ಕನಕಪುರ (ರಾಮನಗರ): ಪಟ್ಟಣದ ಮಳಗಾಳು ಗ್ರಾಮದ ಎನ್.ಕೆ. ಕಾಲೊನಿಯಲ್ಲಿ ಒಕ್ಕಲಿಗ ಸಮುದಾಯದ ಯುವಕರ ಗುಂಪೊಂದು, ದಲಿತ ಯುವಕನ ಕೈ ಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೇಂದ್ರ ವಲಯದ ಐಜಿಪಿ ಲಾಬೂ ರಾಮ್ ಅವರು ಮಂಗಳವಾರ ಕಾಲೊನಿಗೆ ಭೇಟಿ ನೀಡಿದರು.
ಬೆಳಿಗ್ಗೆ ಗ್ರಾಮಕ್ಕೆ ಬಂದ ಐಜಿಪಿ, ಹಲ್ಲೆ ನಡೆದ ಸ್ಥಳಗಳನ್ನು ಪರಿಶೀಲಿಸಿದರು. ನಂತರ ಹಲ್ಲೆಗೊಳಾದ ಕುಟುಂಬದವರು, ಗ್ರಾಮಸ್ಥರು ಹಾಗೂ ದಲಿತ ಮುಖಂಡರೊಂದಿಗೆ ಮಾತನಾಡಿದರು.
ಈ ವೇಳೆ ಮಹಿಳೆಯೊಬ್ಬರು, 'ಘಟನೆ ನಡೆದಾಗಿನಿಂದ ಗ್ರಾಮದಲ್ಲಿ ಎಲ್ಲರೂ ಭಯಭೀತರಾಗಿದ್ದಾರೆ. ಯಾರು ಯಾವಾಗ ಬಂದು ಹಲ್ಲೆ ನಡೆಸುತ್ತಾರೊ ಎಂಬ ಆತಂಕದಲ್ಲೇ ಕಳೆಯುತ್ತಿದ್ದೇವೆ. ನಮಗೆ ಪೊಲೀಸ್ ರಕ್ಷಣೆ ಕೊಡಿ' ಎಂದು ಮನವಿ ಮಾಡಿದರು.
ತಾಲ್ಲೂಕಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ದಲಿತರ ಮೇಲೆ ವಾರದ ಅಂತರದಲ್ಲಿ ಎರಡು ದೌರ್ಜನ್ಯ ಪ್ರಕರಣಗಳು ನಡೆದಿವೆ. ಗಡಿಪಾರಾಗಿದ್ದ ರೌಡಿ ಅಲ್ಲಿಂದ ಬಂದು ಕೃತ್ಯ ಎಸಗುತ್ತಾನೆಂದರೆ, ಇದರಲ್ಲಿ ಪೊಲೀಸರ ವೈಫಲ್ಯ ಎದ್ದು ಕಾಣುತ್ತದೆ. ಘಟನೆಯ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ದಲಿತರಿಗೆ ರಕ್ಷಣೆ ಕೊಡಬೇಕು ಎಂದು ದಲಿತ ಮುಖಂಡರಾದ ಧಮ್ಮ ದೀವಿಗೆ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ ಒತ್ತಾಯಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಐಜಿಪಿ, ಆರೋಪಿಗಳನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗುವುದು. ಗ್ರಾಮಕ್ಕೆ ಪೊಲೀಸ್ ಭದ್ರತೆ ಒದಗಿಸಿ, ಮುಂದೆ ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಇದ್ದರು. ಗ್ರಾಮದಲ್ಲಿ ಬಿಗುವಿನ ವಾತಾವರಣ ಇದ್ದು, ಭದ್ರತೆಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಪೊಲೀಸ್ ಬಸ್ ಗ್ರಾಮದಲ್ಲಿ ಬೀಡು ಬಿಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.