ADVERTISEMENT

ಟೊಯೊಟಾ ಕಾರ್ಖಾನೆಗೆ ಭೇಟಿ: ಅಮಾನತು ಹಿಂಪಡೆಯಲು ಕಾರ್ಮಿಕ ಸಚಿವರ ಮನವಿ

ಆಡಳಿತ ಮಂಡಳಿ, ಕಾರ್ಮಿಕರೊಂದಿಗೆ ಚರ್ಚೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2021, 14:41 IST
Last Updated 4 ಫೆಬ್ರುವರಿ 2021, 14:41 IST
ಟೊಯೊಟಾ ಕಾರ್ಖಾನೆಗೆ ಗುರುವಾರ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಭೇಟಿ ನೀಡಿದ್ದರು
ಟೊಯೊಟಾ ಕಾರ್ಖಾನೆಗೆ ಗುರುವಾರ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಭೇಟಿ ನೀಡಿದ್ದರು   

ಬಿಡದಿ: ಟೊಯೊಟಾ ಕಿರ್ಲೋಸ್ಕರ್ ಕಾರ್ಖಾನೆಯಲ್ಲಿ ಸೇವೆಯಿಂದ ಅಮಾನತುಗೊಂಡ 70 ಕಾರ್ಮಿಕರನ್ನು ಮರಳಿ ಕೆಲಸಕ್ಕೆ ತೆಗೆದುಕೊಳ್ಳುವಂತೆ ಆಡಳಿತ ಮಂಡಳಿಗೆ ಮನವಿ ಮಾಡಲಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದರು.

ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿ ಇರುವ ಟೊಯೊಟಾ ಕಾರ್ಖಾನೆಗೆ ಗುರುವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಕಾರ್ಖಾನೆಯ ಆಡಳಿತ ಮಂಡಳಿ, ಕಾರ್ಮಿಕ ಸಂಘದ ಪ್ರತಿನಿಧಿಗಳ ಜೊತೆ ಸಭೆ ನಡೆಸಿದ ಬಳಿಕ ಅವರು ಮಾತನಾಡಿದರು. ‘ಕೈಗಾರಿಕೆಗಳಿಗೆ ಪರವಾನಗಿ ನೀಡುವ ಸಂದರ್ಭದಲ್ಲಿಯೇ ತನ್ನ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವನ್ನು ನೀಡಲಾಗಿರುತ್ತದೆ. ಹೀಗಾಗಿ ಅವರು ತಮ್ಮ ನೌಕರರನ್ನು ವಿಚಾರಣೆ ಮಾಡಲು, ಅಮಾನತು ಮಾಡಲು ಅಧಿಕಾರ ಇದೆ. ಆದರೆ ಸೌಹಾರ್ಹಯುತವಾಗಿ ಸಮಸ್ಯೆ ಬಗೆಹರಿಸುವ ದೃಷ್ಟಿಯಿಂದ ಈ ಸಲಹೆ ನೀಡಿದ್ದು, ವಿಚಾರಣೆ ಕೈಬಿಟ್ಟು ಎಲ್ಲ ಕಾರ್ಮಿಕರಿಗೂ ಕೆಲಸಕ್ಕೆ ಅವಕಾಶ ನೀಡುವಂತೆ ಕೋರಿದ್ದೇವೆ’ ಎಂದರು.

ಮುಚ್ಚಳಿಕೆ ಪತ್ರಕ್ಕೆ ವಿರೋಧ: ‘ಕಾರ್ಖಾನೆ ಪ್ರವೇಶಿಸುವ ಮುನ್ನ ಮುಚ್ಚಳಿಕೆ ಪತ್ರ ಬರೆದುಕೊಡಬೇಕು ಎಂದು ಷರತ್ತು ವಿಧಿಸಿರುವುದು ಸರಿಯಲ್ಲ. ನೌಕರರು ಕೆಲಸಕ್ಕೆ ಸೇರುವಾಗಲೇ ಅಂಡರ್‌ಟೇಕಿಂಗ್ ಬರೆದುಕೊಟ್ಟಿರುತ್ತಾರೆ. ಹೀಗಾಗಿ ಪುನಃ ಪಡೆಯಲು ಕಾನೂನಿನಲ್ಲಿ ಅವಕಾಶ ಇಲ್ಲ. ಇದನ್ನು ವಾಪಸ್‌ ಪಡೆಯುವಂತೆ ಸೂಚಿಸಿದ್ದು, ಕಾರ್ಖಾನೆಯವರು ಒಂದು ದಿನದ ಕಾಲಾವಕಾಶ ಕೋರಿದ್ದಾರೆ’ ಎಂದರು.

