ಹಾರೋಹಳ್ಳಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾವ ಎಚ್.ಡಿ. ದೇವೇಗೌಡ ಅವರೊಂದಿಗೆ ಅಳಿಯ ಡಾ. ಸಿ.ಎನ್. ಮಂಜುನಾಥ್ ಚರ್ಚೆಯಲ್ಲಿ ತೊಡಗಿದ್ದ ಕ್ಷಣ
ರಾಮನಗರ: ಲೋಕಸಭಾ ಚುನಾವಣೆಯ ಪ್ರಚಾರ ಜಿಲ್ಲೆಯಲ್ಲಿ ಮಂಗಳವಾರ ರಂಗೇರಿತ್ತು.
ಘಟನಾಘಟಿ ನಾಯಕರ ಬಹಿರಂಗ ಪ್ರಚಾರ ಹಾಗೂ ವಾಗ್ಯುದ್ದಕ್ಕೆ ಸಾವಿರಾರು ಸಾಕ್ಷಿಯಾದರು. ಬಿಜೆಪಿಯಿಂದ ಕಣಕ್ಕಿಳಿದಿರುವ ಅಳಿಯ ಡಾ. ಸಿ.ಎನ್. ಮಂಜುನಾಥ್ ಪರ ಜೆಡಿಎಸ್
ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಹಾಗೂ ತಮ್ಮನ ಪರ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಬಿರು ಬಿಸಿಲು ಲೆಕ್ಕಿಸದೆ ಪ್ರಚಾರ ನಡೆಸಿದರು.
ಹಾರೋಹಳ್ಳಿ ಮತ್ತು ಮರಳವಾಡಿಯಿಂದ ನಾಯಕರಿಬ್ಬರು ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ಶುರು ಮಾಡಿ, ಕ್ಷೇತ್ರದ ವಿವಿಧೆಡೆಯೂ ಮತ ಭೇಟೆ ನಡೆಸಿದರು.
ಕಿವಿಗಡಚಿಕ್ಕುವ ಜೈಕಾರ, ಬೃಹತ್ ಹಾರ–ತುರಾಯಿಗಳೊಂದಿಗೆ ನಾಯಕರಿಗೆ ಕಾರ್ಯಕರ್ತರಿಂದ ಅದ್ಧೂರಿ ಸ್ವಾಗತ ಸಿಕ್ಕಿತು. ವೈಯಕ್ತಿಕವಾಗಿ ಗುರಿಯಾಗಿಸಿಕೊಂಡು ಉಭಯ ನಾಯಕರು ಮಾಡಿದ ಆರೋಪ–
ಪ್ರತ್ಯಾರೋಪಗಳು, ಮನರಂಜನೆ ಜೊತೆಗೆ ‘ಇರ್ವರೊಳಗೆ ಉತ್ತಮರಾರು’ ಎಂಬ ಚಿಂತನೆಗೂ ಹಚ್ಚಿದವು.
ತಮ್ಮ ನೆಚ್ಚಿನ ನಾಯಕರನ್ನು ಕಣ್ತುಂಬಿಕೊಳ್ಳುವ ಜೊತೆಗೆ, ಮುಂದೆ ತಮ್ಮನ್ನು ಪ್ರತಿನಿಧಿಸಬಹುದಾದ ಭಾವಿ ಸಂಸದರ ಮಾತುಗಳಿಗೆ ಕಾರ್ಯಕರ್ತರು ಕಿವಿಯಾದರು.
ತಮ್ಮ ಪಕ್ಷದ ಚರಿತ್ರೆ, ತಾವು ಮಾಡಿದ ಕೆಲಸ–ಕಾರ್ಯಗಳು ಹಾಗೂ ಭವಿಷ್ಯದ ಅಭಿವೃದ್ಧಿಯ ಕಾರ್ಯಸೂಚಿಗಳನ್ನು ಜನರ ಮುಂದೆ ಬಿಚ್ಚಿಟ್ಟ ನಾಯಕರು, ಅವರ ಮತವನ್ನು ತಮ್ಮ ಬುಟ್ಟಿಗೆ ಖಚಿತಪಡಿಸಿಕೊಳ್ಳಲು ಯತ್ನಿಸಿದರು.
