ADVERTISEMENT

ಕನಕಪುರದ ಕಚೇರಿಗಳಿಗೆ ದಿಢೀರ್ ಭೇಟಿ: ಅವ್ಯವಸ್ಥೆಗೆ ಉಪ ಲೋಕಾಯುಕ್ತ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 8:01 IST
Last Updated 20 ಡಿಸೆಂಬರ್ 2025, 8:01 IST
ಕನಕಪುರ ಯೋಜನಾ ಪ್ರಾಧಿಕಾರದಲ್ಲಿ ಬಡಾವಣೆಗಳ ಅನುಮತಿಗೆ ಸಂಬಂಧಿಸಿದ ದಾಖಲೆಗಳನ್ನು ಉಪ ಲೋಕಾಯುಕ್ತ ನ್ಯಾ. ಕೆ.ಎನ್. ಫಣೀಂದ್ರ ಅವರು ಪರಿಶೀಲಿಸಿದರು. ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಲ್ಲಾ ಪಂಚಾಯಿತಿ ಸಿಇಒ ಅನ್ಮೋಲ್ ಜೈನ್ ಹಾಗೂ ಇತರರು ಇದ್ದಾರೆ
ಕನಕಪುರ ಯೋಜನಾ ಪ್ರಾಧಿಕಾರದಲ್ಲಿ ಬಡಾವಣೆಗಳ ಅನುಮತಿಗೆ ಸಂಬಂಧಿಸಿದ ದಾಖಲೆಗಳನ್ನು ಉಪ ಲೋಕಾಯುಕ್ತ ನ್ಯಾ. ಕೆ.ಎನ್. ಫಣೀಂದ್ರ ಅವರು ಪರಿಶೀಲಿಸಿದರು. ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಲ್ಲಾ ಪಂಚಾಯಿತಿ ಸಿಇಒ ಅನ್ಮೋಲ್ ಜೈನ್ ಹಾಗೂ ಇತರರು ಇದ್ದಾರೆ   

ಕನಕಪುರ: ಉಪ ಲೋಕಾಯುಕ್ತ ಕೆ.ಎನ್. ಫಣೀಂದ್ರ ಅವರು, ಕನಕಪುರದಲ್ಲಿ ಶುಕ್ರವಾರ ಯೋಜನಾ ಪ್ರಾಧಿಕಾರ, ಕಲ್ಲಳ್ಳಿ ಪಂಚಾಯಿತಿ ಮತ್ತು ಬಿಜಿಎಸ್ ಬಡಾವಣೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಯೋಜನಾ ಪ್ರಾಧಿಕಾರದಲ್ಲಿ ಪರಿಶೀಲನೆ ನಡೆಸಿದ ಉಪ ಲೋಕಾಯುಕ್ತರು ಅಲ್ಲಿನ ಅವ್ಯವಸ್ಥೆ, ದಾಖಲಾತಿಗಳ ಅಸಮರ್ಪಕ ನಿರ್ವಹಣೆ, ಅನಧಿಕೃತ ಬಡಾವಣೆಗಳ ವಿರುದ್ಧ ಕ್ರಮ ಕೈಗೊಳ್ಳದಿರುವುದರ ಬಗ್ಗೆ ಅಧಿಕಾರಿಗಳ ವಿರುದ್ಧ ಸಿಡಿಮಿಡಿಕೊಂಡರು.

ಕನಕಪುರ ಯೋಜನಾ ಪ್ರಾಧಿಕಾರವು 2001ರಲ್ಲಿ ಅಸ್ತಿತ್ವಕ್ಕೆ ಬಂದಿದೆ, ಇಲ್ಲಿಯವರೆಗೂ 63 ಅಕ್ರಮ ಬಡಾವಣೆ ನಿರ್ಮಾಣ ಆಗಿದೆ ಎಂದು ಸ್ವತಃ ಪ್ರಾಧಿಕಾರವೇ ದಾಖಲೆ ಮಾಡಿದೆ. ಆದರೆ ಇಲ್ಲಿಯವರೆಗೂ ಅಕ್ರಮ ಬಡಾವಣೆ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದರ ಬಗ್ಗೆ ಕಿಡಿಕಾರಿದರು.

ಅಕ್ರಮ ಬಡಾವಣೆ ವಿರುದ್ಧ ಕ್ರಮ ಕೈಗೊಳ್ಳದ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಸುಮೊಟೊ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ADVERTISEMENT

ಗ್ರಾ.ಪಂ.ಗೆ ಭೇಟಿ: ಕಲ್ಲಳ್ಳಿ ಗ್ರಾಮ ಪಂಚಾಯಿತಿಗೆ ಫಣೀಂದ್ರ ಅವರು ಭೇಟಿ ನೀಡಿ ಅಲ್ಲಿ ದಾಖಲಾತಿಗಳ ಪರಿಶೀಲನೆ ನಡೆಸಿದರು. ದಿನವಹಿ ಪುಸ್ತಕ ನಿರ್ವಹಿಸದಿರುವ ಬಗ್ಗೆ, ರೆವಿನ್ಯು ಸಂಗ್ರಹ, ಅಕ್ರಮ ಬಡಾವಣೆಗಳ ಸಂಬಂಧಿಸಿದಂತೆ ಯೋಜನಾ ಪ್ರಾಧಿಕಾರದಿಂದ ಬಂದಿರುವಂತಹ ಫೈಲ್ಗಳ ದಾಖಲಾತಿಗಳ ಬಗ್ಗೆ ಪರಿಶೀಲನೆ ನಡೆಸಿದರು.