ADVERTISEMENT

‘ಕಾರ್ಮಿಕರು 86 ದಿನದಿಂದ ಹೋರಾಟ ನಡೆಸುತ್ತಿದ್ದಾರೆ. ಇದನ್ನು ಪರಿಹರಿಸಲು ಒಟ್ಟು 12 ಸಭೆಗಳನ್ನು ಈಗಾಗಲೇ ನಡೆಸಲಾಗಿದೆ. ಈ ದಿನದ ಸಭೆಯ ವಿವರ ಹಾಗೂ ಕಾರ್ಮಿಕರ ಸಮಸ್ಯೆಗಳನ್ನು ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು’ ಎಂದರು.

‘ಇಂದು ಒಳ್ಳೆಯ ಕಾರ್ಖಾನೆಯಲ್ಲಿ ಉದ್ಯೋಗ ಪಡೆದುಕೊಳ್ಳುವುದು ಕಷ್ಟಕರವಾಗಿರುತ್ತದೆ. ಉದ್ಯೋಗವನ್ನು ಉಳಿಸಿಕೊಳ್ಳಬೇಕು. ಯೂನಿಯನ್‌ ಮುಖಂಡರೂ ಈ ನಿಟ್ಟಿನಲ್ಲಿ ಆಲೋಚಿಸಬೇಕು’ ಎಂದು ಸಚಿವರು ಸಲಹೆ ನೀಡಿದರು.

‘ಕಾರ್ಮಿಕ ಇಲಾಖೆ ಇರುವುದು ಕಾರ್ಮಿಕರ ರಕ್ಷಣೆಗಾಗಿ. ಕಾರ್ಮಿಕರ ಹಕ್ಕುಗಳಿಗೆ ತೊಂದರೆ ಬಂದರೆ ಅವುಗಳನ್ನು ಪರಿಹರಿಸಲು ಪ್ರಯತ್ನಿಸಲಾಗುವುದು. ಮೈಸೂರಿನಲ್ಲಿ ಮುಚ್ಚಲಾದಂತಹ ರೀಡ್ ಎಂಡ್ ಟೈಲರ್ ಕಾರ್ಖನೆ ಹಾಗೂ ಏಷಿಯನ್ ಪ್ಯಾಂಟ್ಸ್ ಕಾರ್ಖನೆಯನ್ನು ಚರ್ಚೆ ನಡೆಸಿ ಪುನಾರಾರಂಭ ಮಾಡಲಾಗಿದೆ. ಅದೇ ರೀತಿ ಇಲ್ಲಿಯ ಸಮಸ್ಯೆಯು ಪರಿಹಾರವಾಗಿ ಸುಖಾಂತ್ಯವಾಗಲಿ’ ಎಂದು ಆಶಿಸಿದರು.

ಶಾಸಕ ಎ. ಮಂಜುನಾಥ, ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಿರೀಶ್ ಮತ್ತಿತರರು ಇದ್ದರು.

ಹೋರಾಟಕ್ಕೆ ತಕ್ಕ ಫಲ; ಮಂಜುನಾಥ್‌
‘ಕಾರ್ಮಿಕ ಸಚಿವರ ನೇತೃತ್ವದಲ್ಲಿ ಇಂದು ಸಭೆ ನಡೆದಿದ್ದು, ಕಾರ್ಮಿಕರ 86 ದಿನಗಳ ಹೋರಾಟಕ್ಕೆ ಫಲ ಸಿಗಲಿದೆ’ ಎಂದು ಶಾಸಕ ಎ.ಮಂಜುನಾಥ್‌ ಹೇಳಿದರು.

