ADVERTISEMENT

ಅಪಾತ್ರರ ಕೈಗೆ ಅಧಿಕಾರ ಸಿಕ್ಕರೆ ಅಧಃಪತನ: ಮಾಜಿ ಶಾಸಕ ಸಿ.ಎಂ. ಲಿಂಗಪ್ಪ

ಕುವೆಂಪು ಜಯಂತ್ಯುತ್ಸವದಲ್ಲಿ ಮಾಜಿ ಶಾಸಕ ಸಿ.ಎಂ. ಲಿಂಗಪ್ಪ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 2:59 IST
Last Updated 1 ಜನವರಿ 2026, 2:59 IST
<div class="paragraphs"><p>ಬಿಡದಿ&nbsp;ಹೋಬಳಿಯ ಭೈರಮಂಗಲದಲ್ಲಿರುವ ವೃಷಭಾವತಿ ಪ್ರೌಢಶಾಲೆಯಲ್ಲಿ ಬಿಡದಿಯ ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಟ್ರಸ್ಟ್ ಹಮ್ಮಿಕೊಂಡಿದ್ದ ಕುವೆಂಪು ಜಯಂತ್ಯುತ್ಸವವನ್ನು ಮಾಜಿ ಶಾಸಕ ಸಿ.ಎಂ. ಲಿಂಗಪ್ಪ ಉದ್ಘಾಟಿಸಿದರು.&nbsp;</p></div>

ಬಿಡದಿ ಹೋಬಳಿಯ ಭೈರಮಂಗಲದಲ್ಲಿರುವ ವೃಷಭಾವತಿ ಪ್ರೌಢಶಾಲೆಯಲ್ಲಿ ಬಿಡದಿಯ ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಟ್ರಸ್ಟ್ ಹಮ್ಮಿಕೊಂಡಿದ್ದ ಕುವೆಂಪು ಜಯಂತ್ಯುತ್ಸವವನ್ನು ಮಾಜಿ ಶಾಸಕ ಸಿ.ಎಂ. ಲಿಂಗಪ್ಪ ಉದ್ಘಾಟಿಸಿದರು. 

   

ಬಿಡದಿ (ರಾಮನಗರ): ‘ಅಪಾತ್ರರ ಕೈಗೆ ಅಧಿಕಾರ ಸಿಕ್ಕಿದರೆ ವ್ಯವಸ್ಥೆಯೇ ಅಧಃಪತನದ ಹಾದಿ ಹಿಡಿಯುವುದು. ನಾಡಿನ ಉತ್ತಮ ಭವಿಷ್ಯಕ್ಕಾಗಿ ಅಧಿಕಾರವನ್ನು ಬಳಸಬೇಕೇ ಹೊರತು, ಇರುವ ವ್ಯವಸ್ಥೆಯನ್ನು ಅಧ್ವಾನಗೊಳಿಸಬಾರದು’ ಎಂದು ಮಾಜಿ ಶಾಸಕ ಹಾಗೂ ಜ್ಞಾನ ವಿಕಾಸ್ ವಿದ್ಯಾಸಂಸ್ಥೆ ಅಧ್ಯಕ್ಷ ಸಿ.ಎಂ. ಲಿಂಗಪ್ಪ ಅಭಿಪ್ರಾಯಪಟ್ಟರು.

ಹೋಬಳಿಯ ಭೈರಮಂಗಲದಲ್ಲಿರುವ ವೃಷಭಾವತಿ ಪ್ರೌಢಶಾಲೆಯಲ್ಲಿ ಬಿಡದಿಯ ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಟ್ರಸ್ಟ್ ಇತ್ತೀಚೆಗೆ ಹಮ್ಮಿಕೊಂಡಿದ್ದ ಕುವೆಂಪು ಜಯಂತ್ಯುತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಇಂದಿನ ಶಿಕ್ಷಣ ವ್ಯವಸ್ಥೆಯು ಹದಗೆಟ್ಟಿದೆ. ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರದ ಜೊತೆಗೆ ಜ್ಞಾನ ಸಿಗಬೇಕು. ಅದಕ್ಕೆ ಪೂರಕ ವಾತಾವರಣ ಸೃಷ್ಟಿಸಬೇಕು. ಇಲ್ಲದಿದ್ದರೆ, ಶಿಕ್ಷಣದ ಆಶಯವೇ ಹಾದಿ ತಪ್ಪಲಿದೆ’ ಎಂದರು.

