ರಾಮನಗರ: ಮಹಾರಾಷ್ಟ್ರದಲ್ಲಿ ಕನ್ನಡಿಗರ ವಿರುದ್ದ ನಡೆಯುತ್ತಿರುವ ಮರಾಠಿಗರ ಪುಂಡಾಟಿಕೆ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕನ್ನಡಪರ ಸಂಘಟನೆಗಳು ಶನಿವಾರ ನೀಡಿರುವ ಬಂದ್ ಕರೆಗೆ ರಾಮನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಂಗಡಿ–ಮುಂಗಟ್ಟುಗಳು ಎಂದಿನಂತೆ ತೆರೆದಿವೆ. ಬಸ್, ಆಟೊ ಸೇರಿದಂತೆ ವಾಹನಗಳ ಸಂಚಾರ ಯಥಾಸ್ಥಿತಿಯಲ್ಲಿತ್ತು.
ಬೆಂಗಳೂರು–ಮೈಸೂರು ರಸ್ತೆಯುದ್ದಕ್ಕೂ ಬಹುತೇಕ ಅಂಗಡಿಗಳು ತೆರೆದಿದ್ದವು. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ವೃತ್ತ, ಐಜೂರು ವೃತ್ತ, ಕೆಂಗಲ್ ಹನುಮಂತಯ್ಯ ವೃತ್ತ, ಮಾರುಕಟ್ಟೆ, ಮುಖ್ಯರಸ್ತೆ, ಎಂ.ಜಿ. ರಸ್ತೆ, ರೈಲು ನಿಲ್ದಾಣ ರಸ್ತೆ, ವಿವೇಕಾನಂದನಗರ, ಕೆಂಪೇಗೌಡ ವೃತ್ತ, ಮಾಗಡಿ ರಸ್ತೆ ಸೇರಿದಂತೆ ಬಹುತೇಕ ಕಡೆ ಜನಜೀವನ ಎಂದಿನಂತೆ ಇತ್ತು.
ಹೋಟೆಲ್, ಅಂಗಡಿಗಳು ಎಂದಿನಂತೆ ತೆರೆದಿದ್ದವು. ತರಕಾರಿ ಮಾರುಕಟ್ಟೆ, ಬೀದಿ ವ್ಯಾಪಾರ, ಹಣ್ಣು, ಹೂ ಮಾರಾಟಗಾರರು ಎಂದಿನಂತೆ ವ್ಯಾಪಾರ ಮಾಡುತ್ತಿದ್ದ ದೃಶ್ಯ ಕಂಡುಬಂತು. ಆಟೊಗಳ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗಿರಲಿಲ್ಲ. ಶಾಲೆಗಳು ಸಹ ಎಂದಿನಂತೆ ನಡೆದವು. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಐಜೂರು ವೃತ್ತದಲ್ಲಿ ಒಂದು ಪೊಲೀಸ್ ವಾಹನವನ್ನು ನಿಯೋಜಿಸಿ ನಿಗಾ ವಹಿಸಲಾಗಿತ್ತು.
ರಸ್ತೆಯಲ್ಲೇ ಕುಳಿತು ಧರಣಿ:
ಬಂದ್‌ಗೆ ಬೆಂಬಲ ವ್ಯಕ್ತಪಡಿಸಿರುವ ಕರುನಾಡು ಸೇನೆ ಸಂಘಟನೆಯ ಬೆರಳೆಣಿಕೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ನಗರದ ಐಜೂರು ವೃತ್ತದ ರಸ್ತೆ ಬದಿ ಕೆಲ ಹೊತ್ತು ಕುಳಿತು ಧರಣಿ ನಡೆಸಿದರು. ಮಹಾರಾಷ್ಟ್ರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕನ್ನಡಪರ ಸಂಘಟನೆಗಳ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸ್ಥಳದಿಂದ ತೆರಳಿದರ.
ಸೇನೆಯ ಉಪಾಧ್ಯಕ್ಷ ಎಂ. ಜಗದೀಶ್ ಐಜೂರು, ಗಂಗಾಧರ್ ವಿ.ಎನ್, ಆರ್.ಜೆ. ಅರ್ಜುನ್, ರಾ.ಶಿ. ಬಸವರಾಜು, ಕುಮಾರ್, ಭಾಗ್ಯ ಸುಧಾ, ಮಂಜುನಾಥ್, ಕೃಷ್ಣಮೂರ್ತಿ, ಪ್ರಸನ್, ಹೇಮಾವತಿ, ಮಹೇಂದ್ರಮ್ಮ, ಸುಶೀಲಮ್ಮ ಸುಜಾತ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.