ರಾಮನಗರ: ಚರ್ಮೊತ್ಪನ್ನಗಳ ಪ್ರಿಯರಿಗೆ ಇಲ್ಲಿದೆ ಸಿಹಿ ಸುದ್ದಿ. ಕೈಗೆಟುಕುವ ದರದಲ್ಲಿ ಚರ್ಮೋತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸಲು ಮುಂದಾಗಿರುವ ಕರ್ನಾಟಕ ಚರ್ಮೋದ್ಯಮ ಅಭಿವೃದ್ಧಿ ನಿಗಮವು (ಲಿಡ್ಕರ್) ಜಿಲ್ಲಾ ಕೇಂದ್ರದಲ್ಲಿ ತನ್ನ ಮೊದಲ ಷೋ ರೂಂ ತೆರೆಯಲು ಮುಂದಾಗಿದೆ.
ನಗರದ ಕಂದಾಯ ಭವನದಲ್ಲಿರುವ ತಳಮಹಡಿಯಲ್ಲಿ ಷೋ ರೂಂ ಕೆಲಸ ಬಹುತೇಕ ಪೂರ್ಣಗೊಂಡಿದ್ದು, ಸದ್ಯದಲ್ಲೇ ಉದ್ಘಾಟನೆಯಾಗಲಿದೆ. ಪ್ರತಿ ಜಿಲ್ಲೆಯಲ್ಲೂ ಲಿಡ್ಕರ್ ಷೋ ರೂಂ ತೆರೆಯಬೇಕು ಎಂಬ ಸರ್ಕಾರದ ಸೂಚನೆ ಮೇರೆಗೆ, ಕಂದಾಯ ಭವನದ ನೆಲ ತಳಮಹಡಿಯಲ್ಲಿ ಷೋ ರೂಂ ಆರಂಭಿಸಲು ನಿರ್ಧರಿಸಲಾಗಿತ್ತು. ಷೋ ರೂಂ ಜೊತೆಗೆ ಜಿಲ್ಲಾ ಮಟ್ಟದ ಕಚೇರಿಯೂ ಇಲ್ಲೇ ಆರಂಭವಾಗಲಿದ್ದು, ಎರಡರ ಕೆಲಸ ಬಹುತೇಕ ಮುಗಿಯುತ್ತಾ ಬಂದಿದೆ.
ಏನೆಲ್ಲಾ ಸಿಗಲಿವೆ?: ಶತಮಾನಗಳಿಂದಲೂ ಮನುಷ್ಯ ಚರ್ಮೊತ್ಪನ್ನಗಳನ್ನು ಬಳಸುತ್ತಿದ್ದಾನೆ. ಹಿಂದೆ ಸಾಮಾನ್ಯ ಎನಿಸಿದ್ದ ಈ ಉತ್ಪನ್ನಗಳು ಇಂದು ದುಬಾರಿ ಎನಿಸಿವೆ. ಇಂದಿಗೂ ಹಲವರು ಪಾರಂಪರಿಕವಾಗಿ ಚರ್ಮದ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಅವುಗಳಿಗೆ ಬ್ರ್ಯಾಂಡ್ ಮೌಲ್ಯದ ಜೊತೆಗೆ ಮಾರುಕಟ್ಟೆ ಕಲ್ಪಿಸಿ, ಕೈಗೆಟುಕುವ ದರದಲ್ಲಿ ಗ್ರಾಹಕರಿಗೆ ತಲುಪಿಸುವುದು ನಮ್ಮ ಉದ್ದೇಶವಾಗಿದೆ ಎಂದು ನಿಗಮದ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.
ಷೋ ರೂಂನಲ್ಲಿ ಮಕ್ಕಳಿಂದಿಡಿದು ವಯಸ್ಕರವರೆಗೆ ಧರಿಸಬಹುದಾದ ಶೂ, ಚಪ್ಪಲಿ, ಪರ್ಸ್, ಬ್ಯಾಗ್, ಬೆಲ್ಟ್, ಪುರುಷರು ಮತ್ತು ಮಹಿಳೆಯರ ಜಾಕೆಟ್‌ಗಳು ಸೇರಿದಂತೆ ಚರ್ಮದಿಂದ ತಯಾರಿಸಿದ ವಿವಿಧ ರೀತಿಯ ಉತ್ಪನ್ನಗಳು ಸಿಗಲಿವೆ. ಸದ್ಯ ಮಾರುಕಟ್ಟೆಯಲ್ಲಿರುವ ಬೇರೆ ಬ್ರ್ಯಾಂಡ್‌ಗಳಿಗೆ ಹೋಲಿಸಿದರೆ ಲಿಡ್ಕರ್‌ನಲ್ಲಿ ಸಿಗುವ ಉತ್ಪನ್ನಗಳ ಬೆಲೆ ಸ್ವಲ್ಪಮಟ್ಟಿಗೆ ಕಡಿಮೆಯೇ ಇರಲಿದೆ ಎಂದು ಅಧಿಕಾರಿಗಳು ತಿಳಿಸಿದರು.
