ADVERTISEMENT

ಬೆಳಿಗ್ಗೆ ರಸ್ತೆಗಿಳಿಯದ ಬಸ್‌ಗಳು; ಸಂಜೆ ಸರಾಗ ಸಂಚಾರ

ಪ್ರಯಾಣಿಕರ ಪರದಾಟ; ರೈಲಿನತ್ತ ಜನರ ಚಿತ್ತ; ಖಾಸಗಿ ಬಸ್, ಆಟೊ, ಇತರ ವಾಹನಗಳಿಗೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 18:37 IST
Last Updated 5 ಆಗಸ್ಟ್ 2025, 18:37 IST
ಮುಷ್ಕರದ ಹಿನ್ನೆಲೆಯಲ್ಲಿ ರಾಮನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಸರ್ಕಾರಿ ಬಸ್‌ಗಳ ಸುಳಿವಿರಲಿಲ್ಲ. ಖಾಸಗಿ ಬಸ್ಸೊಂದು ನಿಲ್ದಾಣದಲ್ಲಿ ಬೀಡುಬಿಟ್ಟು ಜನರನ್ನು ಹತ್ತಿಸಿಕೊಳ್ಳುತ್ತಿದ್ದ ದೃಶ್ಯ ಕಂಡುಬಂತು
ಮುಷ್ಕರದ ಹಿನ್ನೆಲೆಯಲ್ಲಿ ರಾಮನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಸರ್ಕಾರಿ ಬಸ್‌ಗಳ ಸುಳಿವಿರಲಿಲ್ಲ. ಖಾಸಗಿ ಬಸ್ಸೊಂದು ನಿಲ್ದಾಣದಲ್ಲಿ ಬೀಡುಬಿಟ್ಟು ಜನರನ್ನು ಹತ್ತಿಸಿಕೊಳ್ಳುತ್ತಿದ್ದ ದೃಶ್ಯ ಕಂಡುಬಂತು   

ರಾಮನಗರ: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ರಾಜ್ಯ ಸಾರಿಗೆ ನಿಗಮಗಳ ನೌಕರರ ಸಂಘಟನೆ ಮಂಗಳವಾರ ಕರೆ ಕೊಟ್ಟಿದ್ದ ಮುಷ್ಕರಕ್ಕೆ ಜಿಲ್ಲೆಯಲ್ಲಿ ಬಹುತೇಕ ಬೆಂಬಲ ವ್ಯಕ್ತವಾಯಿತು. ನಗರಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಕೊರತೆಯನ್ನು ಕೆಲವೆಡೆ ಖಾಸಗಿ ಬಸ್‌ಗಳು ತುಂಬಿದವು. ಆದರೆ, ಗ್ರಾಮೀಣ ಭಾಗದ ಪ್ರಯಾಣಿಕರು ಪರದಾಡಿದರು.

ಬೆಳಿಗ್ಗೆ 9 ಗಂಟೆವರೆಗೆ ಇದ್ದ ಕೆಎಸ್‌ಆರ್‌ಟಿ ಬಸ್‌ಗಳ ಸಂಚಾರ ಸಂಜೆವರೆಗೆ ಬಂದ್ ಆಗಿತ್ತು. 5 ಗಂಟೆ ನಂತರ ಎಂದಿನಂತೆ ಸಂಚಾರ ಸರಾಗವಾಯಿತು. ಮುಷ್ಕರದ ಹಿನ್ನೆಲೆಯಲ್ಲಿ ಖಾಸಗಿ ಬಸ್‌ಗಳ ಸಂಚಾರ ಎಂದಿಗಿಂತ ಹೆಚ್ಚಾಗಿತ್ತು. ಬೆಂಗಳೂರು, ಚನ್ನಪಟ್ಟಣ, ಮದ್ದೂರು, ಮಂಡ್ಯ, ಮಾಗಡಿ, ಕನಕಪುರ, ಹಾರೋಹಳ್ಳಿ ಸೇರಿದಂತೆ ಅಕ್ಕಪಕ್ಕದ ಊರುಗಳಿಗೆ ಹೊರಟಿದ್ದ ಪ್ರಯಾಣಿಕರು ಖಾಸಗಿ ಬಸ್‌ಗಳನ್ನು ಹತ್ತಿಕೊಂಡರು.

