ADVERTISEMENT

ಕುವೆಂಪು ಜನ್ಮದಿನ: ರಕ್ತದಾನ ಶಿಬಿರ

ರಾಮನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಆಯೋಜನೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 5:10 IST
Last Updated 2 ಜನವರಿ 2026, 5:10 IST
ರಾಮನಗರದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಾರಾಯಣ ಆಸ್ಪತ್ರೆಯಲ್ಲಿ ನಡೆದ ‌ರಾಷ್ಟ್ರಕವಿ ಕುವೆಂಪು ಜನ್ಮದಿನ ಕಾರ್ಯಕ್ರಮದಲ್ಲಿ ಕುವೆಂಪು ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು
ರಾಮನಗರದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಾರಾಯಣ ಆಸ್ಪತ್ರೆಯಲ್ಲಿ ನಡೆದ ‌ರಾಷ್ಟ್ರಕವಿ ಕುವೆಂಪು ಜನ್ಮದಿನ ಕಾರ್ಯಕ್ರಮದಲ್ಲಿ ಕುವೆಂಪು ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು   

ರಾಮನಗರ: ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನ ಅಂಗವಾಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಗರದ ನಾರಾಯಣ ಆಸ್ವತ್ರೆ ಆವರಣದಲ್ಲಿ ರಕ್ತದಾನ ಶಿಬಿರ ಜರುಗಿತು. ಸ್ಪಂದನ ಚಾರಿಟೇಬಲ್ ಟ್ರಸ್ಟ್‌ ಅಧ್ಯಕ್ಷ ಮುತ್ತಣ್ಣ ಶಿಬಿರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ‘ಜೀವದಾನ ಮಾಡುವುದಕ್ಕೆ ಸಮನಾದ ರಕ್ತದಾನ ಶ್ರೇಷ್ಠವಾದುದು. ಹಾಗಾಗಿ, ಪ್ರತಿಯೊಬ್ಬರು ರಕ್ತದಾನಕ್ಕೆ ಮುಂದಾಗಬೇಕು. ಕುವೆಂಪು ಜನ್ಮದಿನದಿಂದು ಸಾಹಿತ್ಯ ಪರಿಷತ್ತು ರಕ್ತದಾನ ಶಿಬಿರ ಆಯೋಜಿಸಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಟಿ. ನಾಗೇಶ್ ಮಾತನಾಡಿ, ‘ಕುವೆಂಪು ತಮ್ಮ ಸಾಹಿತ್ಯದಲ್ಲಿ ವೈಚಾರಿಕತೆ ಹಾಗೂ ವೈಜ್ಞಾನಿಕ ಮನೋಭಾವ ತುಂಬುವ ಕೆಲಸ ಮಾಡಿದರು. ಹಲವು ಪ್ರಥಮಗಳಿಗೆ ಬುನಾದಿ ಹಾಕಿದ ಅವರು, ಕನ್ನಡ ಭಾಷೆ ಹಾಗೂ ನಾಡಿನ ಬಗ್ಗೆ ಅಪಾರ ಪ್ರೇಮ ಹೊಂದಿದ್ದರು. ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ಸೈ ಎನಿಸಿಕೊಂಡಿದ್ದ ಅವರು, ರೈತರನ್ನು ನೇಗಿಲಯೋಗಿ ಎಂದು ಕರೆದ ಮಹಾಕವಿ’ ಎಂದು ಬಣ್ಣಿಸಿದರು.

ADVERTISEMENT

ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಪ್ರದಾನ ಕಾರ್ಯದರ್ಶಿ ತಿಮ್ಮೇಗೌಡ, ‘ವಿದ್ಯಾರ್ಥಿಗಳಿಗೆ ಶಾಲಾ–ಕಾಲೇಜು ಹಂತದಲ್ಲೇ ಕುವೆಂಪು ಸಾಹಿತ್ಯವನ್ನು ಪರಿಚಯಿಸುವ ಕೆಲಸವಾಗಬೇಕು. ಅವರ ಆದರ್ಶಗಳನ್ನು ಜೀವನನುದ್ದಕ್ಕೂ ಅಳವಡಿಸಿಕೊಳ್ಳುವ ಮೂಲಕ ವಿಶ್ವಮಾನವರಾಗಿ ಬೆಳೆಯುವಂತೆ ಮಾಡಬೇಕು’ ಎಂದು ಸಲಹೆ ನೀಡಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಟಿ. ದಿನೇಶ್ ಬಿಳಗುಂಬ, ‘ಕುವೆಂಪು ಅವರ ಸಾಹಿತ್ಯವು ಮನುಕುಲವು ವಿಶ್ವಮಾನವ ಪ್ರಜ್ಞೆಯೊಂದಿಗೆ ಸೌಹಾರ್ದವಾಗಿ ಬದುಕುವ ದಾರಿ ತೋರಿಸುತ್ತವೆ’ ಎಂದರು.

ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಕಾರ್ಯದರ್ಶಿ ಎ.ಆರ್. ರವಿಕುಮಾರ್, ಲ್ಯಾಬ್ ಚಂದ್ರೇಗೌಡ, ನಾರಾಯಣ ಆಸ್ವತ್ರೆಯ ಡಾ. ಮಧೂಸೂದನ್ ಮಾತನಾಡಿದರು. ಕಸಾಪದ ರಾಜೇಶ್ ಕವಣಾಪುರ, ಎನ್. ಕಿರಣ್, ಡೈರಿ ವೆಂಕಟೇಶ್, ಮಹಾದೇವ್ ಲಕ್ಕಸಂದ್ರ, ದೇವರಾಜು ಕ್ಯಾಸಾಪುರ, ಬಿ.ಟಿ. ರಾಜೇಂದ್ರ, ಪ್ರಕಾಶ್, ನೇಗಿಲಯೋಗಿ ಜಿಲ್ಲಾಧ್ಯಕ್ಷ ಪಟೇಲ್ ರಾಜು, ಶಿವು ಗೌಡ, ಕಿರಣ್ ಹಾಗೂ ಇತರರು ಇದ್ದರು. ರಕ್ತದಾನ ಶಿಬಿರದಲ್ಲಿ 54 ಯುನಿಟ್ ರಕ್ತ ಸಂಗ್ರಹವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.