ADVERTISEMENT

‘ವೈಚಾರಿಕ ಪ್ರಜ್ಞೆಯನ್ನು ಬಿತ್ತಿದ ಕುವೆಂಪು ಅವರು, ಜಾತಿ ಮತ್ತು ಧರ್ಮದಲ್ಲಿ ಬಂಧಿಯಾಗದೆ ವಿಶ್ವ ಮಾನವರಾಗುವಂತೆ ಕರೆ ನೀಡಿದರು. ತಮ್ಮ ಸಾಹಿತ್ಯದುದ್ದಕ್ಕೂ ಅದನ್ನು ಸಾರಿದ ಅವರು, ಈ ನಾಡಿನ ಅಸ್ಮಿತೆಯಾದ ನಾಡಗೀತೆಯನ್ನು ಬರೆದರು. ಅಂತಹ ಮಹನೀಯರ ಸಾಹಿತ್ಯವನ್ನು ಯುವಜನರು ಓದಿ, ಅಲ್ಲಿನ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಾನಪದ ವಿದ್ವಾಂಸ ಡಾ. ಎಂ. ಬೈರೇಗೌಡ, ‘ಕುವೆಂಪು ಅವರು ಸ್ಪರ್ಶಮಣಿ ಇದ್ದಂತೆ. ಅವರ ಸಂಪರ್ಕಕ್ಕೆ ಬಂದವರು ಸರ್ವ ಜನಾಂಗದ ಸ್ವತ್ತಾಗುವುದರಲ್ಲಿ ಸಂದೇಹವಿಲ್ಲ. ನಾಡಿನ ನರನಾಡಿಗಳಲ್ಲಿ ಹರಿದಾಡುವ ರಸದೀಪ್ತಿಯಾಗಿ ಅವರ ಆಲೋಚನಾ ಕ್ರಮಗಳು ಜೀವ ತಳೆದಿವೆ’ ಎಂದರು.

‘ಕುವೆಂಪು ಅವರ ಸಾಹಿತ್ಯದಲ್ಲಿ ಭಗವಾನ್ ಬುದ್ಧನ ಶಾಂತಿ ತತ್ವವಿದೆ. ಪಂಪನ ಮನುಷ್ಯ ಜಾತಿ ತಾನೊಂದೆವಲಂ ವಿಚಾರಧಾರೆಯ ಸೊಗಸಿದೆ. ಬಸವಣ್ಣನವರ ಅನುಭವ ಮಂಟಪದ ಪರಿಕಲ್ಪನೆ ಇದೆ. ದಾಸವರೇಣ್ಯರ ಮನೋಸ್ಥೈರ್ಯ, ಯೇಸುವಿನ ಭ್ರಾತೃತ್ವ, ಪೈಗಂಬರರ ಶಾಂತಿ ತತ್ವದ ‍ಪರಿಕಲ್ಪನೆಗಳೂ ಮೈದಳೆದಿವೆ’ ಎಂದು ಬಣ್ಣಿಸಿದರು.

‘ಗುಡಿ, ಚರ್ಚು, ಮಸೀದಿಗಳ ಬಿಟ್ಟು ಹೊರಬನ್ನಿ ಎಂದು ಕರೆ ನೀಡಿದ್ದ ಕುವೆಂಪು ಅವರನ್ನು, ಆ ಕಾಲಘಟ್ಟದಲ್ಲಿದ್ದ ಮತ್ತೊಬ್ಬ ಸಾಹಿತಿ ಶಿವರಾಮ ಕಾರಂತರು ಕುವೆಂಪು ಅವರನ್ನು ಕವಿ ಋಷಿ ಎಂದು ಮನಸಾರೆ ಹೊಗಳುತ್ತಾರೆ. ದ.ರಾ. ಬೇಂದ್ರೆ ಜಗದ ಕವಿ, ಯುಗದಕವಿ ಎಂದು ವರ್ಣಿಸಿದರು’ ಎಂದರು.

‘ಕುವೆಂಪು ಅವರು ನೇಗಿಲಯೋಗಿ ಬಗ್ಗೆ ಬರೆದ ಗೀತೆ ರೈತಗೀತೆಯಾಗಿ ಇಂದಿಗೂ ಜನಮನರದಲ್ಲಿ ಅನುರಣಿಸುತ್ತಿದೆ. ಅವರ ಸಾಹಿತ್ಯದ ಎಲ್ಲ ಒಳತೋಟಿಗಳು ನಮಗೆ ಅರಿವಾಗಬೇಕಾದರೆ, ಅವರ ನೆನಪಿನ ದೋಣಿಯಲ್ಲಿ ಕೃತಿಯನ್ನು ಸಮಗ್ರವಾಗಿ ಓದಿಕೊಳ್ಳಬೇಕು. ಆಗ ಮಾತ್ರ ಕುವೆಂಪು ಅವರು ನಮಗೆ ಮತ್ತಷ್ಟು ಹತ್ತಿರವಾಗುತ್ತಾರೆ’ ಎಂದು ಹೇಳಿದರು.

ಬೈರಮಂಗಲ ಗ್ರಾಮ ಪಂಚಾಯತಿ ಅಧ್ಯಕ್ಷೆ ಉಮಾ ಅವರು ಟ್ರಸ್ಟ್ ಹೊರತಂದಿರುವ ದಿನದರ್ಶಿ ಬಿಡುಗಡೆ ಮಾಡಿದರು. ವೃಷಭಾವತಿ ಗ್ರಾಮಾಂತರ ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ವಿಷಕಂಠಪ್ಪ, ಖಜಾಂಚಿ ಬಿ.ಆರ್. ನಾಗರಾಜು, ಮುಖ್ಯ ಶಿಕ್ಷಕ ಟಿ.ಎಂ. ಪ್ರಕಾಶ್, ಟ್ರಸ್ಟ್ ಅಧ್ಯಕ್ಷ ಎಸ್. ಲೋಕೇಶ್, ಪದಾಧಿಕಾರಿಗಳಾದ ಜಗದೀಶ್, ರವಿರಾಜ್, ಪಾರ್ಥ, ಬಸವರಾಜು, ಷಣ್ಮುಗ , ವೆಂಕಟೇಶ್, ರಾಧಾಕೃಷ್ಣ, ಪ್ರದೀಪ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.