ADVERTISEMENT

ಕನಕಪುರ | ಭಾರಿ ಮಳೆ: ಅಂಗಡಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2025, 2:52 IST
Last Updated 11 ಅಕ್ಟೋಬರ್ 2025, 2:52 IST
ಕನಕಪುರ ಎಂ.ಜಿ. ರಸ್ತೆ ದೊಡ್ಡ ಹಳ್ಳದ ಪಕ್ಕದಲ್ಲಿ ಮಳೆ ನೀರು ಅಂಗಡಿಗೆ ನುಗ್ಗಿರುವುದು
ಕನಕಪುರ ಎಂ.ಜಿ. ರಸ್ತೆ ದೊಡ್ಡ ಹಳ್ಳದ ಪಕ್ಕದಲ್ಲಿ ಮಳೆ ನೀರು ಅಂಗಡಿಗೆ ನುಗ್ಗಿರುವುದು   

ಕನಕಪುರ: ನಗರದಲ್ಲಿ ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಹಳ್ಳ–ಕೊಳ್ಳಗಳು ತುಂಬಿ ಹರಿದಿವೆ. ಅಂಗಡಿ ಮಳಿಗೆಗಳಿಗೆ ನೀರು ನುಗ್ಗಿ, ವಿದ್ಯುತ್ ಕಂಬಗಳು ಧರೆಗೆ ಉರುಳಿ, ಹೆಚ್ಚಿನ ಅನಾಹುತ ಸಂಭವಿಸಿದೆ. 

ನಗರದ ಮುಖ್ಯರಸ್ತೆಯಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಪಕ್ಕದಲ್ಲಿ ದೊಡ್ಡ ಹಳ್ಳವಿದೆ. ಈ ಹಳ್ಳಕ್ಕೆ ಹೊಂದಿಕೊಂಡಂತೆ ರೂರಲ್ ಎಜುಕೇಶನ್ ಸೊಸೈಟಿಯ ವಾಣಿಜ್ಯ ಮಳಿಗೆ ಇದ್ದು, ಅದರ ತ್ಯಾಜ್ಯವನ್ನು ಹಳ್ಳಕ್ಕೆ ಸುರಿಯಲಾಗಿರುವುದರಿಂದ ಹಳ್ಳದಲ್ಲಿ ಭಾರಿ ಪ್ರಮಾಣದ ನೀರು ಬಂದಿದೆ. ನೀರು ಹಳ್ಳದಿಂದ ಪಕ್ಕದ ಹಳೆಯ ಕೆನರಾ ಬ್ಯಾಂಕಿನ ಕೆಳಭಾಗದಲ್ಲಿರುವ ಅಂಗಡಿ ಮಳಿಗೆಗಳಿಗೆ ನುಗ್ಗಿದೆ.

ನೀರು ನುಗ್ಗಿದ್ದರಿಂದ ಜೆರಾಕ್ಸ್ ಯಂತ್ರ, ತೂಕದ ಯಂತ್ರ ಸೇರಿದಂತೆ ಹಲವು ಯಂತ್ರೋಪಕರಣಗಳು ನಾಶವಾಗಿವೆ.

ADVERTISEMENT

ಸೇಂಟ್‌ ಥಾಮಸ್ ಶಾಲೆ ಪಕ್ಕದ ಹಳ್ಳದಲ್ಲಿಯೂ ನೀರಿನ ಹರಿವು ಹೆಚ್ಚಾಗಿದ್ದು, ಹಳ್ಳಕ್ಕೆ ಕಟ್ಟಿದ್ದ ತಡೆಗೋಡೆ ಕೊಚ್ಚಿಹೋಗಿದೆ. ವಿದ್ಯುತ್ ಸರಬರಾಜು ಕಂಬ ಧರೆಗುರುಳಿದಿದೆ. ರಾತ್ರಿಯಿಡೀ ವಿದ್ಯುತ್ ಇಲ್ಲದೆ ಬಡಾವಣೆ ಜನರು ಪರದಾಡುವಂತಾಗಿದೆ.

ನಗರದ ಹಲವೆಡೆ ಮಳೆಯಿಂದ ಹಾನಿ ಸಂಭವಿಸಿದೆ. ನಗರಸಭೆ ಅಧಿಕಾರಿಗಳು ಮುಂಜಾಗ್ರತೆ ವಹಿಸಿ ಹಳ್ಳದಲ್ಲಿದ್ದ ಹೂಳು ತೆಗೆದಿದ್ದರೆ ನೀರು ಸರಾಗವಾಗಿ ಹರಿಯುತ್ತಿತ್ತು ಎನ್ನುತ್ತಾರೆ ಸಾರ್ವಜನಿಕರು. 

ಅಂಗಡಿ ಮಳಿಗೆಗಳಿಗೆ ನೀರು ನುಗ್ಗಿ ಅಂಗಡಿಯಲ್ಲಿನ ಯಂತ್ರೋಪಕರಣ ವಸ್ತುಗಳು ನಾಶವಾಗಿದ್ದು, ಆಗಿರುವ ನಷ್ಟಕ್ಕೆ ಸರ್ಕಾರದಿಂದ ಪರಿಹಾರ ದೊರಕಿಸಬೇಕು. ಹಳ್ಳದಲ್ಲಿನ ಹೂಳು ತೆಗಿಸಬೇಕು ಎಂದು ಸಂತ್ರಸ್ತರು ಮನವಿ ಮಾಡಿದ್ದಾರೆ.

ಅಂಗಡಿಯಲ್ಲಿ ತುಂಬಿದ ನೀರನ್ನು ತೆಗೆದು ಹೊರ ಹಾಕುತ್ತಿರುವುದು
ಹಳ್ಳಕ್ಕೆ ಕಟ್ಟಡದ ತ್ಯಾಜ್ಯವನ್ನು ತುಂಬಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.