ADVERTISEMENT

ರಾಮನಗರ | ‘ಕೆಪಿಎಸ್– ಮ್ಯಾಗ್ನೆಟ್’ ನೆಪ: ಶಾಲೆ ಮುಚ್ಚಲು ತಯಾರಿ

ವಿಲೀನಕ್ಕೆ 193 ಶಾಲೆಗಳನ್ನು ಗುರುತಿಸಿದ ಶಿಕ್ಷಣ ಇಲಾಖೆ; ಸಮಗ್ರ ಶಿಕ್ಷಣದ ಹೆಸರಿನಲ್ಲಿ ಶಾಲೆ ಮುಚ್ಚುವ ಹುನ್ನಾರ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 2:03 IST
Last Updated 2 ಡಿಸೆಂಬರ್ 2025, 2:03 IST
ರಾಮನಗರದ ಚೈತನ್ಯ ಭವನದಲ್ಲಿ ಎಐಡಿಎಸ್‌ಒ ಸಂಘಟನೆ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಕೆಪಿಎಸ್-ಮ್ಯಾಗ್ನೆಟ್ ಯೋಜನೆಯಡಿ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ವಿಲೀನಗೊಳ್ಳಲಿರುವ ಶಾಲೆಗಳ ಪಟ್ಟಿಯನ್ನು ಸಂಘಟನೆ ಉಪಾಧ್ಯಕ್ಷ ಅಪೂರ್ವ ಸಿ.ಎಂ, ಜಿಲ್ಲಾ ಸಂಚಾಲಕ ರೋಹಿತ್ ಎಂ.ಆರ್, ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಗೋವಿಂದರಾಜು ಹಾಗೂ ಚಿನ್ನಗಿರಿ ಪ್ರದರ್ಶಿಸಿದರು
ರಾಮನಗರದ ಚೈತನ್ಯ ಭವನದಲ್ಲಿ ಎಐಡಿಎಸ್‌ಒ ಸಂಘಟನೆ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಕೆಪಿಎಸ್-ಮ್ಯಾಗ್ನೆಟ್ ಯೋಜನೆಯಡಿ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ವಿಲೀನಗೊಳ್ಳಲಿರುವ ಶಾಲೆಗಳ ಪಟ್ಟಿಯನ್ನು ಸಂಘಟನೆ ಉಪಾಧ್ಯಕ್ಷ ಅಪೂರ್ವ ಸಿ.ಎಂ, ಜಿಲ್ಲಾ ಸಂಚಾಲಕ ರೋಹಿತ್ ಎಂ.ಆರ್, ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಗೋವಿಂದರಾಜು ಹಾಗೂ ಚಿನ್ನಗಿರಿ ಪ್ರದರ್ಶಿಸಿದರು   

ರಾಮನಗರ: ‘ರಾಜ್ಯ ಸರ್ಕಾರವು ಕೆಪಿಎಸ್-ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ ಗ್ರಾಮಗಳಲ್ಲಿರುವ ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿದೆ. ಯೋಜನೆಯಡಿ ಪ್ರಾಯೋಗಿಕವಾಗಿ ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು ಶಾಲೆಯೊಂದಿಗೆ ಸುತ್ತಲಿನ 7 ಗ್ರಾಮಗಳ ಸರ್ಕಾರಿ ಶಾಲೆಗಳನ್ನು ವಿಲೀನ ಮಾಡಲಾಗುತ್ತಿದೆ’ ಎಂದು ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿಗಳ ಸಂಘಟನೆ (ಎಐಡಿಎಸ್‌ಒ) ಉಪಾಧ್ಯಕ್ಷೆ ಅಪೂರ್ವ ಸಿ.ಎಂ ಆತಂಕ ವ್ಯಕ್ತಪಡಿಸಿದರು.

