
ಚನ್ನರಾಯಪಟ್ಟಣ ಹೋರಾಟ ಸ್ಥಳದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಭಾಗವಹಿಸಿದ್ದ ರೈತರು ಮತ್ತು ರೈತ ಮಹಿಳೆಯರು
ದೇವನಹಳ್ಳಿ: ಚನ್ನರಾಯಪಟ್ಟಣದ ರೈತರ ಫಲವತ್ತಾದ ಭೂಮಿಯನ್ನು ಬಲವಂತಾಗಿ ಕಸಿದುಕೊಂಡು ‘ಶಾಶ್ವತ ಕೃಷಿ ವಲಯ’ ಸ್ಥಾಪಿಸಲು ಹೊರಟಿರುವ ಸರ್ಕಾರದ ವಿರುದ್ಧ ಮತ್ತೊಮ್ಮೆ ದೊಡ್ಡ ಮಟ್ಟದ ಹೋರಾಟ ನಡೆಸುವುದಾಗಿ ರೈತರು ಮಂಗಳವಾರ ಸಾಮೂಹಿಕ ಎಚ್ಚರಿಕೆ ನೀಡಿದ್ದಾರೆ.
ಕೈಗಾರಿಕಾ ವಲಯ ಸ್ಥಾಪನೆಗೆ ಫಲವತ್ತಾದ ಕೃಷಿ ಭೂಮಿ ಬಿಟ್ಟು ಕೊಡಲು ಒಪ್ಪದ ರೈತರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಸರ್ಕಾರ ಚನ್ನರಾಯಪಟ್ಟಣ ಹೋಬಳಿಯಲ್ಲಿ ‘ಶಾಶ್ವತ ವಿಶೇಷ ಕೃಷಿ ವಲಯ’ ಸ್ಥಾಪನೆಗೆ ಮುಂದಾಗಿದೆ. ಇದು ಸರ್ಕಾರದ ಸೇಡಿನ ಕ್ರಮ ಎಂದು ರೈತ ಮುಖಂಡರು ಖಂಡಿಸಿದರು.
ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಧರಣಿ ಸ್ಥಳದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ರೈತರು ಮತ್ತು ರೈತ ಮುಖಂಡರು ಸರ್ಕಾರದ ವಿರುದ್ಧ ಹರಿಹಾಯ್ದರು.
ಶಾಶ್ವತ ವಿಶೇಷ ಕೃಷಿ ವಲಯ ಸ್ಥಾಪನೆಯ ಸರ್ಕಾರದ ನಿರ್ಧಾರ ರೈತರ ವಿರುದ್ಧ ಸೇಡು ತೀರಿಸಿಕೊಳ್ಳುವ ಮತ್ತು ರೈತರನ್ನು ಭಯಪಡಿಸಿ ಭೂಮಿ ಕಬಳಿಸುವ ತಂತ್ರ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ತರಾಟೆಗೆ ತೆಗೆದುಕೊಂಡರು.
ಚನ್ನರಾಯಪಟ್ಟಣ ಹೋಬಳಿ ರೈತರ ಫಲವತ್ತಾದ ಕೃಷಿ ಭೂಮಿಯನ್ನು ಸರ್ಕಾರ ಬಲವಂತವಾಗಿ ಕಸಿದುಕೊಳ್ಳಲು ಶಾಶ್ವತ ಕೃಷಿ ವಲಯದ ಷಡ್ಯಂತ್ರ ರೂಪಿಸಿದೆ. ಇಂತಹ ಗೊಡ್ಡು ಬೆದರಿಕೆಗಳಿಗೆ ರೈತರು ಬಗ್ಗಲ್ಲ. ಬದಲಾಗಿ ಸರ್ಕಾರದ ವಿರುದ್ಧ ಸೆಟೆದು ನಿಲ್ಲುತ್ತಾರೆ ಎಂದರು.
ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ 1,777 ಎಕರೆ ಭೂಮಿಯನ್ನು ಸ್ವಾಧೀನದಿಂದ ಕೈಬಿಡುವ ಬದಲು ಪಹಣಿಯಲ್ಲಿ ‘ಶಾಶ್ವತ ವಿಶೇಷ ಕೃಷಿ ವಲಯ’ ಎಂದು ನಮೂದಿಸುವ ನಿರ್ಧಾರ ನ್ಯಾಯಸಮ್ಮತವಲ್ಲ. ರೈತರು ಭೂಮಿಯನ್ನು ಖಾಸಗಿಯವರಿಗೆ ಮಾರಾಟ ಮಾಡದಂತೆ ನಿರ್ಬಂಧಿಸಿರುವುದು ಮತ್ತು ಸರ್ಕಾರಕ್ಕೆ ನೀಡಲು ಮೂರು ತಿಂಗಳ ಕಾಲಾವಾಕಾಶ ನೀಡಿರುವುದು ಸರ್ವಾಧಿಕಾರದ ಧೋರಣೆ ಎಂದು ಹರಿಹಾಯ್ದರು.
ಈ ಎಲ್ಲ ಷರತ್ತುಗಳನ್ನು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ(ಕೆಐಎಡಿಬಿ) ಹಿಂಪಡೆಯಬೇಕು. ಇಲ್ಲದಿದ್ದರೆ ಹೋರಾಟದ ಮೂಲಕ ಸರ್ಕಾರಕ್ಕೆ ಬುದ್ದಿ ಕಲಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಭೂಸ್ವಾಧೀನಕ್ಕೆ ಮುಂದಾಗಿದ್ದ ಕೆಐಎಡಿಬಿಗೆ ಭೂಸ್ವಾಧೀನ ಕೈಬಿಡುವ ಅಧಿಕಾರವೂ ಇದೆ. ಭೂಸ್ವಾಧೀನ ಕೈಬಿಡುವ ನಿರ್ಣಯ ಮಾಡಿದ್ದರೆ ಸಾಕಾಗಿತ್ತು. ಎಲ್ಲೂ ಚಾಲ್ತಿಯಲ್ಲಿ ಇಲ್ಲದ ಶಾಶ್ವತ ವಿಶೇಷ ಕೃಷಿ ವಲಯ ಸ್ಥಾಪಿಸಲು ಇವರಿಗೇನು ಅಧಿಕಾರವಿದೆ ಎಂದು ಪ್ರಶ್ನಿಸಿದರು.
ಯಾವುದೇ ವಲಯಗಳನ್ನು ಮಾಡುವ ಅಧಿಕಾರ ಯೋಜನಾ ಪ್ರಾಧಿಕಾರಗಳಿಗೆ ಇದೆ. ವಲಯಗಳ ಸ್ಥಾಪನೆಗೆ ಪ್ರತ್ಯೇಕ ಮಾರ್ಗಸೂಚಿಗಳಿವೆ. ಅದ್ಯಾವುದೂ ಇಲ್ಲದೆ ಶಾಶ್ವತ ವಿಶೇಷ ಕೃಷಿ ವಲಯ ಎಂದು ಘೋಷಿಸಲು ಇವರಿಗೆ ಯಾವ ಅಧಿಕಾರ ಇದೆ ಎಂದು ಪ್ರಶ್ನಿಸಿದರು.
ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಪದಾಧಿಕಾರಿ ಕಾರಳ್ಳಿ ಶ್ರೀನಿವಾಸ್, ಭೂಮಿ ಮತ್ತು ವಸತಿ ಹಕ್ಕು ಹೋರಾಟದ ಸಿರಿಮನೆ ನಾಗರಾಜ್, ನೀರಾವರಿ ಹೋರಾಟಗಾರ ಆಂಜನೇಯರೆಡ್ಡಿ, ಪ್ರಾಂತ ರೈತ ಸಂಘದ ಯಶವಂತ, ಜಿ.ಜಿ.ಹಳ್ಳಿ ನಾರಾಯಣಸ್ವಾಮಿ, ಚಂದ್ರತೇಜಸ್ವಿ, ನಿಲೋನ್, ಕೆಂಚೆಗೌಡ, ನಂಜಪ್ಪ, ಮಾರೇಗೌಡ, ಜಯರಾಮೇಗೌಡ, ರಾಮಚಂದ್ರಪ್ಪ ಸೇರಿದಂತೆ ಹಲವು ಹೋರಾಟಗಾರರು ಭಾಗವಹಿಸಿದ್ದರು.
