ADVERTISEMENT

ಕೆಲಸ ಮಾಡಲು ಆಸಕ್ತಿ ಇಲ್ಲದಿದ್ದರೆ ಜಾಗ ಖಾಲಿ ಮಾಡಿ: ಅಧಿಕಾರಿಗಳಿಗೆ ಶಾಸಕ ತರಾಟೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 18:44 IST
Last Updated 6 ಆಗಸ್ಟ್ 2025, 18:44 IST
<div class="paragraphs"><p>ರಾಮನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಮಾತನಾಡಿದರು.&nbsp;ಪೂರ್ಣಿಮಾ, ಎ.ಬಿ. ಚೇತನ್ ಕುಮಾರ್, ಗಾಣಕಲ್ ನಟರಾಜ್,&nbsp;ತೇಜಸ್ವಿನಿ, ವಿ.ಎಚ್. ರಾಜು ಹಾಗೂ ಡಾ. ಜಯಣ್ಣ ಇದ್ದಾರೆ</p></div>

ರಾಮನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಮಾತನಾಡಿದರು. ಪೂರ್ಣಿಮಾ, ಎ.ಬಿ. ಚೇತನ್ ಕುಮಾರ್, ಗಾಣಕಲ್ ನಟರಾಜ್, ತೇಜಸ್ವಿನಿ, ವಿ.ಎಚ್. ರಾಜು ಹಾಗೂ ಡಾ. ಜಯಣ್ಣ ಇದ್ದಾರೆ

   

ರಾಮನಗರ: ‘ನಿಮಗೆ ಆಸಕ್ತಿ ಇದ್ದರೆ ಕೆಲಸ ಮಾಡಿ. ಇಲ್ಲದಿದ್ದರೆ ಬೇರೆ ಜಾಗ ನೋಡಿಕೊಳ್ಳಿ. ಯಾರದ್ದೊ ಕಂಟ್ರೋಲ್‌ನಲ್ಲಿ ಕೆಲಸ ಮಾಡಬೇಡಿ. ನಿಮಗೆ ನಿಮ್ಮದೇ ಆದ ಗೌರವವಿದೆ. ಅದಕ್ಕೆ ತಕ್ಕಂತೆ ಕೆಲಸ ಮಾಡಿ...’ – ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪರಿ ಇದು.

ಸಭೆಯಲ್ಲಿ ಜಲ ಜೀವನ್ ಮಿಷನ್ ಯೋಜನೆ ಕಾಮಗಾರಿ ವಿಳಂಬ, ಆಮೆಗತಿಯಲ್ಲಿ ನಡೆಯುತ್ತಿರುವ ಓವರ್ ಹೆಡ್ ಟ್ಯಾಂಕ್‌ ನಿರ್ಮಾಣ, ವನ್ಯಜೀವಿಗಳ ಹಾವಳಿ, ಗ್ರಾಮ ಪಂಚಾಯಿಗಳ ಮಟ್ಟದಲ್ಲಿ ಕೆಲ ಯೋಜನೆಗಳ ಜಾರಿ ವಿಳಂಬ, ಫಲಾನುಭವಿಗಳ ತಲುಪದ ನಿಗಮದ ಸೌಲಭ್ಯಗಳು ಹಾಗೂ ವಿವಿಧ ಸೇವೆಗಳಲ್ಲಿ ವಿಳಂಬ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಹುಸೇನ್, ‘ಇಲ್ಲಿ ಕೆಲಸ ಮಾಡಲು ಆಗದಿದ್ದರೆ, ಬೇರೆಡೆಗೆ ವರ್ಗಾವಣೆ ಮಾಡಿಸಿಕೊಂಡು ಹೋಗಿ’ ಎಂದು ಆಕ್ರೋಶ ಹೊರಹಾಕಿದರು.

ADVERTISEMENT

‘ಗ್ರಾಮೀಣ ಭಾಗದ ಅಭಿವೃದ್ಧಿಗಾಗಿ ಸರ್ಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಜೊತೆಗೆ, ಮೇಲ್ವಿಚಾರಣೆ ಮಾಡಬೇಕು. ಈ ವಿಷಯದಲ್ಲಿ ಪಿಡಿಒಗಳು ನಿರಾಸಕ್ತಿ ತೋರುತ್ತಿದ್ದಾರೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಹಿಂದೆ ಕೈಗೊಂಡಿರುವ ವಿವಿಧ ಕೆಲಸಗಳನ್ನು ಪೂರ್ಣಗೊಳಿಸಿ’ ಎಂದು ಸೂಚನೆ ನೀಡಿದರು.