ಮುಷ್ಕರ ನಿರತ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಅವರು ‘ಕೆಲಸಕ್ಕೆ ಮರಳಲು ಮುಚ್ಚಳಿಕೆ ಬರೆದುಕೊಡಬೇಕು ಎಂಬ ಆಡಳಿತ ಮಂಡಳಿಯ ವಾದವನ್ನು ಸರ್ಕಾರ ಒಪ್ಪಿಲ್ಲ. ಇದನ್ನು ಹಿಂಪಡೆಯುವಂತೆ ಸಚಿವರು ಸೂಚಿಸಿದ್ದಾರೆ. ಆಡಳಿತ ಮಂಡಳಿ ಕೆಲವು ವಿಚಾರಗಳಲ್ಲಿ ತಮ್ಮ ನಿಲುವು ಬದಲಾಯಿಸದಿದ್ದರೆ ನಮ್ಮ ನಿಲುವು ಸಹ ಬದಲಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಲಾಗಿತ್ತು’ ಎಂದರು.

‘ಟೊಯೊಟಾ ಕಾರ್ಮಿಕರ ಸಮಸ್ಯೆ ಬಗೆಹರಿಸಲು ಮೊದಲ ದಿನದಂದಲೂ ಶ್ರಮಿಸಿದ್ದೇನೆ. ಇದರ ರಾಜಕೀಯ ಲಾಭ ಪಡೆಯುವ ಉದ್ದೇಶ ಇಲ್ಲ. ಕಾರ್ಮಿಕ ಹೋರಾಟದ ಕುರಿತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸೇರಿದಂತೆ ಹಲವರ ಅಭಿಪ್ರಾಯವನ್ನು ಸರ್ಕಾರ ಪಡೆದಿದ್ದು, ಸೂಕ್ತ ಕ್ರಮ ಕೈಗೊಳ್ಳುತ್ತಿದೆ. ಶುಕ್ರವಾರ ಆಡಳಿತ ಮಂಡಳಿ ತನ್ನ ಅಭಿಪ್ರಾಯ ವ್ಯಕ್ತಪಡಿಸಲಿದ್ದು, ಎಲ್ಲವೂ ಸುಖಾಂತ್ಯವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಮಸ್ಯೆ ಬಗೆಹರಿದಲ್ಲಿ ಮತ್ತೆ ಕೆಲಸಕ್ಕೆ: ಪ್ರಸನ್ನ
‘ಕಂಪನಿಯು ನೌಕರರ ಅಮಾನತು ಆದೇಶ ಹಿಂಪಡೆದು, ನಮ್ಮ ಬೇಡಿಕೆಗೆ ಸಮ್ಮತಿಸಿದಲ್ಲಿ ಮತ್ತೆ ಕೆಲಸಕ್ಕೆ ಹಾಜರಾಗುತ್ತೇವೆ’ ಎಂದು ಟಿಕೆಎಂ ಕಾರ್ಮಿಕ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್ ಚಕ್ಕೆರೆ ತಿಳಿಸಿದರು.

ಪತ್ರಕರ್ತರ ಜೊತೆ ಮಾತನಾಡಿದ ಅವರು ‘ಕಂಪನಿಯಲ್ಲಿನ ಕಾರ್ಮಿಕ ವಿರೋಧಿ ನಿಲುವುಗಳ ಕುರಿತು ಕಾರ್ಮಿಕ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದೆವು. ಅದರಂತೆ ಸಚಿವರು ಸೂಚನೆ ನೀಡಿದ್ದು, ಆಡಳಿತ ಮಂಡಳಿ ಒಂದು ದಿನದ ಕಾಲಾವಕಾಶ ಕೋರಿದೆ. ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುವ ವಿಶ್ವಾಸ ಇದೆ. ಆಡಳಿತ ಮಂಡಳಿ ತೀರ್ಮಾನ ನೋಡಿಕೊಂಡು ಮುಂದೆಯೂ ಕಾರ್ಮಿಕರ ಪರ ನಿಲ್ಲುವುದಾಗಿ ಸಚಿವರು ಭರವಸೆ ನೀಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.