ಕನಕಪುರ: ಗ್ರಾಮಕ್ಕೆ ನುಗ್ಗಿ ಸಾಕು ಪ್ರಾಣಿಗಳನ್ನು ಹೊತ್ತೊಯ್ದು ಜನರಲ್ಲಿ ಭಯ ಹುಟ್ಟಿಸಿದ್ದ ಚಿರತೆಯನ್ನು ಕಚ್ಚುವನಹಳ್ಳಿ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ಸೆರೆ ಹಿಡಿಯಲಾಗಿದೆ.
ತಾಲ್ಲೂಕಿನ ಸಾತನೂರು ಹೋಬಳಿ ಕಚ್ಚುವನಹಳ್ಳಿಯಲ್ಲಿ ಬೋನ್ ಇಟ್ಟು ಕಾರ್ಯಾಚರಣೆ ನಡೆಸಿ ಸುಮಾರು 3 ವರ್ಷದ ಗಂಡು ಚಿರತೆಯನ್ನು ಸೆರೆ ಹಿಡಿಯಲಾಗಿದೆ.
ಚಿರತೆಯು ಕಚ್ಚುವನಹಳ್ಳಿ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಣಿಸಿಕೊಂಡು ಜನರಲ್ಲಿ ಭಯ ಹುಟ್ಟಿಸಿತ್ತು. ಶನಿವಾರ ಗ್ರಾಮಕ್ಕೆ ನುಗ್ಗಿ ಮೇಕೆಗಳನ್ನು ಹೊತ್ತೈದಿತ್ತು. ಹಾಗಾಗಿ ಚಿರತೆಯನ್ನು ಸೆರೆ ಹಿಡಿಯುವಂತೆ ಕಚ್ಚುವನಹಳ್ಳಿ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಈ ಹಿನ್ನೆಲೆ ಅರಣ್ಯ ಇಲಾಖೆಯವರು ಕಚ್ಚುವನಹಳ್ಳಿಯ ಮಾವಿನ ತೋಟದಲ್ಲಿ ಬೋನ್ ಇಟ್ಟಿದ್ದರು.
ಚಿರತೆ ಬೋನಿನ ಕಡೆ ಬರದೆ ಸೋಮವಾರ ರಾತ್ರಿ ಗ್ರಾಮಕ್ಕೆ ನುಗ್ಗಿ ಮೇಕೆಯನ್ನು ಕೊಂದು ಅಲ್ಲೇ ಬಿಟ್ಟು ಹೋಗಿತ್ತು. ಅದೇ ಮೇಕೆಯನ್ನು ಬೋನಿನಲ್ಲಿ ಇಟ್ಟಿದ್ದರಿಂದ ಮಂಗಳವಾರ ಬೆಳಗ್ಗೆ ಮೇಕೆ ತಿನ್ನಲು ಬಂದು ಚಿರತೆ ಸೆರೆಯಾಗಿದೆ.
ಅರಣ್ಯ ಇಲಾಖೆಯ ಸಾತನೂರು ಆರ್‌ಎಫ್ಒ ಬಿ.ಆರ್.ಜಗದೀಶ್ ಗೌಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಶು ಇಲಾಖೆ ವೈದ್ಯಾಧಿಕಾರಿ ಡಾ.ಗಿರೀಶ್ ಅವರಿಂದ ಚಿರತೆಯ ತಪಾಸಣೆ ನಡೆಸಿ ವನ್ಯಜೀವಿಧಾಮಕ್ಕೆ ಮಂಗಳವಾರ ಸಂಜೆ ಬಿಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.