ಲೋಕಾಯುಕ್ತರ ಪ್ರಶ್ನೆಗೆ ಯಾವುದಕ್ಕೂ ಸರಿಯಾಗಿ ಉತ್ತರಿಸದ ಪಿಡಿಒ ಮತ್ತು ಇಒ ವಿರುದ್ಧ ಉಪ ಲೋಕಾಯುಕ್ತರು ಆಕ್ರೋಶಗೊಂಡರು. ತಾಲ್ಲೂಕಿನಲ್ಲಿ ಯಾವ ಪಂಚಾಯಿತಿಗಳು ಸರಿಯಾಗಿ ಕಾರ್ಯ ನಿರ್ವಹಿಸದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಪರಿಶೀಲನೆ ವೇಳೆ ಸಮರ್ಪಕವಾಗಿ ದಾಖಲಾತಿ ಮತ್ತು ಮಾಹಿತಿ ನೀಡದ ಪಿಡಿಒ ಹಾಗೂ ಇಒ ವಿರುದ್ಧ ಲೋಕಾಯುಕ್ತ ಸುಮೋಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಲೋಕಾಯುಕ್ತ ಅಧಿಕಾರಿಗಳ ತಂಡವು ಬಿಜಿಎಸ್ ಬಡವಣಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಸಾರ್ವಜನಿಕ ಜೀವನ ಮತ್ತು ಕಸ ವಿಲೇವಾರಿ ಘಟಕದ ನಿರ್ವಹಣೆ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಅವ್ಯವಸ್ಥೆಗೆ ಆಕ್ರೋಶ: 12 ವರ್ಷವಾದರೂ ಬಡವರಿಗೆ ನಿರ್ಮಿಸಿರುವ ಮನೆಗಳನ್ನು ಏಕೆ ಹಸ್ತಾಂತರ ಮಾಡಿಲ್ಲವೆಂದು ಹಾಗೂ ಬಡಾವಣೆಯ ನಿರ್ವಹಣೆಯು ಅಸಮರ್ಕವಾಗಿದೆ. ಚರಂಡಿಯೇ ಇಲ್ಲದೆ ಬಡಾವಣೆಯನ್ನು ಹೇಗೆ ನಿರ್ಮಾಣ ಮಾಡಿದ್ದೀರಿ ಮನೆಗಳ ಅಕ್ಕಪಕ್ಕದಲ್ಲಿ ಗಿಡಗಂಟೆಗಳು ಬೆಳೆದುಕೊಂಡಿವೆ, ಏಕೆ ಸ್ವಚ್ಛ ಮಾಡಿಲ್ಲವೆಂದು ನಗರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ವಸತಿ ಯೋಜನೆ ಅಡಿ ಮನೆ ನಿರ್ಮಾಣ ಏಕೆ ವಿಳಂಬವಾಗುತ್ತಿದೆ ಎಂದು ಪ್ರಶ್ನಿಸಿದಾಗ ಫಲಾನುಭವಿಗಳು ಹೆಚ್ಚುವರಿಯಾಗಿ 60 ಸಾವಿರ ಹಣ ಕೊಡಬೇಕು. ಅವರು ಕೊಡದಿರುವ ಕಾರಣ ನಿರ್ಮಾಣ ಕಾರ್ಯ ವಿಳಂಬವಾಗುತ್ತಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದಾಗ ಸರ್ಕಾರದಿಂದ ಬರುವ ಹಣಕ್ಕೆ ನೀವು ಎಷ್ಟು ಮನೆ ನಿರ್ಮಿಸಿ ಕೊಡಬಹುದು ಅದನ್ನು ಮಾಡಿಕೊಡಿ. ಜನರು ಹೆಚ್ಚುವರಿ ಬೇಕೆಂದು ಕೇಳಿದವರಿಗೆ ಮಾತ್ರ ಹೆಚ್ಚಿನ ಹಣವನ್ನು ಪಡೆದು ಅವರ ಬೇಡಿಕೆಗೆ ತಕ್ಕಂತೆ ಮನೆ ನಿರ್ಮಿಸಿ ಎಂದರು.