ಗುಮ್ಮನ ಕತೆ ಕಟ್ಟಿ ರೈತರನ್ನು ಹೆದರಿಸಲು ಹೊರಟ ಸರ್ಕಾರ
ರೈತರನ್ನು ಹೆದರಿಸಲು ಸರ್ಕಾರ ಶಾಶ್ವತ ಕೃಷಿ ವಲಯದ ಕತೆ ಕಟ್ಟಿದೆ. ಇಂತಹ ಗುಮ್ಮನ ಬೆದರಿಕೆಗಳಿಗೆ ಸಾವಿರ ದಿನ ಹೋರಾಟ ಮಾಡಿದ ರೈತರು ಹೆದರುತ್ತಾರೆಯೇ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಕಾರ್ಪೊರೇಟ್ ಕಂಪನಿಗಳ ಪರ ನಿಂತಿರುವ ಸರ್ಕಾರ ಸಾಧ್ಯವಾದಷ್ಟು ರೈತರ ಫಲವತ್ತಾದ ಭೂಮಿಯನ್ನು ಕಿತ್ತುಕೊಳ್ಳಲು ಹವಣಿಸುತ್ತಿದೆ. ಅದಕ್ಕಾಗಿ ಮೂರು ತಿಂಗಳ ಗಡುವು ಕೊಟ್ಟಿದೆ ಎಂದರು.
ರೈತರ ಒಗ್ಗಟ್ಟಿನ ಹೋರಾಟದಿಂದ ಸರ್ಕಾರ ಭೂಸ್ವಾಧೀನ ಕೈಬಿಟ್ಟಿದೆ. ಆದರೆ, ಕೆಲವು ನಿರ್ಬಂಧ ವಿಧಿಸಿದೆ. ಅವುಗಳಿಗೆ ರೈತರು ಹೆದರುವ ಅಗತ್ಯ ಇಲ್ಲ ಎಂದರು.
ಇವರ ಸರ್ಕಾರವೇ ಶಾಶ್ವತವಲ್ಲ. ಇನ್ನು ಶಾಶ್ವತ ವಿಶೇಷ ಕೃಷಿ ವಲಯ ಸ್ಥಾಪಿಸಲು ಇವರು ಯಾರು? ಇದು ರೈತರನ್ನು ಹೆದುರಿಸುವ ತಂತ್ರ. ರೈತರು ತಮ್ಮ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ಏಕೆ ಬಳಸಬಾರದು? ಇದನ್ನು ಹೇಗೆ ನಿರ್ಬಂಧಿಸುತ್ತೀರಿ? ಕಾನೂನನ್ನು ಸರಿಯಾಗಿ ಓದಿಕೊಂಡಿದ್ದರೆ ಈ ರೀತಿಯ ಆದೇಶ ಮಾಡುತ್ತಿರಲಿಲ್ಲನ್ಯಾ. ವಿ. ಗೋಪಾಲಗೌಡ
ನಾಲ್ಕು ವರ್ಷಗಳ ಸುದೀರ್ಘ ಹೋರಾಟ ಮಾಡಿರುವ ರೈತರನ್ನು ಯಾವ ಸರ್ಕಾರ, ಅಧಿಕಾರಿಗಳು ಹೆದರಿಸಲು ಸಾಧ್ಯವಿಲ್ಲ. ಇದು ಮಾದರಿ ಹೋರಾಟ, ಮುಂದೆಯೂ ಮಾದರಿಯಾಗಿರುತ್ತದೆಎಸ್.ಆರ್. ಹಿರೇಮಠ, ಸಾಮಾಜಿಕ ಹೋರಾಟಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.