
ಮಾಗಡಿ: ಕೆಂಪಾಪುರದಲ್ಲಿ ಹಿರಿಯ ಕೆಂಪೇಗೌಡರ ಐಕ್ಯಸ್ಥಳ ಅಭಿವೃದ್ಧಿ ಹೆಸರಿನಲ್ಲಿ ರೈತರ ಹೆಚ್ಚುವರಿ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಬೇಕೆಂದು ನೂರಾರು ರೈತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ತಿಪ್ಪಸಂದ್ರ ಹೋಬಳಿ ಕೆಂಪಾಪುರದಲ್ಲಿ ನಾಡಪ್ರಭು ಹಿರಿಯ ಕೆಂಪೇಗೌಡರ ಐಕ್ಯಸ್ಥಳ ಪತ್ತೆಯಾಗಿ 15 ವರ್ಷ ಆಗಿದೆ. ಈ ಸ್ಥಳವನ್ನು ವಿಶ್ವ ಸ್ಮಾರಕವನ್ನಾಗಿ ಅಭಿವೃದ್ಧಿಪಡಿಸಲು ಸರ್ಕಾರ ಮುಂದಾಗಿರುವುದು ಗ್ರಾಮಸ್ಥರಿಗೆ ಸಂತೋಷ ಮತ್ತು ಹೆಮ್ಮೆಯ ವಿಷಯವಾಗಿದೆ. ಈ ಯೋಜನೆಗಾಗಿ ನೀಲಿ ನಕ್ಷೆಯು ಈ ಹಿಂದೆಯೇ ತಯಾರಾಗಿದೆ.
ಗ್ರಾಮಸ್ಥರು ಮತ್ತು ರೈತರು ಒಮ್ಮತದಿಂದ ಈಗಾಗಲೇ 10 ಎಕರೆಗೂ ಹೆಚ್ಚು ಭೂಮಿ ಸರ್ಕಾರಕ್ಕೆ ನೀಡಲಾಗಿದೆ. ಭೂಸ್ವಾಧೀನಕ್ಕೆ ಒಳಗಾದ ರೈತರಿಗೆ ಪುನರ್ವಸತಿಗಾಗಿ ಜಾನಿಗೆರೆ ಗ್ರಾಮದಲ್ಲಿ ಗೋಮಾಳ ಜಾಗ ಗುರುತಿಸಲಾಗಿದೆ. ಅಲ್ಲಿ ಮೂಲ ಸೌಕರ್ಯ ಅಥವಾ ಹಕ್ಕುಪತ್ರ ನೀಡದೆ ಈಗ ಹೆಚ್ಚುವರಿಯಾಗಿ ಇನ್ನೂ 10 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಭೂದಾಖಲೆಗಳ ಸಹಾಯಕ ನಿರ್ದೇಶಕ ನೋಟಿಸ್ ಜಾರಿ ಮಾಡಿ ಸಹಿ ಹಾಕುವಂತೆ ಒತ್ತಾಯಿಸುತ್ತಿದ್ದಾರೆ.
ರೈತರು ಈ ನೋಟಿಸ್ ಅನ್ನು ತಿರಸ್ಕರಿಸಿದ್ದಾರೆ. ‘ನಮಗೆ ಈಗ ಉಳಿದಿರುವುದು ಕೇವಲ ತುಂಡು ಜಮೀನು. ಇದನ್ನು ಕಳೆದುಕೊಂಡರೆ ಜೀವನಾಧಾರ ದನಕರು, ಮಕ್ಕಳು, ಮನೆತನದ ನಿರ್ವಹಣೆ ಹೇಗೆ ಸಾಧ್ಯ ಎಂಬ ಆತಂಕದಲ್ಲಿದ್ದೇವೆ' ಎಂದು ರೈತರು ಅಳಲು ತೋಡಿಕೊಂಡರು.
ರೈತ ಮುಖಂಡರಾದ ಹನುಮಂತಯ್ಯ, ಗೋವಿಂದಯ್ಯ, ದಿನೇಶ್, ಮಲ್ಲಪ್ಪ, ರಂಗಸ್ವಾಮಯ್ಯ, ಕೆ.ನರಸಿಂಹ, ಗಂಗನರಸಯ್ಯ, ಪಾಪಯ್ಯ, ಕೆ.ಎಚ್.ಹನುಮಯ್ಯ, ಸಾವಿತ್ರಮ್ಮ, ಶಾರದಮ್ಮ, ಗೌರಮ್ಮ, ಬೋರಮ್ಮ, ಜಯಮ್ಮ, ಗಂಗಮ್ಮ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.