
ಕನಕಪುರ: ಕಾಡಿನಿಂದ 40 ಆನೆಗಳ ಹಿಂಡು ನಾಡಿಗೆ ಬಂದಿದೆ ಎಂದು ಭಾನುವಾರ ಬೆಳಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವಿಡಿಯೊ ರೈತರನ್ನು ಭಯಭೀತಗೊಳಿಸಿತ್ತು.
ತಾಲ್ಲೂಕಿನ ಗಡಿ ಗ್ರಾಮವಾದ ಕೋಡಿಹಳ್ಳಿ ಹೋಬಳಿ ಕೊಳಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡುಶಿವನಹಳ್ಳಿ ಗ್ರಾಮದಲ್ಲಿ 40 ಕಾಡಾನೆಗಳು ಬೆಳಗ್ಗೆ ದಿಢೀರ್ ಪ್ರತ್ಯಕ್ಷವಾಗಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಇದರಿಂದ ಆತಂಕಗೊಂಡ ರೈತರು ಭಯದಿಂದ ಕಾಡಾನೆಗಳು ದೊಡ್ಡ ಸಂಖ್ಯೆಯಲ್ಲಿ ತಮ್ಮ ಗ್ರಾಮಗಳ ಸುತ್ತಮುತ್ತ ಬಂದಿವೆ ಎಂದು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಆನೆಗಳನ್ನು ಮತ್ತೆ ಕಾಡಿಗೆ ಓಡಿಸಬೇಕೆಂದು ಒತ್ತಾಯ ಮಾಡಿದರು.
ಅರಣ್ಯ ಅಧಿಕಾರಿಗಳ ತಂಡವು ಕರ್ನಾಟಕದ ಗಡಿ ಉದ್ದಕ್ಕೂ ಸಿಬ್ಬಂದಿಯೊಂದಿಗೆ ಬೆಳಗ್ಗೆಯಿಂದಲೇ ಆನೆಗಳ ಪತ್ತೆಗಾಗಿ ಕಾರ್ಯಾಚರಣೆ ಶುರು ಮಾಡಿತು.
ಆದರೆ ಅವರಿಗೆ ಆನೆಗಳು ಬಂದಿರುವ ಸುಳಿವು ಎಲ್ಲಿಯೂ ಸಿಗದಿದ್ದರಿಂದ ಗೊಂದಲಕ್ಕೆ ಒಳಗಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವಿಡಿಯೊ ಪರಿಶೀಲನೆ ಮಾಡಿದಾಗ ಅದು ಎರಡು ವರ್ಷಗಳ ಹಿಂದಿನ ಹಳೆ ವಿಡಿಯೊ ಎಂದು ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.