
ಕನಕಪುರ: ಯಡಮಾರನಹಳ್ಳಿ ಕೆಇಬಿ ಸ್ಟೇಷನ್ ಮುಂಭಾಗದ ಸಾತನೂರು ಮುಖ್ಯ ರಸ್ತೆಯ ತಿರುವಿನಲ್ಲಿ ಸೋಮವಾರ ಬೆಳಗ್ಗೆ ಒಂಟಿ ಕಾಡಾನೆಯೊಂದು ಬೈಕ್ ಮೇಲೆ ಹೊರಟಿದ್ದ ಕರ ವಸೂಲಿಗಾರನ ಮೇಲೆ ದಾಳಿ ನಡೆಸಿದೆ.
ಅಚ್ಚಲು ಗ್ರಾಮ ಪಂಚಾಯಿತಿ ಕರ ವಸೂಲಿಗಾರ ರುದ್ರಸ್ವಾಮಿ(50) ಅವರ ತಲೆಗೆ ಆನೆ ಸೊಂಡಿಲಿನಿಂದ ಹೊಡೆದಿದ್ದರಿಂದ ಕೆಳಗೆ ಬಿದ್ದ ಅವರಿಗೆ ತಲೆ ಮತ್ತು ಮುಖಕ್ಕೆ ತೀವ್ರ ಪೆಟ್ಟಾಗಿದೆ. ತಲೆ ಮತ್ತು ಮೂಗು ಬಾಯಿಯಲ್ಲಿ ರಕ್ತ ಸೋರಿದೆ.
ಯಡಮಾರನಹಳ್ಳಿ ಗ್ರಾಮದ ರುದ್ರಸ್ವಾಮಿ ಸೋಮವಾರ ಬೆಳಗ್ಗೆ ಬೈಕಿನಲ್ಲಿ ಸಾತನೂರು ಕಡೆಗೆ ಹೋಗುತ್ತಿದ್ದಾಗ ಮುಖ್ಯ ರಸ್ತೆ ತಿರುವಿನಲ್ಲಿ ಏಕಾಏಕಿ ಆನೆ ದಾಳಿ ನಡೆಸಿದೆ. ಅಚ್ಚಲು ಬೆಟ್ಟದಲ್ಲಿದ್ದ ಆನೆ ಬೆಳಗ್ಗೆ ಮುತ್ತತ್ತಿ ಅರಣ್ಯ ಪ್ರದೇಶಕ್ಕೆ ಹೋಗುವಾಗ ಈ ಘಟನೆ ನಡೆದಿದೆ
ಎನ್ನಲಾಗಿದೆ.
ರಸ್ತೆಯಲ್ಲಿ ಹೋಗುತ್ತಿದ್ದವರು ತಕ್ಷಣ ಅವರ ಸಹಾಯಕ್ಕೆ ಹೋಗಿದ್ದಾರೆ. ನಂತರ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಅಧಿಕಾರಿಗಳು ಕಾಡಾನೆಯನ್ನು ಕಾಡಿಗೆ ಓಡಿಸಿದರು.
ಗಾಯಾಳು ರುದ್ರಸ್ವಾಮಿ ಅವರನ್ನು ಕನಕಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಬೆಂಗಳೂರಿನ ನಿಮ್ಹಾನ್ಸ್‌ಗೆ ದಾಖಲಿಸಲಾಗಿದೆ.
ಅವರ ಆರೋಗ್ಯ ಸ್ಥಿರವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವೈದ್ಯರ ಸಲಹೆ ಮೇರೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಿರುವುದಾಗಿ ಅರಣ್ಯ ಇಲಾಖೆ ಆರ್‌ಎಫ್‌ಒ ಅನಿಲ್ ಕುಮಾರ್ ತಿಳಿಸಿದ್ದಾರೆ. ಎಸಿಎಫ್ ನಾಗೇಂದ್ರ ಪ್ರಸಾದ್ ಅವರು ಘಟನೆ ಕುರಿತು ಮಾಹಿತಿ
ಪಡೆದರು.
ವೈಲ್ಡ್ ಲೈಫ್ಎ ಸಿಎಫ್ ನಾಗೇಂದ್ರ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ದಾಳಿ ಮಾಡಿರುವ ಒಂಟಿ ಆನೆಯನ್ನು ಅರಣ್ಯ ಇಲಾಖೆ ನೌಕರರು ಮತ್ತು ಸಿಬ್ಬಂದಿಗಳು ಮುತ್ತತ್ತಿ ಅರಣ್ಯ ಪ್ರದೇಶಕ್ಕೆ ಯಶಸ್ವಿಯಾಗಿ ಓಡಿಸಿದ್ದಾರೆ.