
ಮಾಗಡಿ: ಪುರಸಭೆ ಆವರಣದಲ್ಲಿರುವ ಕೆಂಪೇಗೌಡರ ಪ್ರತಿಮೆ ಸ್ಥಳಾಂತರಿಸುವ ವಿಚಾರವನ್ನು ಹೈಕೋರ್ಟ್ ಪರಿಶೀಲಿಸುತ್ತಿದೆ. ನ್ಯಾಯಾಲಯದ ತೀರ್ಪಿನವರೆಗೆ ಪ್ರತಿಮೆಯನ್ನು ಪ್ರಸ್ತುತ ಸ್ಥಳದಲ್ಲೇ ಇರಿಸಲಾಗುವುದು ಎಂದು ಪುರಸಭೆ ಅಧ್ಯಕ್ಷೆ ಶಿವರುದ್ರಮ್ಮ ವಿಜಯಕುಮಾರ್ ತಿಳಿಸಿದರು.
ಪುರಸಭೆ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿದ ಅವರು, ಸರ್ಕಾರಿ ಆಸ್ಪತ್ರೆ ನಿರ್ಮಾಣ ಸಂದರ್ಭದಲ್ಲಿ ಕೆಂಪೇಗೌಡರ ಪ್ರತಿಮೆ ಸ್ಥಳಾಂತರ ಬಗ್ಗೆ ಶಾಸಕ ಬಾಲಕೃಷ್ಣ ತೀರ್ಮಾನಿಸಿದ್ದರು. ಈಗ ಈ ವಿಷಯವನ್ನು ಎರಡನೇ ಬಾರಿಗೆ ಚರ್ಚೆಗೆ ತರಲಾಗಿದೆ. ಹೈಕೋರ್ಟ್‌ನಲ್ಲಿ ಈ ಬಗ್ಗೆ ಮೊಕದ್ದಮೆ ದಾಖಲಾಗಿರುವುದರಿಂದ ನ್ಯಾಯಾಲಯದ ತೀರ್ಪಿನವರೆಗೆ ಪ್ರತಿಮೆಯನ್ನು ಸ್ಥಳಾಂತರಿಸದೆ ಯಥಾಸ್ಥಿತಿಯಲ್ಲಿ ಇರಿಸಲಾಗುವುದು ಎಂದು ಸಭೆಯಲ್ಲಿ ತಿಳಿಸಿದರು.
ಬಾಲಕೃಷ್ಣ ಉದ್ಯಾನವನ್ನು ಸಿದ್ದಾರೂಡ ಉದ್ಯಾನವೆಂದು ಮರುನಾಮಕರಣ ಮಾಡುವ ಬಗ್ಗೆ ಸಭೆ ತೀರ್ಮಾನವನ್ನು ಜಿಲ್ಲಾಧಿಕಾರಿಗೆ ಕಳುಹಿಸಲಾಗುವುದು. ಸರ್ಕಾರದ ಅನುಮೋದನೆ ಪಡೆದ ನಂತರ ಕಾನೂನುಬದ್ಧವಾಗಿ ಕಾರ್ಯನಿರ್ವಹಿಸಲಾಗುವುದು ಎಂದು ತಿಳಿಸಿದರು.
ಪಟ್ಟಣದಲ್ಲಿ ಹಲವು ಕಾಮಗಾರಿ ಪ್ರಗತಿಯಲ್ಲಿದೆ. ಸಾರ್ವಜನಿಕರು ಈ ಕಾಮಗಾರಿಗಳಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು. ₹15ಲಕ್ಷ ಬಜೆಟ್‌ನಲ್ಲಿ ಪ್ರಾರಂಭವಾದ ಕಾಮಗಾರಿ ಮುಗಿಯುವ ಹಂತದಲ್ಲಿದೆ. ಹೊಸ ಬಜೆಟ್ ಹಂಚಿಕೆಯಾಗದ ಕಾರಣ ಪಟ್ಟಣದ ಮೂಲ ಸೌಲಭ್ಯ, ಸ್ವಚ್ಛತೆ, ಕುಡಿಯುವ ನೀರು ಮತ್ತು ಬೀದಿ ದೀಪ ನಿರ್ವಹಣೆಗೆ ಆದ್ಯತೆ ನೀಡಲಾಗುವುದು ಎಂದು ಸಿಬ್ಬಂದಿಗೆ ಸೂಚನೆ ನೀಡಿದರು.
ಪುರಸಭೆ ಅವಧಿ ಕೊನೆಗೊಳ್ಳಲಿದೆ: ಇದು ಪುರಸಭೆ 9ನೇ ಅವಧಿ ಕೊನೆ ಸಾಮಾನ್ಯ ಸಭೆ. ಅನೇಕ ಪುರಸಭೆಗಳಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ವಿಳಂಬದಿಂದಾಗಿ ಒಂದೂವರೆ ವರ್ಷ ಕಾಲ ಆಡಳಿತ ನಡೆಸಲಾಗಿಲ್ಲ. ಈ ಅವಧಿಯನ್ನು ಮುಂದುವರಿಸುವ ಬಗ್ಗೆ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಗಿದೆ. ನ್ಯಾಯಾಲಯ ಅವಧಿ ವಿಸ್ತರಿಸಿದರೆ ಶಿವರುದ್ರಮ್ಮ ವಿಜಯಕುಮಾರ್ ಮತ್ತೆ ಅಧ್ಯಕ್ಷೆಯಾಗಿ ಮುಂದುವರೆಯಲು ಅವಕಾಶ ಸಿಗಲಿದೆ. ಇಲ್ಲದಿದ್ದರೆ, ಪುರಸಭೆ ಆಡಳಿತ ಕೊನೆಗೊಂಡು ಹೊಸ ಚುನಾವಣೆಗೆ ತಯಾರಿ ನಡೆಯಲಿದೆ.
ಸಭೆಯಲ್ಲಿ ವಿವಿಧ ವಾರ್ಡ್‌ಗಳ ಸಮಸ್ಯೆಗಳು ಮತ್ತು ಅನುದಾನ ವಿತರಣೆ ಕುರಿತು ಸದಸ್ಯರು ಚರ್ಚಿಸಿದರು. ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷ ರಿಯಾಜ್, ಸಾಯಿ ಸಮಿತಿ ಅಧ್ಯಕ್ಷ ಶಿವಕುಮಾರ್, ಅನಿಲ್ ಅಶ್ವಥ್, ಕೆ.ವಿ.ಬಾಲು, ಎಂ.ಎನ್. ಮಂಜು, ರೇಖಾ ನವೀನ್, ರಹಮತ್, ವಿಜಯ ರೂಪೇಶ್, ಮಮತಾ, ಆಶಾ, ರಮ್ಯಾ ನರಸಿಂಹಮೂರ್ತಿ, ಕಾಂತರಾಜು, ಜಯರಾಂ ಸೇರಿದಂತೆ ಹಲವರು ಭಾಗವಹಿಸಿದ್ದರು. ಪುರಸಭೆಯ ಮುಖ್ಯ ಅಧಿಕಾರಿ ಶ್ರೀನಿವಾಸ್ ಮತ್ತು ಇತರ ಅಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.