ADVERTISEMENT

ಹಾರೋಹಳ್ಳಿ: ಕೃಷ್ಣಭೋವಿದೊಡ್ಡಿಯಲ್ಲಿ ಸೌಲಭ್ಯಗಳೇ ಮರೀಚಿಕೆ!

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 5:54 IST
Last Updated 21 ಫೆಬ್ರುವರಿ 2026, 5:54 IST
   

ಹಾರೋಹಳ್ಳಿ: ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ತಾಲ್ಲೂಕಿನ ಮರಳವಾಡಿ ಹೋಬಳಿ ಕೃಷ್ಣಭೋವಿದೊಡ್ಡಿ ರಸ್ತೆ ಸಂಪರ್ಕ ಸೇರಿದಂತೆ ಹಲವು ಮೂಲಸೌಕರ್ಯಗಳಿಂದ ವಂಚಿತವಾಗಿದೆ.

ಇದುವರೆಗೂ ರಸ್ತೆ, ಚರಂಡಿ, ಬೀದಿದೀಪ, ಕುಡಿಯುವ ನೀರು ಸೇರಿದಂತೆ ಕನಿಷ್ಠ ಮೂಲಸೌಲಭ್ಯ ಇಲ್ಲಿ ಇಲ್ಲ!. ಸುಮಾರು 80ಕ್ಕೂ ಹೆಚ್ಚು ಕುಟುಂಬಗಳ 500ಕ್ಕೂ ಹೆಚ್ಚು ಜನ ಇಲ್ಲಿ ವಾಸವಿದ್ದಾರೆ. ಆದರೆ, ಈ ಗ್ರಾಮದ ಯಾವ ಸಮಸ್ಯೆಯನ್ನೂ ಜನಪ್ರತಿನಿಧಿಗಳು, ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲ. 

ಗ್ರಾಮಕ್ಕೆ ಹೋಗುವ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ. ಇದುವರೆಗೂ ರಸ್ತೆ ನಿರ್ಮಾಣ ಮಾಡಿಲ್ಲ. ಮಳೆಗಾಲದಲ್ಲಿ ರಸ್ತೆ ಮೇಲೆ ನೀರು ತುಂಬಿ ಹರಿಯುವುದರಿಂದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.

ADVERTISEMENT

ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಇಲ್ಲ. ಗ್ರಾಮಸ್ಥರು ಹಲವು ಬಾರಿ ಚರಂಡಿ ಸಮಸ್ಯೆಯನ್ನು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದರೂ ಪರಿಹಾರ ಸಿಕ್ಕಿಲ್ಲ. ಚರಂಡಿ ನೀರು ನಿಂತ ಕಡೆಯೇ ನಿಂತು ದುರ್ವಾಸನೆ
ಬೀರುತ್ತಿದೆ.

ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಪಿಡಿಒ ಇಚ್ಚಾಶಕ್ತಿ ಕೊರತೆಯಿಂದ ಗ್ರಾಮದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚು ಉಲ್ಬಣಗೊಳ್ಳುತ್ತಿದೆ ಎನ್ನುತ್ತಾರೆ ಸ್ಥಳೀಯರು.

ಸ್ವಚ್ಛತೆ ಇಲ್ಲ: ಗ್ರಾಮದಲ್ಲಿ ಸೂಕ್ತ ರೀತಿಯ ಚರಂಡಿ ವ್ಯವಸ್ಥೆ ಇಲ್ಲದೆ ಚರಂಡಿ ನೀರು ಎಲ್ಲೆಂದರಲ್ಲಿ ನಿಂತು ಗಬ್ಬು ವಾಸನೆ ಬೀರುತ್ತಿದೆ. ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.

ರಾಮನಗರ ವಿಧಾನಸಭಾ ಕ್ಷೇತ್ರ ಘಟಾನುಘಟಿಗಳು ಆಳ್ವಿಕೆ ನಡೆಸಿದ ಕ್ಷೇತ್ರ. ಇಬ್ಬರು ಮುಖ್ಯಮಂತ್ರಿಗಳನ್ನು ನಾಡಿಗೆ ನೀಡಿದ ಕ್ಷೇತ್ರ. ಎಚ್.ಡಿ ದೇವೇಗೌಡ, ಎಚ್.ಡಿ ಕುಮಾರಸ್ವಾಮಿ, ಪಿಜಿಆರ್ ಸಿಂಧ್ಯಾ, ಅನಿತಾ ಕುಮಾರಸ್ವಾಮಿ ಇದೀಗ ಹಾಲಿ ಶಾಸಕರಾಗಿರುವ ಇಕ್ಬಾಲ್ ಹುಸೇನ್ ಅವರು ಆಡಳಿತ ನಡೆಸಿದ ಕ್ಷೇತ್ರವಿದು. ಇಲ್ಲಿನ ಜನರ ಬದುಕು ಮಾತ್ರ ಬದಲಾಗಲೇ ಇಲ್ಲ. ಗ್ರಾಮದಲ್ಲಿನ ಸಮಸ್ಯೆ ಬಗ್ಗೆ ಗ್ರಾಮಸ್ಥರು ಕಂಡಕಂಡವರಿಗೆ ಮನವಿ ನೀಡಿದ್ದಾರೆ. ಆ ಮನವಿಗಳು ಇಂದಿಗೂ ಮನವಿಗಳಾಗಿಯೇ ಉಳಿದಿವೆ. ಗ್ರಾಮಸ್ಥರಿಗೆ ಯಾವುದೇ ರೀತಿ ಸೌಲಭ್ಯ ಮಾತ್ರ ದಕ್ಕಿಲ್ಲ. ಇನ್ನಾದರೂ ಕ್ಷೇತ್ರದ ಶಾಸಕರು ಇತ್ತ ಗಮನಹರಿಸಿ ಮೂಲ ಸೌಲಭ್ಯ ಒದಗಿಸುವ ಕೆಲಸ ಮಾಡಬೇಕಿದೆ ಎನ್ನುತ್ತಾರೆ ಸ್ಥಳೀಯರು.