ರೈಲು ನಿಲ್ದಾಣದಲ್ಲಿ ದಟ್ಟಣೆ: ಮುಷ್ಕರದ ಹಿನ್ನೆಲೆಯಲ್ಲಿ ರೈಲು ನಿಲ್ದಾಣದಲ್ಲಿ ಬೆಳಿಗ್ಗೆ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿತ್ತು. ಬಸ್‌ಗಳು ಇಲ್ಲದಿದ್ದರಿಂದ ಬೆಂಗಳೂರಿಗೆ ಕೆಲಸಕ್ಕೆ ಹೋಗುವವರು ಬೆಳಿಗ್ಗೆ ಸಂಚರಿಸುವ ರೈಲುಗಳನ್ನು ಹತ್ತಿಕೊಂಡು ಹೋದರು.

ADVERTISEMENT

ಕ್ಯಾಬ್‌, ಮಿನಿ ಟೆಂಪೊ ಸೇರಿದಂತೆ ಇತರ ಖಾಸಗಿ ವಾಹನಗಳು ಸಹ ಜನರನ್ನು ಹತ್ತಿಸಿಕೊಂಡು ಹೋಗುತ್ತಿದ್ದ ದೃಶ್ಯ ಕಂಡುಬಂತು. ಬೇರೆ ಕಡೆಯಿಂದ ಬಂದು ನಗರವನ್ನು ತಲುಪಿದವರು ಕೆಎಸ್‌ಆರ್‌ಟಿಸಿ ಬಸ್ ಇಲ್ಲದಿದ್ದರಿಂದ ‌ಆಟೊಗಳನ್ನು ಅವಲಂಬಿಸಿದರು.

ಆನೇಕಲ್‌ನಲ್ಲಿ ಸರಾಗ: ಬೆಂಗಳೂರು ದಕ್ಷಿಣ ಜಿಲ್ಲೆ ವ್ಯಾಪ್ತಿಯ ರಾಮನಗರ, ಚನ್ನಪಟ್ಟಣ. ಮಾಗಡಿ, ಕನಕಪುರ, ಹಾರೋಹಳ್ಳಿ ಹಾಗೂ ಆನೇಕಲ್ ಡಿಪೊ ವ್ಯಾಪ್ತಿಯಲ್ಲಿರುವ 485 ಕೆಎಸ್‌ಆರ್‌ಟಿಸಿ ಬಸ್‌ಗಳ ಪೈಕಿ ಬೆರಳೆಣಿಕೆಯ ಬಸ್‌ಗಳು ಮಾತ್ರ ಕಾರ್ಯಾಚರಣೆ ನಡೆಸಿದವು. ಆನೇಕಲ್‌ನಲ್ಲಿ ಮಾತ್ರ ಬಸ್‌ಗಳ ಸಂಚಾರ ಎಂದಿನಂತೆ ಸುಗಮವಾಗಿತ್ತು.

