ADVERTISEMENT

ಸಾಲದ ಹಣ ವಾಪಸ್ ಕೇಳಿದ್ದಕ್ಕೆ ಸುತ್ತಿಗೆಯಿಂದ ಹೊಡೆದು ಕೊಂದವನಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 4:20 IST
Last Updated 6 ಜನವರಿ 2026, 4:20 IST
<div class="paragraphs"><p>ತ್ರಿವಳಿ ತಲಾಖ್‌ಗೆ 3 ವರ್ಷ ಶಿಕ್ಷೆ</p></div>

ತ್ರಿವಳಿ ತಲಾಖ್‌ಗೆ 3 ವರ್ಷ ಶಿಕ್ಷೆ

   

ರಾಮನಗರ: ಸಾಲದ ಹಣ ವಾಪಸ್ ಕೇಳಿದ ಮಹಿಳೆಯನ್ನು ಕೊಲೆ ಮಾಡಿದ್ದ ವ್ಯಕ್ತಿಗೆ ಕನಕಪುರದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ₹1 ಲಕ್ಷ ದಂಡ ವಿಧಿಸಿದೆ. ಹಾರೋಹಳ್ಳಿ ತಾಲ್ಲೂಕಿನ ಮರಳವಾಡಿ ಹೋಬಳಿಯ ಅರೆಗಡಕಲು ಗ್ರಾಮದ ಬೈರಪ್ಪ ಶಿಕ್ಷೆಗೊಳಗಾದ ಅಪರಾಧಿ. ಅದೇ ಗ್ರಾಮದ ಜಯಮ್ಮ ಕೊಲೆಯಾದವರು.

ಜಯಮ್ಮ ಅವರ ಮನೆಗೆ 2025ರ ಫೆ. 22ರಂದು ಬೆಳಿಗ್ಗೆ ಬಂದಿದ್ದ ಬೈರಪ್ಪ ಸಾಲ ನೀಡುವಂತೆ ಕೇಳಿದ್ದ. ಈಗಾಗಲೇ ಕೊಟ್ಟಿರುವ ಸಾಲವನ್ನು ಮೊದಲು ಹಿಂದಿರುಗಿಸು ಎಂದು ಜಯಮ್ಮ ಸಾಲ ಕೊಡಲು ನಿರಾಕರಿಸಿದ್ದರು. ಇದೇ ಕಾರಣಕ್ಕೆ ಬೈರಪ್ಪ ದ್ವೇಷ ಸಾಧಿಸುತ್ತಿದ್ದ.

ADVERTISEMENT

ಜಯಮ್ಮ ಅವರನ್ನು ಕೊಲೆ ಮಾಡಿದರೆ ಸಾಲದ ತಾಪತ್ರಯವೂ ಇರುವುದಿಲ್ಲ ಎಂದು ಸಂಚು ರೂಪಿಸಿದ್ದ. ಅಂದು  ಸುತ್ತಿಗೆಯೊಂದಿಗೆ ಮಧ್ಯಾಹ್ನ 12ರ ಸುಮಾರಿಗೆ ಜಯಮ್ಮ ಮನೆ ಪಕ್ಕದಲ್ಲಿರುವ ಚಿಲ್ಲರೆ ಅಂಗಡಿಗೆ ಬಂದಿದ್ದ ಬೈರಪ್ಪ,  ಮನೆಯಲ್ಲಿ ಅವರೊಬ್ಬರೇ ಇರುವುದು ಖಚಿತವಾದ ಬಳಿಕ, ಮನೆಗೆ ಹೋಗಿ ನೀರು ಕೇಳಿದ್ದ.

ನೀರು ತರಲು ಜಯಮ್ಮ ಅವರು ಹೋಗುವಾಗ ಹಿಂದಿನಿಂದ ಸುತ್ತಿಗೆಯಲ್ಲಿ ತಲೆಗೆ ಹೊಡೆದಿದ್ದ. ನೋವಿನಿಂದ ಕೆಳಕ್ಕೆ ಬಿದ್ದ ಜಯಮ್ಮ ಅವರ ಹಣೆ ಸೇರಿದಂತೆ ಮುಖಕ್ಕೆ ಮನಬಂದಂತೆ ಹೊಡೆದು ಕೊಲೆ ಮಾಡಿದ್ದ. ಕೃತ್ಯದ ಬಳಿಕ ಜಯಮ್ಮ ಕತ್ತಿನಲ್ಲಿದ್ದ ಚಿನ್ನದ ತಾಳಿ, 2 ಗುಂಡು ಹಾಗೂ 4 ಮಣಿಗಳಿದ್ದ ಸುಮಾರು 70 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ದೋಚಿಕೊಂಡು ಪರಾರಿಯಾಗಿದ್ದ.

ಘಟನೆ ಕುರಿತು ಕುಟುಂಬದವರು ನೀಡಿದ ದೂರಿನ ಮೇರೆಗೆ ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ್ದ ಅಂದಿನ ಇನ್‌ಸ್ಪೆಕ್ಟರ್ ಅರ್ಜುನ್ ಅವರು ಆರೋಪಿ ಕೃತ್ಯಕ್ಕೆ ಬಳಿಸಿದ್ದ ಸುತ್ತಿಗೆ, ಕದ್ದೊಯ್ದಿದ್ದ ಚಿನ್ನದ ಮಾಂಗಲ್ಯ ಸರ, ಕೃತ್ಯದ ಸಂದರ್ಭದಲ್ಲಿ ಆರೋಪಿ ತೊಟ್ಟಿದ್ದ ರಕ್ತ ಕಲೆಯಾಗಿದ್ದ ಬಟ್ಟೆಗಳನ್ನು ವಶಪಡಿಸಿಕೊಂಡಿದ್ದರು. ಬಳಿಕ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಕನಕಪುರದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಕುಮಾರ್ ಎಚ್.ಎನ್ ಅವರು, ಬೈರಪ್ಪ ವಿರುದ್ದದ ಕೊಲೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆ, ₹1 ಲಕ್ಷ ದಂಡ ಹಾಗೂ ಮೃತ ಜಯಮ್ಮ ಅವರ ಪುತ್ರ ಅನೀಲ ಅವರಿಗೆ ₹75 ಸಾವಿರ ಪರಿಹಾರ ನೀಡುವಂತೆ ಆದೇಶಿಸಿದರು.

ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಎಂ.ಕೆ. ರೂಪಲಕ್ಷ್ಮಿ ವಾದ ಮಂಡಿಸಿದರು. ಹಾರೋಹಳ್ಳಿ ಪೋಲಿಸ್ ಠಾಣೆ ಹೆಡ್ ಕಾನ್‌ಸ್ಟೆಬಲ್ ಬಿ. ರಾಮು ಸಾಕ್ಷಿದಾರರನ್ನು ಕೋರ್ಟ್‌ಗೆ ಹಾಜರುಪಡಿಸಿದ್ದರು ಎಂದು ಕೋರ್ಟ್‌ನ ಸರ್ಕಾರಿ ಅಭಿಯೋಜಕರ ಕಚೇರಿ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.