ಸಾವು
ಪ್ರಾತಿನಿಧಿಕ ಚಿತ್ರ
ಚನ್ನಪಟ್ಟಣ(ರಾಮನಗರ): ದೇವಸ್ಥಾನದಲ್ಲಿ ಕಳವು ಮಾಡಿದ ಆರೋಪದ ಮೇಲೆ ಬಂಧಿತನಾಗಿದ್ದ ತಾಲ್ಲೂಕಿನ ದುಂಡನಹಳ್ಳಿ ಗ್ರಾಮದ ರಮೇಶ್ ಎಂಬಾತನ ಶವ ಎಂ.ಕೆ. ದೊಡ್ಡಿ ಪೊಲೀಸ್ ಠಾಣೆಯ ಶೌಚಾಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಬುಧವಾರ ಪತ್ತೆಯಾಗಿದೆ. ರಮೇಶ್ ಕುಟುಂಬದವರು ಲಾಕ್ಅಪ್ ಡೆತ್ ಆರೋಪ ಮಾಡಿದ್ದಾರೆ.
ಘಟನೆ ಬೆನ್ನಲ್ಲೇ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಡಿವೈಎಸ್ಪಿ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವವನ್ನು ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ತಾಲ್ಲೂಕಿನ ಬೊಮ್ಮನಾಯಕನಹಳ್ಳಿ ದೇವಸ್ಥಾನದ ಕಳ್ಳತನ ನಡೆದಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಎಂ.ಕೆ. ದೊಡ್ಡಿ ಪೊಲೀಸರು, ರಮೇಶ್, ಅವರ ಮಗ ಮಂಜು ಹಾಗೂ ಕೋಲಾರದ ಅನಿಲ್ ಎಂಬುವವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದರು.
ಬುಧವಾರ ಬೆಳಿಗ್ಗೆ ಶೌಚಾಲಯಕ್ಕೆಂದು ಹೋಗಿದ್ದ ರಮೇಶ್, ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರಮೇಶ್ ಕುಟುಂಬದವರು ಲಾಕ್ಅಪ್ ಡೆತ್ ಆರೋಪ ಮಾಡಿರುವ ಹಿನ್ನೆಲೆಯಲ್ಲಿ, ಹಿರಿಯ ಪೊಲೀಸ್ ಅಧಿಕಾರಿಗಳು ಠಾಣಾಧಿಕಾರಿ ಹಾಗೂ ಸಿಬ್ಬಂದಿಯಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.