ಪದಾಧಿಕಾರಿಗಳು ದೂರಿದ್ದಾರೆ.
ಶುಕ್ರವಾರ ರೈತ ಸಂಘದಿಂದ ನಡೆದ ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾ ಮುಖಂಡರಾದ ಸಂಪತ್, ಚಂದ್ರಶೇಖರ್, ಮಂಜುನಾಥ್, ದೇವರಾಜ್ ಮಾತನಾಡಿ, 36.20 ಎಕರೆ ವಿಸ್ತೀರ್ಣವಿದ್ದ ಪೇಟೆ ಕೆರೆಯಲ್ಲಿ 20 ಎಕರೆಯನ್ನು ಕೆರೆಗೆ ಕಾಯ್ದಿರಿಸಿ ಅದನ್ನು ಅಭಿವೃದ್ಧಿಪಡಿಸಿದ ನಂತರ ಉಳಿದ ಜಾಗವನ್ನು ಸರ್ಕಾರಿ ಉದ್ದೇಶಕ್ಕೆ ಬಳಸಿಕೊಳ್ಳುವಂತೆ 2013ರಲ್ಲಿ ಹೈಕೋರ್ಟ್ ಆದೇಶ ನೀಡಿತ್ತು.
ತಾಲ್ಲೂಕು ಆಡಳಿತ ಹೆಚ್ಚಿನ ಜಾಗ ಬೇಕೆಂದು ಮೇಲ್ಮನವಿ ಸಲ್ಲಿಸಿತ್ತು. ಆದರೆ, ನ್ಯಾಯಾಲಯ ಕೆರೆ ಅಭಿವೃದ್ಧಿಗೆ 20 ಎಕರೆ ಕಾಯ್ದಿರಿಸಿ ಅದಕ್ಕೆ ನಕ್ಷೆ ತಯಾರಿಸಿ ಉಳಿದ ಜಾಗ ಸರ್ಕಾರಿ ಕಚೇರಿ ನಿರ್ಮಾಣಕ್ಕೆ ಬಳಸಿಕೊಳ್ಳುವಂತೆ 2015ರಲ್ಲಿ ಮತ್ತೆ ಆದೇಶ ನೀಡಿತ್ತು.
ನ್ಯಾಯಾಲಯದ ಆದೇಶದಂತೆ ಮೊದಲು ಕೆರೆ 20 ಎಕರೆ ಜಾಗ ಗುರುತಿಸಿ ಅದಕ್ಕೆ ನಕ್ಷೆ ತಯಾರಿಸಿ ಕೆರೆ ಅಭಿವೃದ್ಧಿಪಡಿಸಿ ಉಳಿದಂತ ಜಾಗದಲ್ಲಿ ಸರ್ಕಾರಿ ಕಚೇರಿಗಳಿಗೆ ಅವಕಾಶ ಮಾಡಿಕೊಡಬೇಕೆಂದು ರೈತ ಸಂಘದಿಂದ ನಿರಂತರ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾಡಳಿತ ನ್ಯಾಯಾಲಯಕ್ಕೆ ನಾಲ್ಕು ಎಕರೆ ಜಾಗ ನೀಡಿದೆ. ಹೊಸದಾಗಿ ಕೋರ್ಟ್ ನಿರ್ಮಾಣ ಮಾಡಲು ನೀಡಿರುವ ನಾಲ್ಕು ಎಕರೆ ಬಳಕೆ ಮಾಡಿಕೊಳ್ಳುವುದಕ್ಕೆ ಯಾವುದೇ ಅಭ್ಯಂತರವಿಲ್ಲ. ಆದರೆ, ಕೆರೆಗೆ ಬಿಟ್ಟಿರುವ ಜಾಗದಲ್ಲಿ ನ್ಯಾಯಾಲಯದ ಕಟ್ಟಡ ನಿರ್ಮಾಣ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದರು.
ಕೆರೆ ಉಳಿಸುವಂತೆ ನ್ಯಾಯಾಲಯವೇ ಸಾರ್ವಜನಿಕರಿಗೆ ಹೇಳುತ್ತಿದೆ. ಆದರೆ, ಪೇಟೆಕೆರೆ ವಿಚಾರದಲ್ಲಿ ನ್ಯಾಯಾಲಕ್ಕೆ ಕೊಟ್ಟಿರುವಂತಹ ನಾಲ್ಕು ಎಕರೆ ಜಾಗದ ಹಿಂಭಾಗದಲ್ಲಿ ಬಿಟ್ಟು ಕೆರೆಗೆ ಕಾಯ್ದಿರಿಸಿದ್ದ 20 ಎಕರೆ ಜಾಗದಲ್ಲಿ ನ್ಯಾಯಾಲಯ ಮತ್ತು ನ್ಯಾಯಾಲಕ್ಕೆ ಬೇಕಾದ ಸಂಪರ್ಕ ರಸ್ತೆ ನಿರ್ಮಿಸಿದೆ ಎಂದು ಆರೋಪಿಸಿದರು.
ಕೆರೆಗೆ ಕಾಯ್ದಿರಿಸಿದ 20 ಎಕರೆ ಜಾಗದ ಗಡಿ ಇಲ್ಲಿವರೆಗೂ ಗುರುತಿಸಿಲ್ಲ. ಅಲ್ಲದೆ, ಕೆರೆ ಜಾಗ ಸುತ್ತಲೂ ಒತ್ತುವರಿಯಾಗಿದೆ. ಆ ಜಾಗವನ್ನು ಗುರುತಿಸಿ ಒತ್ತುವರಿ ತೆರವುಗೊಳಿಸುವ ಕೆಲಸ ಮಾಡುತ್ತಿಲ್ಲ ಎಂದು ದೂರಿದರು.
ರೈತ ಮುಖಂಡರಾದ ಶಿವರಾಜು, ಕೆಂಚೇಗೌಡ, ನಲ್ಲಹಳ್ಳಿ ಶ್ರೀನಿವಾಸ್, ಹೊನ್ನೇಗೌಡ, ಪುಟ್ಟರಾಮು, ಪಾತಯ್ಯ, ರಾಜಣ್ಣ, ಆನಂದ್ ರಾವ್, ಪ್ರಕಾಶ್, ಸತೀಶ್, ಶಿವಲಿಂಗೇಗೌಡ ಸೇರಿದಂತೆ ಹಲವು ರೈತ ಮುಖಂಡರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.