‘ಪ್ರತಿ ಗ್ರಾಮ ಪಂಚಾಯಿತಿಗೆ ₹1 ಕೋಟಿ ಅನುದಾನ ನೀಡಲಾಗುವುದು. ಅದರಲ್ಲಿ ಅಗತ್ಯವಾಗಿ ಆಗಬೇಕಿರುವ ಕೆಲಸಗಳನ್ನು ಪಟ್ಟಿ ಮಾಡಿ, ಆದ್ಯತೆಯ ಮೇಲೆ ಕೈಗೆತ್ತಿಕೊಳ್ಳಬೇಕು. ಕುಡಿಯುವ ನೀರು ಯೋಜನೆ ಅನುಷ್ಠಾನವನ್ನು ಕಾಲಮಿತಿಯಲ್ಲಿ ಮುಗಿಸಬೇಕು. ವಿವಿಧ ನಿಗಮಗಳಲ್ಲಿರುವ ಸೌಲಭ್ಯಗಳನ್ನು ಅರ್ಹರಿಗೆ ಸಕಾಲದಲ್ಲಿ ತಲುಪಿಸಬೇಕು’ ಎಂದು ಸೂಚನೆ ನೀಡಿದರು.

ಸಣ್ಣ ನೀರಾವರಿ ಇಲಾಖೆ ಎಇಇ ಕೊಟ್ರೇಶ್ ಮಾತನಾಡಿ, ‘ಇಲಾಖೆ ವ್ಯಾಪ್ತಿಯ 19 ಕಾಮಗಾರಿಗಳ ಪೈಕಿ 11 ಮುಗಿದಿದ್ದು, 8 ಪ್ರಗತಿಯಲ್ಲಿವೆ. ಕಾಳೇಗೌಡನದೊಡ್ಡಿ ಏತ ನೀರಾವರಿ ಯೋಜನೆಯ 4 ಕಿ.ಮೀಟರ್ ಪೈಪ್‌ಲೈನ್ ಅಳವಡಿಕೆ ಮುಗಿದಿದೆ’ ಎಂದರು. ಅದಕ್ಕೆ ಶಾಸಕರು, ‘ಪಾದರಹಳ್ಳಿ ಗ್ರಾಮದ ಹಳ್ಳಕ್ಕೆ ನೀರು ಹರಿಸಲು ವಾಲ್ ಅಳವಡಿಸಬೇಕು. ಅಚ್ಚಲು ಮತ್ತು ಜಕ್ಕನಹಳ್ಳಿಯಲ್ಲಿ ಬೇಗ ಕೆಲಸ ಮುಗಿಸಿ’ ಎಂದು ಸಲಹೆ ನೀಡಿದರು.

ಕಾವೇರಿ ನೀರಾವರಿ ನಿಗಮದ ಎಇಇ ಉಮೇರಾ, ‘ಮಂಚನಬೆಲೆ ಎಡದಂಡೆಯ 35 ಕಿ.ಮೀ. ನಾಲೆಯಿದ್ದು, 20 ಕಿ.ಮೀ.ವರೆಗೆ ನೀರು ಹರಿಸಲಾಗಿದೆ. ಉಳಿದ ನಾಲೆ ಶುದ್ದೀಕರಣ ಮತ್ತು ದುರಸ್ತಿಗೆ ₹38 ಕೋಟಿ ವೆಚ್ಚದಲ್ಲಿ ಡಿಪಿಆರ್ ತಯಾರಿಸಲಾಗಿದೆ. ಬಲದಂಡೆ ‌ನಾಲೆ ಪರಿಸ್ಥಿತಿ ಅವಲೋಕಿಸಲು ನೀರು ಹಾಯಿಸಬೇಕಿದೆ. ₹156 ಕೋಟಿ ವೆಚ್ಚದಲ್ಲಿ ಅರ್ಕಾವತಿ ನದಿಯ ಎರಡು ಕಡೆ ತಲಾ 2 ಕಿ.ಮೀ. ಉದ್ದದ ನಡಿಗೆ ಪಥ ನಿರ್ಮಾಣಕ್ಕೆ ಭೂ ಸ್ವಾಧೀನ ಆಗಬೇಕಿದೆ’ ಎಂದು ಹೇಳಿದರು.

ಅರಣ್ಯ ಇಲಾಖೆಯ ಆರ್‌.ಎಫ್‌.ಒ ಮಹಮ್ಮದ್ ಮನ್ಸೂರ್, ‘ರಾಮನಗರ ವಲಯದಲ್ಲಿರುವ 40 ಆನೆಗಳ ಪೈಕಿ 12 ಆನೆಗಳು ಕಾಣಿಸಿಕೊಂಡಿವೆ. ಡ್ರೋನ್ ಕ್ಯಾಮೆರಾ ಬಳಸಿ 9 ಆನೆಗಳನ್ನು ಕಾಡಿಗೆ ಓಡಿಸಲಾಗಿದೆ. ಚಿರತೆ ಹಾವಳಿ ನಿಯಂತ್ರಣಕ್ಕೆ 5 ಬೋನುಗಳನ್ನು ವಿವಿಧೆಡೆ ಇರಿಸಲಾಗಿದೆ’ ಎಂದು ಸಭೆಯ ಗಮನಕ್ಕೆ ತಂದರು.