ಉಳಿದ ಡಿಪೋಗಳ ವ್ಯಾಪ್ತಿಯಲ್ಲಿ ಚಾಲಕರು ಮತ್ತು ನಿರ್ವಾಹಕರು ಮುಷ್ಕರ ಬೆಂಬಲಿಸಿದ್ದರಿಂದ ಯಾರೂ ಬಸ್‌ ಹತ್ತಲಿಲ್ಲ. ಹೀಗಾಗಿ, ಬಸ್‌ಗಳು ಡಿಫೊಗಳಲ್ಲೇ ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂತು. ಇಲಾಖೆಯ ಹಿರಿಯ ಅಧಿಕಾರಿಗಳು ಬಸ್‌ಗಳ ಕಾರ್ಯಾಚರಣೆ ನಡೆಸುವಂತೆ ಮಾಡಿದ ಮನವಿ ಮಾಡಿದರೂ, ತಮ್ಮ ಬೇಡಿಕೆಗಳು ಈಡೇರುವವರೆಗೆ ಬಸ್ ತೆಗೆಯುವುದಿಲ್ಲ ಎಂದು ಕರ್ತವ್ಯಕ್ಕೆ ಗೈರಾದರು.

ಬಿಡದಿಯಿಂದ ಬೆಂಗಳೂರಿಗೆ ಬಿಎಂಟಿಸಿ ಬಸ್‌ಗಳ ಸಂಚಾರ ಬೆಳಿಗ್ಗೆ ಸರಾಗವಾಗಿತ್ತು. 9.30ರ ನಂತರ ಆ ಬಸ್‌ಗಳು ಸಂಚಾರವೂ ಸಹ ಬಹುತೇಕ ಸ್ಥಗಿತಗೊಂಡಿತು. ಇದರಿಂದಾಗಿ, ಬಿಡದಿ ಮತ್ತು ಹಾರೋಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ನಿತ್ಯ ದೂರದೂರುಗಳಿಂದ ಕೆಲಸಕ್ಕೆ ಬಂದು ಹೋಗುವ ಕಾರ್ಮಿಕರು ಆಟೊಗಳು ಸೇರಿದಂತೆ ಇತರ ಖಾಸಗಿ ವಾಹನಗಳ ಮೊರೆ ಹೋದರು.

ಮುಷ್ಕರದ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಡಿಪೊಗಳು ಹಾಗೂ ಬಸ್ ನಿಲ್ದಾಣಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ನಗರದ ಐಜೂರು ಬಸ್ ನಿಲ್ದಾಣ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆ ಪೊಲೀಸ್ ವಾಹನಗಳು ಬೀಡು ಬಿಟ್ಟಿದ್ದವು. ಹಿರಿಯ ಪೊಲೀಸ್ ಅಧಿಕಾರಿಗಳು ನಗರಗಳಲ್ಲಿ ಬೀಟ್ ಹಾಕಿ ಪರಿಸ್ಥಿತಿ ಮೇಲೆ ನಿಗಾ ಇಟ್ಟರು.

ಮುಷ್ಕರದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿ ಹಾ‌ರೋಹಳ್ಳಿ ಬಸ್ ನಿಲ್ದಾಣದಲ್ಲಿ ನಿಂತಿದ್ದ ಬಿಎಂಟಿಸಿ ಬಸ್‌ಗಳು. ಅಹಿತರ ಘಟನೆ ನಡೆಯದಂತೆ ನಿಲ್ದಾಣದ ಮುಂದೆ ಬೀಡುಬಿಟ್ಟಿದ್ದ ಪೊಲೀಸರು

ನಮ್ಮ ವಿಭಾಗದ ಆನೇಕಲ್‌ನಲ್ಲಿ ಮಾತ್ರ ಬಸ್‌ಗಳ ಸಂಚಾರ ಎಂದಿನಂತೆ ಇತ್ತು . ಉಳಿದೆಡೆ ಪರಿಸ್ಥಿತಿಗೆ ಅನುಗುಣವಾಗಿ ಕೆಲ ಬಸ್‌ಗಳು ಸಂಚರಿಸಿವೆ. ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ. ದಿನದ ನಷ್ಟದ ಲೆಕ್ಕಾಚಾರ ನಡೆಯುತ್ತಿದೆ