‘ಯೋಜನೆಯಡಿ ಹೊಂಗನೂರಿನಿಂದ 6 ಕಿ.ಮೀ. ವ್ಯಾಪ್ತಿಯಲ್ಲಿರುವ ಹೊಡಿಕೆ ಹೊಸಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ, ಕನ್ನಿದೊಡ್ಡಿ ಶಾಲೆ, ಅಮ್ಮಳ್ಳಿದೊಡ್ಡಿ ಶಾಲೆ, ಸಂತೆಮೊಗೇನಹಳ್ಳಿ ಶಾಲೆ, ಮೊಗೇನಹಳ್ಳಿದೊಡ್ಡಿ, ಸುಣ್ಣಘಟ್ಟ ಹಾಗೂ ಚನ್ನಂಕೇಗೌಡನದೊಡ್ಡಿ ಶಾಲೆಗಳನ್ನು ತುರ್ತು ವಿಲೀನಕ್ಕೆ ಆದೇಶ ನೀಡಲಾಗಿದೆ’ ಎಂದು ನಗರದ ಚೈತನ್ಯ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಈಗಾಗಲೇ ಸರ್ಕಾರಿ ಶಾಲೆಗಳು ಕಾಯಂ ಶಿಕ್ಷಕರು, ಸುಸಜ್ಜಿತ ಕಟ್ಟಡ ಹಾಗೂ ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿವೆ. ಅಂತಹ ಶಾಲೆಗಳಿಗೆ ಸೌಕರ್ಯ ಕಲ್ಪಿಸಿ ಸಬಲೀಕರಣ ಮಾಡಬೇಕಿದ್ದ ಸರ್ಕಾರ, ಕೆಪಿಎಸ್– ಮ್ಯಾಗ್ನೆಟ್ ಯೋಜನೆ ತಂದು ಶಾಲೆಗಳ ಉನ್ನತೀಕರಣದ ಹೆಸರಿನಲ್ಲಿ ಗ್ರಾಮಗಳ ಶಾಲೆಗಳನ್ನು ಕಾಯಂ ಆಗಿ ಬಂದ್ ಮಾಡುವ ಕೆಲಸಕ್ಕೆ ಕೈ ಹಾಕಿದೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಒಂದೇ ಒಂದು ಸರ್ಕಾರಿ ಶಾಲೆ ಮುಚ್ಚುವುದಿಲ್ಲ ಎನ್ನುವ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವರ ಮಾತು ಸತ್ಯಕ್ಕೆ ದೂರವಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಯಾವ ಶಾಲೆಯನ್ನು ಮ್ಯಾಗ್ನೆಟ್ ಶಾಲೆಯನ್ನಾಗಿ ಮಾಡಬೇಕು ಮತ್ತು ಆ ಶಾಲೆಗೆ ಯಾವ ಶಾಲೆಗಳನ್ನು ಸೇರಿಸಬೇಕು ಎಂಬುದರ ಪಟ್ಟಿಯನ್ನು ಈಗಾಗಲೇ ಸಿದ್ಧಗೊಳಿಸಲಾಗಿದೆ’ ಎಂದು ದೂರಿದರು.

ADVERTISEMENT

‘ಶಾಲೆಗಳ ಅಭಿವೃದ್ಧಿ ಹೆಸರಲ್ಲಿ ರಾಜ್ಯದ ಜನತೆಯನ್ನು ವಂಚಿಸಿ ಬಡ ಮಕ್ಕಳಿಂದ ಶಾಶ್ವತವಾಗಿ ಶಿಕ್ಷಣ ಕಸಿದುಕೊಳ್ಳುವ ಸರ್ಕಾರದ ಘೋರ ಹುನ್ನಾರ ಇದಾಗಿದೆ. ಈ ಸತ್ಯವನ್ನು ಎಐಡಿಎಸ್‌ಒ ಜನತೆಯ ಮುಂದೆ ಇಟ್ಟು, ಕೆಪಿಎಸ್-ಮ್ಯಾಗ್ನೆಟ್ ಯೋಜನೆಯ ಕರಾಳ ವಾಸ್ತವವನ್ನು ಬಯಲಿಗೆಳೆದಿದೆ. ಚನ್ನಪಟ್ಟಣ ತಾಲ್ಲೂಕಿನಲ್ಲಿ ಸ್ಥಳೀಯ ವಿದ್ಯಾರ್ಥಿಗಳ ಪೋಷಕರನ್ನು ಒಳಗೊಂಡು ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಹೆಸರಿನಲ್ಲಿ ಹೋರಾಟ ರೂಪಿಸಿದೆ’ ಎಂದರು.

‘ಉನ್ನತೀಕರಣ, ಖಾಸಗಿ ಶಾಲೆಗಳಂತೆ ಸರ್ಕಾರಿ ಮಕ್ಕಳನ್ನು ಕರೆದುಕೊಂಡು ಬರಲು ಮತ್ತು ಹೋಗಲು ಬಸ್ ವ್ಯವಸ್ಥೆ, ಒಂದನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣದಂತಹ ಆಮಿಷವೊಡ್ಡಿ ಶಾಲೆಗಳನ್ನು ವಿಲೀನಕ್ಕೆ ಸರ್ಕಾರ ಮುಂದಾಗಿದೆ. ಆ ಮೂಲಕ, ವಿಲೀನಗೊಳ್ಳುವ ಶಾಲೆಗಳ ಕಟ್ಟಡ ಮತ್ತು ಆ ಜಾಗವನ್ನು ಬೇರೆ ಉದ್ದೇಶಕ್ಕೆ ಬಳಸಲು ಹುನ್ನಾರ ನಡೆಸಿದೆ’ ಎಂದು ಆರೋಪಿಸಿದರು.