ಚರ್ಮೊತ್ಪನ್ನ ತಯಾರಿಸುವವರನ್ನು ಪ್ರೋತ್ಸಾಹಿಸಿ ಅವರಿಗೆ ಮಾರುಕಟ್ಟೆ ಒದಗಿಸುವುದಕ್ಕಾಗಿ ಸರ್ಕಾರವು ಸಮಾಜ ಕಲ್ಯಾಣ ಇಲಾಖೆಯಡಿ ಲಿಡ್ಕರ್ ಮಳಿಗೆಗಳನ್ನು ತೆರೆಯುತ್ತಿದೆ. ಲಿಡ್ಕರ್ ಸರ್ಕಾರದ ಒಂದು ಭಾಗವಾಗಿದ್ದರೂ, ಕಂಪನಿ ಕಾಯ್ದೆಯಡಿ ಕಾರ್ಯನಿರ್ವಹಿಸುತ್ತಿದೆ.
ಉತ್ತಮ ವ್ಯಾಪಾರ ನಿರೀಕ್ಷೆ: ವಿವಿಧ ಇಲಾಖೆಗಳ ಸುಮಾರು 25ಕ್ಕೂ ಹೆಚ್ಚು ಕಚೇರಿಗಳಿರುವ ಕಂದಾಯ ಭವನದಲ್ಲಿ ಲಿಡ್ಕರ್ ಷೋರೂಂ ಆರಂಭವಾಗುತ್ತಿರುವುದರಿಂದ, ನಿಗಮದ ಅಧಿಕಾರಿಗಳು ಉತ್ತಮ ವ್ಯಾಪಾರದ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಉಪ ನೋಂದಣಾಧಿಕಾರಿ, ಗ್ರಂಥಾಲಯ, ಕಾರ್ಮಿಕ ಇಲಾಖೆ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ಪ್ರಮುಖ ಕಚೇರಿಗಳು ಇಲ್ಲಿರುವುದರಿಂದ ನಿತ್ಯ ನೂರಾರು ಸಾರ್ವಜನಿಕರು ಕಂದಾಯ ಭವನಕ್ಕೆ ಭೇಟಿ ನೀಡುತ್ತಾರೆ. ಈ ರೀತಿ ಬರುವವರು ಷೋ ರೂಂಗೆ ಭೇಟಿ ನೀಡಿ ಏನಾದರೂ ಖರೀದಿಸುವ ಸಾಧ್ಯತೆ ಇರುತ್ತದೆ. ಜೊತೆಗೆ ಮಾತಿನ ಪ್ರಚಾರವೂ ಸಿಗುತ್ತದೆ ಎಂಬ ವಿಶ್ವಾಸದಲ್ಲಿದ್ದಾರೆ ನಿಗಮದ ಅಧಿಕಾರಿಗಳು.
ಆರಂಭದಲ್ಲಿ ವಿಶೇಷ ದಿನಗಳಲ್ಲಿ ರಿಯಾಯಿತಿ
‘ಲಿಡ್ಕರ್‌ನಲ್ಲಿ ಮಾರಾಟವಾಗುವ ಚರ್ಮೊತ್ಪನ್ನಗಳ ಬೆಲೆಯು ಬೇರೆ ಕಂಪನಿಗಳ ಚರ್ಮದ ಉತ್ಪನ್ನಳಿಗಿಂತ ಕಡಿಮೆಯೇ ಇರಲಿದೆ. ಜಿಲ್ಲೆಯಲ್ಲಿ ಹೊಸದಾಗಿ ಷೋ ರೂಂ ತೆಗೆಯುವುದರಿಂದ ಆರಂಭದಲ್ಲಿ ರಿಯಾಯಿತಿ ದರದಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುವುದು. ಮುಂದೆ ಹಬ್ಬ–ಹರಿದಿನಗಳಂತಹ ವಿಶೇಷ ಸಂದರ್ಭಗಳಲ್ಲೂ ರಿಯಾಯಿತಿ ಘೋಷಿಸಲಾಗುವುದು’ ಎಂದು ಕರ್ನಾಟಕ ಚರ್ಮೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಾ. ವಸುಂಧರಾ ‘ಪ್ರಜಾವಾಣಿ’ಗೆ ತಿಳಿಸಿದರು.
ವಿವಿಧ ಬಗೆಯ ಚರ್ಮೊತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಪ್ರಥಮ ಲಿಡ್ಕರ್ ಷೋರೂಂ ತೆರೆಯುತ್ತಿದ್ದೇವೆ. ಬಹುತೇಕ ಕೆಲಸಗಳು ಮುಗಿದಿದ್ದು ಹದಿನೈದು ದಿನದಲ್ಲಿ ಉದ್ಘಾಟಿಸಲಾಗುವುದು-ಡಾ. ವಸುಂಧರಾ, ವ್ಯವಸ್ಥಾಪಕ ನಿರ್ದೇಶಕಿ ಕರ್ನಾಟಕ ಚರ್ಮೋದ್ಯಮ ಅಭಿವೃದ್ಧಿ ನಿಗಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.