ನೀರಿಗಾಗಿ ಮಹಿಳೆಯರ ಜಗಳ

ಮಹಿಳೆಯರು ಹನಿ ನೀರಿಗಾಗಿ ಇಂದಿಗೂ ಪರದಾಡಬೇಕಾಗಿದೆ. ಖಾಸಗಿ ತೋಟ ಹಾಗೂ ಇನ್ನಿತರೆ ಪ್ರದೇಶಗಳಿಗೆ ಹೋಗಿ ಕುಡಿಯುವ ನೀರು ತರಬೇಕಿದೆ. ಒಂದೇ ನೆಲ್ಲಿಯಲ್ಲಿ ನೀರನ್ನು ಹಿಡಿದುಕೊಳ್ಳಬೇಕಾದರೆ ಮಹಿಳೆಯರ ನಡುವೆ ಜಗಳ ಅನಿವಾರ್ಯವಾಗಿದೆ. ಶುದ್ಧ ಕುಡಿಯುವ ನೀರಂತೂ ಇಲ್ಲಿನ ಜನತೆಗೆ ಮರೀಚಿಕೆಯಾಗಿಯೇ ಉಳಿದಿದೆ.

ಸಾರಿಗೆ ಅವ್ಯವಸ್ಥೆ

ಗ್ರಾಮಕ್ಕೆ ಸೂಕ್ತ ರೀತಿ ಸಾರಿಗೆ ವ್ಯವಸ್ಥೆ ಇಲ್ಲ. ರಸ್ತೆ ಹದಗೆಟ್ಟಿರುವುದರಿಂದ ಬಸ್‌ಗಳು ಇದುವರೆಗೂ ಗ್ರಾಮದಲ್ಲಿ ಸಂಚಾರ ಮಾಡಿಲ್ಲ. ನಾನಾ ಕೆಲಸ ಕಾರ್ಯಗಳಿಗೆ ವಿವಿಧ ಕಡೆ ಹೋಗುವವರು ಸಾರಿಗೆ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ.

ಶೌಚಾಯಲ ಇಲ್ಲ

ಜಿಲ್ಲೆಯನ್ನು ಬಯಲು ಮುಕ್ತ ಜಿಲ್ಲೆಯನ್ನಾಗಿ ಮಾಡಿಬಿಟ್ಟಿದ್ದೇವೆ ಎಂದು ಅಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿ ಬೀಗುತ್ತಿದ್ದಾರೆ. ಆದರೆ, ಈ ಗ್ರಾಮದಲ್ಲಿ ಬಹುತೇಕ ಹಲವು ಮಂದಿ ಶೌಚಕ್ಕಾಗಿ ಬಯಲನ್ನೇ ಅವಲಂಬಿಸಿದ್ದಾರೆ. ಕೇವಲ ಪ್ರಬಲ ವ್ಯಕ್ತಿಗಳಷ್ಟೇ ಇಲ್ಲಿ ಶೌಚಾಲಯ ಬಳಸುತ್ತಿದ್ದಾರೆ. ಇಲ್ಲಿನ ವ್ಯವಸ್ಥೆ ತಾಲ್ಲೂಕು  ಆಡಳಿತವನ್ನು ಅಣಕಿಸುವಂತಿದೆ.

ಕೃಷ್ಣಭೋವಿದೊಡ್ಡಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಮಸ್ಯೆಗಳ ಬಗೆಹರಿಸಲಾಗುವುದು.
ಅಪೂರ್ವ, ಇಒ., ಹಾರೋಹಳ್ಳಿ ತಾಲ್ಲೂಕು
ಗ್ರಾಮದಲ್ಲಿ ಬಹುತೇಕ ಹಿಂದುಳಿದ ವರ್ಗದ ಜನರು ವಾಸವಾಗಿದ್ದಾರೆ. ಇಲ್ಲಿ ಮೂಲ ಸೌಲಭ್ಯಗಳೇ ಮರೀಚಿಕೆಯಾಗಿವೆ.
ರಾಮಕೃಷ್ಣ, ಕೃಷ್ಣಭೋವಿದೊಡ್ಡಿ ಗ್ರಾಮಸ್ಥ
ಕಾಂಕ್ರೀಟ್ ರಸ್ತೆಗಾಗಿ ಮಂಜೂರಾದ ಕಾಮಗಾರಿ ನಡೆಸದೆ ಕಾಡುದಾರಿಯಲ್ಲಿ ಕಾಮಗಾರಿ ನಡೆಸುತ್ತಿದ್ದಾರೆ.
ಗೋವಿಂದಯ್ಯ, ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.