ನಿಯಮಬಾಹಿರ: ‘ಪ್ರತಿ ಕೆಪಿಎಸ್ ಶಾಲೆಗೆ ಕನಿಷ್ಠ 1,200 ವಿದ್ಯಾರ್ಥಿಗಳನ್ನು ಹೊಂದುವ ಗುರಿ ಹೊಂದಲಾಗಿದೆ. ಅಲ್ಲದೆ, ಶಾಲೆಯಲ್ಲಿ ಕನಿಷ್ಠ 50 ವಿದ್ಯಾರ್ಥಿಗಳಿದ್ದರೆ ಮಾತ್ರ ವಿಲೀನ ಮಾಡುವುದಾಗಿ ಶಿಕ್ಷಣ ಇಲಾಖೆ ಹೇಳಿದೆ. ಆದರೆ, ಹೊಂಗನೂರು ಕೆಪಿಎಸ್ ಶಾಲೆಯೊಂದಿಗೆ ವಿಲೀನಕ್ಕೆ ಗುರುತಿಸಿರುವ ಸುತ್ತಲಿನ 7 ಗ್ರಾಮಗಳಲ್ಲಿ ಗುರುತಿಸಿರುವ 50ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಮಕ್ಕಳನ್ನು ಕೆಪಿಎಸ್‌ ಶಾಲೆಗೆ ಸೇರಿಸಲು ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಥಳೀಯ ಶಾಲೆಗಳ ಶಿಕ್ಷಕರು ಹಾಗೂ ಪೋಷಕರ ಮೇಲೆ ಒತ್ತಡ ಹೇರುತ್ತಿದ್ದಾರೆ’ ಎಂದು ದೂರಿದರು.

ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಗೋವಿಂದರಾಜು ಹಾಗೂ ಚಿನ್ನಗಿರಿ ಇದ್ದಾರೆ. 

ಮೂಲಸೌಕರ್ಯಗಳಿಲ್ಲದೆ ಬಳಲುತ್ತಿರುವ ಸರ್ಕಾರಿ ಶಾಲೆಗಳಿಗೆ ಸೌಲಭ್ಯ ಕಲ್ಪಿಸಿ ಗುಣಮಟ್ಟದ ಶಿಕ್ಷಣ ನೀಡಿ ಸಬಲೀಕರಣಗೊಳಿಸಬೇಕಾದ ಸರ್ಕಾರವೇ ಕೆಪಿಎಸ್–ಮ್ಯಾಗ್ನೆಟ್ ಯೋಜನೆ ಹೆಸರಿನಲ್ಲಿ ಹಳ್ಳಿ ಶಾಲೆಗಳನ್ನು ಮುಚ್ಚಲು ಮುಂದಾಗಿದೆ

– ರೋಹಿತ್ ಎಂ.ಆರ್ ಜಿಲ್ಲಾ ಸಂಚಾಲಕ ‌‌‌‌‌ಬೆಂಗಳೂರು ದಕ್ಷಿಣ ಜಿಲ್ಲೆ

ವಿಲೀನಕ್ಕೆ 193 ಶಾಲೆಗಳ ಪಟ್ಟಿ ಸಿದ್ದ

‘ಕೆಪಿಎಸ್-ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ ರಾಜ್ಯ ಸರ್ಕಾರ 40 ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿದೆ. ಗ್ರಾಮ ಪಂಚಾಯಿತಿಗೆ ಒಂದರಂತೆ 6 ಸಾವಿರ ಕೆಪಿಎಸ್-ಮ್ಯಾಗ್ನೆಟ್ ಶಾಲೆಗಳನ್ನು ಸ್ಥಾಪಿಸುವ ಗುರಿ ಹೊಂದಿದೆ. ಮೊದಲ ಹಂತದಲ್ಲಿ ಗಣಿಬಾಧಿತ ಜಿಲ್ಲೆಗಳಲ್ಲಿ 100 ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ 200 ಹಾಗೂ ಇತರ ಭಾಗದಲ್ಲಿ 500 ಶಾಲೆಗಳು ಸೇರಿದಂತೆ ಒಟ್ಟು 800 ಶಾಲೆಗಳನ್ನು ಗುರುತಿಸಿದೆ. ಯೋಜನೆಯಡಿ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲೇ 856 ಶಾಲೆಗಳನ್ನು ಮುಚ್ಚಲಾಗುತ್ತದೆ. ಅದಕ್ಕಾಗಿ 193 ಶಾಲೆಗಳನ್ನು ಮ್ಯಾಗ್ನೆಟ್ ಶಾಲೆಗಳೆಂದು ಗುರುತಿಸಿ ಪಟ್ಟಿ ಮಾಡಲಾಗಿದೆ’ ಎಂದು ಅಪೂರ್ವ ಅವರು ದಾಖಲೆಗಳನ್ನು ಪ್ರದರ್ಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.