ADVERTISEMENT

ಕನಕಪುರ: ಕಬ್ಬಾಳಮ್ಮ ಜಾತ್ರೆ ಕೊಂಡೋತ್ಸವ ‌

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 4:42 IST
Last Updated 15 ಫೆಬ್ರುವರಿ 2026, 4:42 IST
ಕಬ್ಬಾಳಮ್ಮ ದೇವಿ 
ಕಬ್ಬಾಳಮ್ಮ ದೇವಿ    

ಕನಕಪುರ: ತಾಲ್ಲೂಕಿನ ಕಬ್ಬಾಳಮ್ಮ ದೇವಿ ಜಾತ್ರಾ ಮಹೋತ್ಸವ ಶುಕ್ರವಾರದಿಂದ ಪ್ರಾರಂಭಗೊಂಡಿದೆ. ಮುಂದಿನ ಶುಕ್ರವಾರದವರೆಗೆ ಒಂದು ವಾರ ನಡೆಯಲಿದೆ.

ಕಬ್ಬಾಳಮ್ಮ ದೇವಸ್ಥಾನ ಗ್ರೇಡ್ ಒನ್ ದೇವಾಲಯ. ಮುಜರಾಯಿ ಇಲಾಖೆಗೆ ಸೇರಿದೆ. ರಾಜ್ಯದ ನಾನಾ ಭಾಗಗಳಲ್ಲಿ ದೇವರ ಭಕ್ತರಿದ್ದು ಜಾತ್ರಾ ಮಹೋತ್ಸವಕ್ಕೆ ಅಪಾರ ಸಂಖ್ಯೆಯಲ್ಲಿ ಬರುತ್ತಾರೆ. ತಾಲ್ಲೂಕಿನಲ್ಲಿ ನಡೆಯುವ ದೊಡ್ಡ ಜಾತ್ರೆ ಇದಾಗಿದೆ.

ಕಬ್ಬಾಳಮ್ಮ ಜಾತ್ರಾ ಮಹೋತ್ಸವ ಸುತ್ತಮುತ್ತಲ 13ಕ್ಕೂ ಹೆಚ್ಚು ಗ್ರಾಮಗಳ ಜನರ ಆಚರಣೆ ಮಾಡುತ್ತಿದ್ದು, ಪ್ರತಿ ಗ್ರಾಮದಲ್ಲೂ ಜಾತ್ರಾ ಮಹೋತ್ಸವ ವಿಶೇಷ ಕಾರ್ಯಕ್ರಮ ನಡೆಯಲಿದೆ.

ಫೆ.13ರಂದು ಕಚ್ಚುವನಹಳ್ಳಿ ಗ್ರಾಮಸ್ಥರು ಮತ್ತು ಅರ್ಚಕರಿಂದ ಹೊನ್ನೇರು ಚಪ್ಪರ ಕಾರ್ಯಕ್ರಮ, ಫೆ.14ರಂದು ಅರ್ಚಕರು ಮತ್ತು ಕಬ್ಬಾಳು ಗ್ರಾಮಸ್ಥರಿಂದ ದೇವತಾ ಕಾರ್ಯ ಪೂಜೆ, ಫೆ.15ರಂದು ಮಹಾಶಿವರಾತ್ರಿ, ಪುಣ್ಯಹಾ ಹೋಮ, ಅಭಿಷೇಕ, ಯಳವಾರ, ಕಾರ್ಯಕ್ರಮ ನಡೆಯಲಿದೆ.

ಫೆ.16ರಂದು ಪ್ರಾತಃಕಾಲ 6.15 ರಿಂದ 7.15ರೊಳಗೆ ಕಬ್ಬಾಳಮ್ಮ ಅಗ್ನಿಕೊಂಡ, ಮಧ್ಯಾಹ್ನ 3ಕ್ಕೆ ರಥೋತ್ಸವ, 17ರಂದು ಸಿಡಿಮುಡಿ, ರಾತ್ರಿ ಪಲ್ಲಕ್ಕಿ ಉತ್ಸವ, 18ರಂದು ಸಿಡಿಮುಡಿ, 19ರಂದು ದೇವತಾ ಕಾರ್ಯ, ಫೆ.20ರಂದು ಅಭಿಷೇಕ ಮತ್ತು ಹೋಮ ನಡೆಯಲಿದೆ.

ಕಬ್ಬಾಳಮ್ಮ ಜಾತ್ರಾ ಮಹೋತ್ಸವಕ್ಕೆ ಬರುವ ಭಕ್ತರಿಗೆ ಶುದ್ದ ಕುಡಿಯುವ ನೀರು, ಶೌಚಾಲಯ, ವೈದ್ಯಕೀಯ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಭದ್ರತೆ ಒದಗಿಸಲಾಗಿದೆ ಎಂದು ದೇವಾಲದ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿನಾರಾಯಣ ತಿಳಿಸಿದ್ದಾರೆ.

ಜಾತ್ರಾ ಮಹೋತ್ಸವ ಅಂಗವಾಗಿ ಜಾತ್ರೆಗೆ ಬರುವ ಭಕ್ತರ ಅನುಕೂಲಕ್ಕಾಗಿ ಬೆಂಗಳೂರು, ಚನ್ನಪಟ್ಟಣ ಹಾಗೂ ಕನಕಪುರದಿಂದ ರಾಜ್ಯ ಸಾರಿಗೆ ಸಂಸ್ಥೆ ವತಿಯಿಂದ ಜಾತ್ರಾ ವಿಶೇಷ ಬಸ್‌ಗಳ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.