ಶ್ರೀ ಹರಿಬಾಬು ವಿಭಾಗೀಯ ನಿಯಂತ್ರಣ ಅಧಿಕಾರಿ ಕೆಎಸ್‌ಆರ್‌ಟಿಸಿ ಬೆಂಗಳೂರು ದಕ್ಷಿಣ ಜಿಲ್ಲೆ

ಬಾರದ ಬಸ್; ವಿದ್ಯಾರ್ಥಿಗಳ ಗೈರು

ನಿತ್ಯ ಓಡಾಟಕ್ಕೆ ಕೆಎಸ್‌ಆರ್‌ಟಿಸಿ ಬಸ್‌ಗಳನ್ನೇ ಅವಲಂಬಿಸಿದ್ದ ವಿದ್ಯಾರ್ಥಿಗಳು ಕಾರ್ಮಿಕರು ನೌಕರರು ಹಾಗೂ ಅಧಿಕಾರಿಗಳು ಎಂದಿನಂತೆ ನಿಗದಿತ ಸಮಯಕ್ಕೆ ಸರಿಯಾಗಿ ತಲುಪಲಾಗದೆ ಪರಿತಪಿಸಿದರು. ಹಳ್ಳಿಗಳಿಂದ ನಗರಕ್ಕೆ ಸರಿಯಾಗಿ ಬಂದರೂ ಇಲ್ಲಿಂದ ಮತ್ತೊಂದು ಕಡೆಗೆ ಹೋಗಲು ವಾಹನ ವ್ಯವಸ್ಥೆ ಇರಲಿಲ್ಲ. ಇದರಿಂದಾಗಿ ಹಣ ತೆತ್ತು ಆಟೊದಲ್ಲಿ ಹೋಗಬೇಕಾಯಿತು. ಬಂದ್ ಕಾರಣಕ್ಕೆ ಗ್ರಾಮೀಣ ಭಾಗದ ಕೆಲ ವಿದ್ಯಾರ್ಥಿಗಳು ಇಂದು ಶಾಲಾ–ಕಾಲೇಜಿಗೆ ಗೈರಾಗಿದ್ದರು. ಕೆಲ ಪೋಷಕರು ತಮ್ಮ ಮಕ್ಕಳನ್ನು ಬೈಕ್ ಮತ್ತು ಕಾರುಗಳಲ್ಲಿ ಶಾಲಾ–ಕಾಲೇಜಿಗೆ ಕರೆದುಕೊಂಡು ಬಂದು ಬಿಟ್ಟು ಹೋಗುತ್ತಿದ್ದ ದೃಶ್ಯ ಕಂಡುಬಂತು. ಪಾವತಿಸಿ ಪ್ರಯಾಣಿಸಿದ ಮಹಿಳೆಯರು ಶಕ್ತಿ ಯೋಜನೆಯಡಿ ನಿತ್ಯ ಎಂದಿನಂತೆ ತಮ್ಮ ಕೆಲಸದ ಸ್ಥಳ ಕಾಲೇಜು ಕಚೇರಿಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತವಾಗಿ ನಿತ್ಯ ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕರು ಬಂದ್ ಹಿನ್ನೆಲೆಯಲ್ಲಿ ಖಾಸಗಿ ಮತ್ತು ಖಾಸಗಿ ವಾಹನಗಳಿಗೆ ಹಣ ತೆತ್ತು ಪ್ರಯಾಣಿಸಬೇಕಾಯಿತು. ಶಾಲಾ–ಕಾಲೇಜುಗಳ ವಿದ್ಯಾರ್ಥಿನಿಯರು ಸಹ ಪರದಾಡಬೇಕಾಯಿತು. 

