
ಮಾಗಡಿ ತಾಲ್ಲೂಕಿನ ಚಕ್ರಬಾವಿ ಗ್ರಾಮದ ನರಸಿಂಹಮೂರ್ತಿರವರ ತೋಟದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಹೆಣ್ಣು ಚಿರತೆ ಸೆರೆಯಾಗಿವುದು.
ಮಾಗಡಿ: ತಾಲ್ಲೂಕಿನ ಚಕ್ರಭಾವಿ ಮುಖ್ಯರಸ್ತೆಯಲ್ಲಿ ರಾತ್ರಿ ತಾಯಿ ಚಿರತೆ ಜತೆ ಕಾಣಿಸಿಕೊಂಡ ಮೂರು ಚಿರತೆ ಮರಿಗಳ ಪೈಕಿ ಒಂದು ಚಿರತೆ ಮರಿ ಗುರುವಾರ ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದೆ. ಇನ್ನು ಮೂರು ಚಿರತೆ ಸೆರೆಯಾಗಬೇಕಿದೆ.
ತಾಲ್ಲೂಕಿನ ಚಕ್ರಬಾವಿ ಗ್ರಾಮದ ನರಸಿಂಹಮೂರ್ತಿ ಎಂಬುವರ ತೋಟದಲ್ಲಿ ಮಂಗಳವಾರ ರಾತ್ರಿ ಹೆಣ್ಣು ಚಿರತೆಯೊಂದು ತನ್ನ ಮೂರು ಮರಿಗಳೊಂದಿಗೆ ಕಾಣಿಸಿಕೊಂಡಿತ್ತು.
ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ತೋಟದಲ್ಲಿ ಎರಡು ಬೋನ್ ಇರಿಸಿದ್ದರು. ಬುಧವಾರ ರಾತ್ರಿ ಬೋನಿಗೆ ಒಂದು ವರ್ಷದ ಹೆಣ್ಣು ಚಿರತೆ ಮರಿ ಬಿದ್ದಿದೆ.
ಬೋನಿಗೆ ಬಿದ್ದ ಚಿರತೆ ಕೂಗಾಟ ನೋಡಿ ಗ್ರಾಮಸ್ಥರು ಸ್ಥಳಕ್ಕೆ ಬಂದು ನೋಡಿದಾಗ ಚಿರತೆ ಸೆರೆಯಾಗಿರುವುದು ಗೊತ್ತಾಗಿದೆ. ಅರಣ್ಯ ಇಲಾಖೆಗೆ ವಿಷಯ ಮುಟ್ಟಿಸಿದರು. ಚಿರತೆಯನ್ನು ಮಾಗಡಿ ವಲಯ ಅರಣ್ಯ ಅಧಿಕಾರಿ ಕಚೇರಿ ಆವರಣಕ್ಕೆ ಸ್ಥಳಾಂತರ ಮಾಡಲಾಯಿತು.
ತಾಯಿ ಚಿರತೆ ತನ್ನ ಮರಿಯನ್ನು ಹುಡುಕಿಕೊಂಡು ಬರುವ ಸಾಧ್ಯತೆ ಇದೆ. ರಾತ್ರಿ ವೇಳೆ ಎಚ್ಚರಿಕೆಯಿಂದ ಸಂಚರಿಸಬೇಕು. ಸಾಕು ಪ್ರಾಣಿಗಳನ್ನು ಸುರಕ್ಷಿತವಾಗಿ ಕೊಟ್ಟಿಗೆಗಳಲ್ಲಿ ಕಟ್ಟಿ ಹಾಕಿಕೊಳ್ಳಬೇಕು ಎಂದು ಮಾಗಡಿ ವಲಯ ಅರಣ್ಯಾಧಿಕಾರಿ ಚೈತ್ರ ಮನವಿ ಮಾಡಿದ್ದಾರೆ.
ಸೆರೆಯಾಗಿರುವ ಚಿರತೆಯನ್ನು ದೂರದ ಕಾಡಿಗೆ ಬಿಡಬೇಕು. ಚಿರತೆಗೆ ಜಿಪಿಎಸ್ ಚಿಪ್ ಅಳವಡಿಸಿ ಚಲನವಲನಗಳ ಮೇಲೆ ನಿಗಾ ವಹಿಸಬೇಕು ಎಂದು ಮರಳುದೇವನಪುರ, ಚಕ್ರಬಾವಿ, ಕೋರಮಂಗಲ ಗ್ರಾಮಸ್ಥರು ಮಾಗಡಿ ವಲಯ ಅರಣ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಎರಡು ವರ್ಷದಲ್ಲಿ 30 ಚಿರತೆ ಸೆರೆ
ಮಾಗಡಿ ತಾಲೂಕು ಗುಡ್ಡಗಾಡು ಪ್ರದೇಶವಾಗಿದ್ದು ಚಿರತೆಗಳ ಹಾವಳಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಅಂದಾಜಿನ ಪ್ರಕಾರ ಕಳೆದ ಎರಡು ವರ್ಷದಲ್ಲಿ ಮಾಗಡಿ ತಾಲ್ಲೂಕಿನಲ್ಲಿ 30ಕ್ಕೂ ಹೆಚ್ಚು ಚಿರತೆಗಳು ಸೆರೆಯಾಗಿವೆ. ತಾಲೂಕಿನಲ್ಲಿ ಗಣಿಗಾರಿಕೆ ಹೆಚ್ಚಾಗಿ ನಡೆಯುತ್ತಿರುವುದರಿಂದ ಬಂಡೆಗಳ ಸ್ಫೋಟದ ಶಬ್ದಕ್ಕೆ ಬೆದರಿ ಚಿರತೆಗಳು ನಾಡಿನತ್ತ ಮುಖ ಮಾಡುತ್ತಿವೆ. ಅಧಿಕಾರಿಗಳು ಅನಧಿಕೃತ ಗಣಿಗಾರಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.