ವಿವಿಧ ಇಲಾಖೆಗಳ ಅಧಿಕಾರಿಗಳು ಪ್ರಗತಿಯ ವರದಿಯನ್ನು ಮಂಡಿಸಿದರು. ಇದೇ ವೇಳೆ ರಸ್ತೆ ಪಕ್ಕ ತ್ಯಾಜ್ಯದ ವಿಷಯ ಪ್ರಸ್ತಾಪವಾದಾಗ, ‘ರಸ್ತೆ ಪಕ್ಕ ಮತ್ತು ಅರ್ಕಾವತಿ ನದಿ ದಡದಲ್ಲಿ ಕೋಳಿ ತ್ಯಾಜ್ಯ ಎಸೆಯುವರ ವಿರುದ್ಧ ಪೊಲೀಸರಿಗೆ ದೂರು ನೀಡಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್ ಕುಮಾರ್, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಎಚ್. ರಾಜು, ತಹಶೀಲ್ದಾರ್ ತೇಜಸ್ವಿನಿ, ತಾಲ್ಲೂಕು ಪಂಚಾಯಿತಿ ಇಒ ಪೂರ್ಣಿಮಾ, ನಗರಸಭೆ ಪೌರಾಯುಕ್ತ ಡಾ. ಜಯಣ್ಣ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

ನಮ್ಮ ನಾಯಕ ಡಿ.ಕೆ. ಶಿವಕುಮಾರ್ ಅವರು ಸಿ.ಎಂ ಆಗಬೇಕೆಂಬ ನನ್ನ ಹೇಳಿಕೆಗೆ ಈಗಲೂ ಬದ್ದ. ಅವರ ಶ್ರಮಕ್ಕೆ ಪ್ರತಿಫಲ ಸಿಗಬೇಕು. ಪಕ್ಷಕ್ಕಾಗಿ ಬೆವರು ಹರಿಸಿರುವ ಅವರಿಗೆ ಉನ್ನತ ಸ್ಥಾನಮಾನದ ಗೌರವ ಕೊಡಿ ಎಂದು ಕೇಳುವ ಹಕ್ಕು ನನಗಿದೆ

ಎಚ್.ಎ. ಇಕ್ಬಾಲ್ ಹುಸೇನ್ ಶಾಸಕ

ರಾಮನಗರ ಕ್ಷೇತ್ರದಲ್ಲಿ ನೂರಾರು ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ‌ಕೆಲಸಗಳು ನಡೆಯುತ್ತಿವೆ. ಕೆಲಸದ ಸ್ಥಳಗಳಲ್ಲಿ ಡಿಸಿಎಂ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರ ಭಾವಚಿತ್ರ ಒಳಗೊಂಡ ಮಾಹಿತಿಯ ನಾಮಫಲಕವನ್ನು ಅಳವಡಿಸಬೇಕು

ಗಾಣಕಲ್ ನಟರಾಜು ಅಧ್ಯಕ್ಷ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ

‘ಪ್ರತಿಭಟನೆಗೆ ಜಿಲ್ಲೆಯಿಂದ 20 ಸಾವಿರ ಮಂದಿ’

‘ಮತ ಕಳ್ಳತನದ ವಿರುದ್ಧ ಪಕ್ಷದ ರಾಷ್ಟ್ರೀಯ ನಾಯಕರ ನೇತೃತ್ವದಲ್ಲಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಆ. 8ರಂದು ಹಮ್ಮಿಕೊಂಡಿರುವ ಪ್ರತಿಭಟನೆಗೆ ಜಿಲ್ಲೆಯಿಂದ 20 ಸಾವಿರ ಮಂದಿ ಭಾಗಿಯಾಗಲಿದ್ದಾರೆ. ಹೈಕಮಾಂಡ್ ಈಗಾಗಲೇ ಹೋರಾಟದ ರೂಪುರೇಷೆ ಸಿದ್ದಪಡಿಸಿದೆ. ಅವರಿಗೆ ಶಕ್ತಿ ತುಂಬುವ ಕೆಲಸವನ್ನು ನಾವು ಮಾಡುತ್ತೇವೆ. ಯಾವ ರೀತಿ ಅಕ್ರಮ ನಡೆದಿದೆ ಎಂಬುದನ್ನು ರಾಷ್ಟ್ರೀಯ ನಾಯಕರೇ ಹೇಳಲಿದ್ದಾರೆ’ ಎಂದು ಇಕ್ಬಾಲ್ ಹುಸೇನ್ ಜಿ.ಪಂ. ಬಳಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.