ಗ್ರಾಮೀಣ ಭಾಗಕ್ಕೆ ತಟ್ಟಿದ ಬಂದ್ ಬಿಸಿ

ಹಾರೋಹಳ್ಳಿ: ರಾಜ್ಯ ಸಾರಿಗೆ ನಿಗಮಗಳ ನೌಕರರ ಸಂಘಟನೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಮಂಗಳವಾರ ನಡೆಸಿದ ಮುಷ್ಕರದ ಬಿಸಿ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಜನರಿಗೆ ತಟ್ಟಿತು. ಪಟ್ಟಣದ ಬಸ್ ನಿಲ್ದಾಣದಿಂದ ಬೆಳಿಗ್ಗೆಯಿಂದಲೇ ಬೆಂಗಳೂರು ಸೇರಿದಂತೆ ಬಹುತೇಕ ಕಡೆ ಬಸ್‌ಗಳ ಓಡಾಟವಿಲ್ಲದೇ ಜನ ನಿಗದಿತ ಸ್ಥಳಕ್ಕೆ ತೆರಳಲು ಪರದಾಡಿದರು. ಬೆಳಿಗ್ಗೆ ಕೆಲಸಕ್ಕೆ ಹೋಗಲು ಬಸ್‌ಗಳಿಲ್ಲದೇ ಜನ ಖಾಸಗಿ ವಾಹನಗಳು ಹಾಗೂ ಬೆರಳೆಣಿಕೆಯ ಬಿಎಂಟಿಸಿ ಬಸ್‌ಗಳಲ್ಲಿ ಸಂಚರಿಸಿದರು. ಇನ್ನು ಗ್ರಾಮೀಣ ಭಾಗದ ಹಲವು ಪ್ರಯಾಣಿಕರಿಗೆ ಮುಷ್ಕರದ ಬಗ್ಗೆ ಮಾಹಿತಿ ಇಲ್ಲದೇ ಬಂದು ಬಸ್‌ಗಾಗಿ ಕಾದು ಕುಳಿತಗಾಗಿ ಕಾದು ಕುಳಿತಿದ್ದಾರೆ. ಶಾಲೆಗೆ ಹೋಗುವ ಮಕ್ಕಳು ಕೂಡ ಪರದಾಡಿದ್ದು ಸಿಕ್ಕ ಸಿಕ್ಕ ವಾಹನ ಹತ್ತಿ ಶಾಲೆ-ಕಾಲೇಜಿಗೆ ಹೋಗುತ್ತಿದ್ದರು. ಆನೇಕಲ್ ಮರಳವಾಡಿ ಸೇರಿದ್ದಂತೆ ವಿವಿಧ ದೂರದ ಊರುಗಳಿಗೆ ಬಸ್ ಸಂಚಾರವಿಲ್ಲದೇ ಜನರಿಗೆ ತೊಂದರೆ ಉಂಟಾಯಿತು. ಬೆಂಗಳೂರು ಮತ್ತು ಕನಕಪುರ ಕಡೆಗೆ ಖಾಸಗಿ ಬಸ್ ಹಾಗೂ ಬಿಎಂಟಿಸಿ ಬಸ್‌ಗಳು ಓಡಾಡುತ್ತಿದ್ದವು. ಮುಷ್ಕರ ಹಿನ್ನೆಲೆಯಲ್ಲಿ ಬಸ್ ನಿಲ್ದಾಣಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನಚ್ಚರಿಕೆ ವಹಿಸಿದ್ದು ಬಸ್ ನಿಲ್ದಾಣದ ಒಳಗಡೆ ಪೊಲೀಸ್‌‍ ಹಾಗೂ ಗೃಹರಕ್ಷಕ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ಪ್ರಮುಖ ಬೇಡಿಕೆಗಳೇನು?

ಸಾರಿಗೆ ನೌಕರರ 38 ತಿಂಗಳ ಬಾಕಿ ವೇತನ ಬಿಡುಗಡೆ ಮಾಡಬೇಕು.

ಖಾಸಗೀಕರಣ ನಿಲ್ಲಿಸಬೇಕು.‌

ಕಾರ್ಮಿಕರ ಮೇಲಿನ ಕಿರುಕುಳ ನಿಲ್ಲಿಸಬೇಕು

2024ರ ಜ. 1ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆ ಮಾಡಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.