ಬಿಡದಿ (ರಾಮನಗರ): ಪಟ್ಟಣದ ಕೇತಗಾನಹಳ್ಳಿಯ 5 ಸರ್ವೆ ನಂಬರ್‌ಗಳಲ್ಲಿ ಸರ್ಕಾರಿ ಜಮೀನು ಒತ್ತುವರಿ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಈಗಾಗಲೇ ಒತ್ತುವರಿ ಗಡಿ ಗುರುತಿಸಿರುವ ಕಂದಾಯ ಇಲಾಖೆಯು, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಒಟ್ಟು 11 ಒತ್ತುವರಿದಾರರಿಗೆ ನೋಟಿಸ್ ಕೊಟ್ಟಿದೆ.
ಕುಮಾರಸ್ವಾಮಿ ಅವರ ತೋಟದಮನೆ ಜಮೀನು ಸೇರಿದಂತೆ ಸರ್ವೆ ನಂಬರ್ 7, 8, 9, 16, ಹಾಗೂ 79ರಲ್ಲಿ ಸರ್ಕಾರಿ ಜಾಗ ಒತ್ತುವರಿಯಾಗಿರುವುದನ್ನು ಕಂದಾಯ ಮತ್ತು ಸರ್ವೆ ಇಲಾಖೆ ಅಧಿಕಾರಿಗಳು ಈಗಾಗಲೇ ನಡೆಸಿರುವ ಸರ್ವೆಯಲ್ಲಿ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ಕೈಗೊಂಡಿದ್ದ ಅಧಿಕಾರಿಗಳು, ಒತ್ತುವರಿ ಗುರುತಿಸುವಿಕೆ ಪೂರ್ಣಗೊಳಿಸಿದ್ದಾರೆ. ಇದೀಗ ತಹಶೀಲ್ದಾರ್ ತೇಜಸ್ವಿನಿ ಅವರು, ಮಾರ್ಚ್ 18ರಂದು ನೋಟಿಸ್ ಜಾರಿಗೊಳಿಸಿದ್ದಾರೆ.
ನೋಟಿಸ್‌ನಲ್ಲಿ ಏನಿದೆ?: ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಒತ್ತುವರಿ ಮಾಡಿ ಸ್ವಾಧೀನದಲ್ಲಿರುವ ನಿಮ್ಮಿಂದ ಕರ್ನಾಟಕ ಭೂ ಕಂದಾಯ ಕಾಯ್ದೆ–1964ರ ಕಲಂ 94ರಡಿ ಯಾಕೆ ದಂಡ ವಸೂಲಿ ಮಾಡಬಾರದು ಹಾಗೂ ಅನಧಿಕೃತವಾಗಿ ಪ್ರವೇಶಿಸಿ ಒತ್ತುವರಿ ಮಾಡಿರುವುದಕ್ಕೆ ನಿಮ್ಮ ವಿರುದ್ಧ ಕಾಯ್ದೆಯ ಕಲಂ 192 (ಎ) ಅಡಿ ಯಾಕೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬಾರದು? ಎಂಬುದಕ್ಕೆ ನೋಟಿಸ್ ತಲುಪಿದ 7 ದಿನದೊಳಗೆ ಸಮಜಾಯಿಷಿ ಕೊಡಿ. ದಾಖಲೆಗಳು ಏನಾದರೂ ಇದ್ದಲ್ಲಿ ಸಲ್ಲಿಸಿ. ಇಲ್ಲವಾದಲ್ಲಿ ನಿಮ್ಮ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಕಾರ್ಯಾಚರಣೆ ಭಾಗವಾಗಿ ಒತ್ತುವರಿ ಗಡಿ ಗುರುತಿಸಿ ಬಾವುಟ ನೆಟ್ಟಿದ್ದ ಕಂದಾಯ ಇಲಾಖೆ, ಗುರುವಾರ ಆ ಸ್ಥಳಗಳಲ್ಲಿ ಗುಂಡಿ ತೆಗೆದು ಕಲ್ಲು ಕಂಬಗಳನ್ನು ನೆಟ್ಟಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.