ಕಸ ವಿಲೇವಾರಿ ಘಟಕವನ್ನು ಬಡಾವಣೆಗೆ ಹೊಂದಿಕೊಂಡಂತೆ ನಿರ್ಮಾಣ ಮಾಡಿರುವುದು ಅವೈಜ್ಞಾನಿಕವಾಗಿದೆ, ಈ ಬಡಾವಣೆ ನಿರ್ಮಾಣದಲ್ಲಿ ಹಣ ಮಾತ್ರ ಖರ್ಚಾಗುತ್ತಿದೆ. ಯಾವುದು ಯೋಜನಾ ಬದ್ಧವಾಗಿ ಆಗುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ಉಪ ಲೋಕಾಯುಕ್ತರು ಮಧ್ಯಾಹ್ನ 3 ಗಂಟೆಗೆ ಕನಕಪುರ ಪರಿವೀಕ್ಷಣ ಮಂದಿರದಲ್ಲಿ ವಿಶ್ರಾಂತಿ ಪಡೆದು ಪರಿಶೀಲನೆ ಭೇಟಿ ಕಾರ್ಯಕ್ಕೆ ಮುಂದಾಗಿ ರಾತ್ರಿ 7.30ಕ್ಕೆ ಮುಕ್ತಾಯಗೊಳಿಸಿದರು.

ಶನಿವಾರ ಮಳಗಾಳು ರಸ್ತೆಯಲ್ಲಿರುವ ಅಂಬೇಡ್ಕರ್ ಭವನದಲ್ಲಿ ಸಾರ್ವಜನಿಕ ಸಭೆಯನ್ನು ನಡೆಸುತ್ತಿದ್ದು ಬೆಳಿಗ್ಗೆ ಒಂಬತ್ತು ಗಂಟೆಗೆ ಪ್ರಾರಂಭಿಸಿ ಪ್ರಕರಣ ಮುಗಿಯುವವರೆಗೂ ಮುಂದುವರಿಸಲಾಗುವುದು, ಸಾರ್ವಜನಿಕವಾಗಿ ಬಂದಿರುವ ದೂರುಗಳಲ್ಲಿ ಪ್ರಮುಖವಾದ 43 ದೂರುಗಳ ಇತ್ಯರ್ಥ ಪಡಿಸುತ್ತಿರುವುದಾಗಿ ತಿಳಿಸಿದರು.

ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಲ್ಲಾ ಪಂಚಾಯಿತಿ ಸಿಇಒ ಅನ್ಮೋಲ್ ಜೈನ್, ಉಪ ವಿಭಾಗಾಧಿಕಾರಿ ಬಿನೋಯ್, ತಹಶೀಲ್ದಾರ್ ಸಂಜಯ್, ಇಒ ಅವಿನಾಶ್, ಲೋಕಾಯುಕ್ತ ಡಿವೈಎಸ್ಪಿ ಸಂದೀಪ್ ಸೇರಿದಂತೆ ಲೋಕಾಯುಕ್ತ ಅಧಿಕಾರಿಗಳು ಉಪಸ್ಥಿತರಿದ್ದರು.

ಇಂದು ದೂರುಗಳ ಅರ್ಜಿ ವಿಚಾರಣೆ

ಕನಕಪುರ: ತಾಲ್ಲೂಕಿನ ಪ್ರವಾಸ ಕೈಗೊಂಡಿರುವ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಶನಿವಾರ ಬೆಳಿಗ್ಗೆ 9ರಿಂದ 10 ಗಂಟೆಯವರೆಗೆ ಕನಕಪುರದ ಡಾ. ಬಿ.ಆರ್. ಅಂಬೇಡ್ಕರ್ ಪುರಭವನದಲ್ಲಿ ತಾಲ್ಲೂಕಿಗೆ ಸಂಬಂಧಿಸಿದಂತೆ ಬಾಕಿ ಇರುವ ದೂರುಗಳ ವಿಚಾರಣೆ ಕಾರ್ಯಕ್ರಮ ಉದ್ಘಾಟಿಸುವರು.

ಅಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ಹಾಗೂ ಮಧ್ಯಾಹ್ನ 2.30ರಿಂದ ಸಂಜೆ 5.30ರವರೆಗೆ ಕನಕಪುರ ತಾಲ್ಲೂಕಿಗೆ ಸಂಬಂಧಿಸಿದಂತೆ ಲೋಕಾಯುಕ್ತದಲ್ಲಿ ಬಾಕಿ ಇರುವ ದೂರುಗಳ ಸಂಬಂಧ ದೂರುದಾರರು ಹಾಗೂ ಎದುರುದಾರರ ಸಮ್ಮುಖದಲ್ಲಿ ವಿಚಾರಣೆ ನಡೆಸುವರು.

ಲೋಕಾಯುಕ್ತ ಸಂಸ್ಥೆಯಲ್ಲಿ ಈಗಾಗಲೇ ದೂರು ದಾಖಲಿಸಿರುವ ದೂರುದಾರರ ದೂರು ಪ್ರಕರಣಗಳನ್ನು ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಮಾತ್ರ ಈ ಪ್ರವಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಅವಧಿಯಲ್ಲಿ ಸಾರ್ವಜನಿಕರಿಂದ ಹೊಸದಾಗಿ ಯಾವುದೇ ದೂರುಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.