
ಕನಕಪುರ: ಶಕ್ತಿ ದೇವತೆಗಳ ಅಂಬಾರಿ ಹೊತ್ತ ಆನೆಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸ್ವಾಮೀಜಿ ಜಿಲ್ಲಾ ಮಟ್ಟದ ಅದ್ದೂರಿ ಕನಕೋತ್ಸವಕ್ಕೆ ಬುಧವಾರ ಚಾಲನೆ ನೀಡಿದರು.
ಡಿಕೆಎಸ್ ಚಾರಿಟಬಲ್ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಜಿಲ್ಲಾಮಟ್ಟದ ಕನಕೋತ್ಸವ ಬುಧವಾರದಿಂದ ಪ್ರಾರಂಭಗೊಂಡಿದ್ದು ಫೆಬ್ರುವರಿ 1ರ ಭಾನುವಾರ ಮುಕ್ತಾಯವಾಗಲಿದೆ.
ಕಬ್ಬಾಳಮ್ಮ ಮತ್ತು ಕೆಂಕೆರಮ್ಮ ದೇವರನ್ನು ಅಂಬಾರಿ ಮೇಲೆ ಕೂರಿಸಲಾಗಿತ್ತು. ಹಳ್ಳಿಕಾರ್ ಜೋಡಿ ಎತ್ತು, ಪಲ್ಲಕ್ಕಿ, ವಿವಿಧ ಬಗೆಯ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನ ಸೆಳೆದವು.
ಆದಿಚುಂಚನಗಿರಿ ರಾಮನಗರ ಶಾಖಾ ಮಠದ ಅನ್ನದಾನೇಶ್ವರನಾಥ ಸ್ವಾಮೀಜಿ, ಮರಳೆ ಗವಿಮಠದ ಮುಮ್ಮಡಿ ಶಿವರುದ್ರ ಸ್ವಾಮೀಜಿ, ದೇಗುಲ ಮಠದ ಚನ್ನಬಸವ ಸ್ವಾಮೀಜಿ, ಹರಿಹರದ ವಚನಾನಂದ ಸ್ವಾಮೀಜಿ ಚಾಲನೆ ನೀಡಿದರು.
ನಗರದ ಅಯ್ಯಪ್ಪ ದೇವಾಲಯದಿಂದ ಹೊರಟ ಮೆರವಣಿಗೆ ಕೋಟೆ ಬಳಸಿಕೊಂಡು, ದೊಡ್ಡಿ ಬೀದಿ ಮೂಲಕ ಮೈಸೂರು ರಸ್ತೆ, ಕೆಂಗಲ್ ಹನುಮಂತಯ್ಯ ವೃತ್ತ, ಚನ್ನಬಸಪ್ಪ ವೃತ್ತ ಮಾರ್ಗವಾಗಿ, ಮೇಗಳ ಬೀದಿ, ಗಣೇಶನ ದೇವಸ್ಥಾನ ಸರ್ಕಲ್ ಮೂಲಕ ವಿವೇಕಾನಂದ ನಗರ ಒಂದನೇ ಬೀದಿ ಮಾರ್ಗವಾಗಿ ಅಯ್ಯಪ್ಪ ದೇವಾಲಯಕ್ಕೆ ಮುಕ್ತಾಯಗೊಂಡಿತು.
115 ಪಲ್ಲಕ್ಕಿಯ ಬೆಳ್ಳಿರಥ ಹಾಗೂ 50 ಟ್ರ್ಯಾಕ್ಟರ್ ತಾಲ್ಲೂಕಿನ ವಿವಿಧ ಗ್ರಾಮಗಳ ಗ್ರಾಮ ದೇವತೆಗಳು ನಾಡ ದೇವತೆಗಳ ವಿಗ್ರಹಗಳನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿದವು.
ಮಂಗಳೂರು, ಕೇರಳ ಸೇರಿದಂತೆ ಸ್ಥಳೀಯ ವಿವಿಧ ರೀತಿಯ ಕಲಾತಂಡಗಳು ಮೆರವಣಿಗೆಯಲ್ಲಿ ಸಾಗಿದವು. ಡಿ.ಕೆ ಶಿವಕುಮಾರ್ ಚನ್ನಬಸಪ್ಪ ವೃತ್ತದಲ್ಲಿ ಇಳಿದಾಗ ಅಭಿಮಾನಿಗಳು ಹೂವಿನ ಮಳೆಗೈದು ಜೈಕಾರ ಹಾಕಿದರು.
ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್, ಶಾಸಕ ಆನೇಕಲ್ ಶಿವಣ್ಣ, ರೂಪಾ ಶಶಿಧರ್, ನೆಲಮಂಗಲ ಶ್ರೀನಿವಾಸ್, ಎಂಎಲ್‌ಸಿ ಎಸ್.ರವಿ, ಬಲ್ಕಿಸ್ ಬಾನು, ದಿನೇಶ್ ಗೂಳಿಗೌಡ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಕನಕಪುರ ರೂರಲ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಎಚ್.ಕೆ.ಶ್ರೀಕಂಠ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.