ಶಿವಕುಮಾರ್ ಗುರಿ: ದೇವೇಗೌಡರು ತಮ್ಮ ಮಾತಿನುದ್ದಕ್ಕೂ ಡಿ.ಕೆ. ಶಿವಕುಮಾರ್ ಅವರನ್ನು ಗುರಿಯಾಗಿಸಿಕೊಂಡು ‘ಮಹಾನುಭಾವ’ ಎಂದು ಮೂದಲಿಸುತ್ತಾ ಟೀಕಿಸಿದರು.
‘ಡಾ. ಮಂಜುನಾಥ್ ಮಣಿಸಲು ಈ ಮಹಾನುಭಾವ ಮಂಜುನಾಥ್ ಹೆಸರಿನ ಮೂವರನ್ನು ತಂದು ನಿಲ್ಲಿಸಿದ್ದಾರೆ. ಎಂತಾ ಬುದ್ದಿ ಬಳಕೆ ಮಾಡಿದ್ದಾರೆ ನೋಡಿ. ಇವರಿಗೆ ಪಾಠ ಕಲಿಸಬೇಕಲ್ಲವೆ?’ ಎಂದ ನೆರೆದಿದ್ದ ಜನರಿಗೆ ಕರೆ ನೀಡಿದರು.
‘ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರೇ ಡಾ. ಮಂಜುನಾಥ್ ಅವರ ಸೇವೆಯು ಕರ್ನಾಟಕಕ್ಕೆ ಮಾತ್ರ ಸೀಮಿತವಾಗದೆ, ಇಡೀ ರಾಷ್ಟ್ರಕ್ಕೆ ಸಿಗಬೇಕು ಎಂದು ನಿರ್ಧರಿಸಿ ಚುನಾವಣೆಗೆ ನಿಲ್ಲಿಸುವಂತೆ ನಮ್ಮನ್ನು ಒಪ್ಪಿಸಿದರು. ದೇಶಸೇವೆ ಮಾಡಲು ಅವರಿಗೊಂದು ಅವಕಾಶ ಕೊಡಿ’ ಎಂದು ಮನವಿ ಮಾಡಿದರು.
‘ಜಿಲ್ಲೆಯವರು ದೇವೇಗೌಡರನ್ನು ಪ್ರಧಾನಿ, ಮಗನನ್ನು ಮುಖ್ಯಮಂತ್ರಿ, ಸೊಸೆಯನ್ನು ಶಾಸಕಿಯನ್ನಾಗಿ ಮಾಡಿದರೂ, ಕಡೆಗೆ ತಮ್ಮ ಅಳಿಯನನ್ನು ಕರೆದುಕೊಂಡು ಬಂದು ಚುನಾವಣೆಗೆ ನಿಲ್ಲಿಸಿದರು. ಹಾಗಾದರೆ, ಇಲ್ಲಿರುವ ಮುಖಂಡರು ಹಾಗೂ ಕಾರ್ಯಕರ್ತರು ಜೀವಮಾನವಿಡೀ ಇವರ ಕುಟುಂಬ ರಾಜಕಾರಣಕ್ಕೆ ಜೀತ ಮಾಡಬೇಕಾ? ಕಾಲ ಮಿಂಚಿ ಹೋಗಿಲ್ಲ. ಕಾರ್ಯಕರ್ತರು ಈಗಲೂ ನಮ್ಮನ್ನು ಬೆಂಬಲಿಸಿ. ನಿಮ್ಮನ್ನು ಬೆಳೆಸುವ ಜವಾಬ್ದಾರಿ ನಮ್ಮದು’ ಎಂದು ಜೆಡಿಎಸ್‌ನವರಿಗೆ ಆಹ್ವಾನ
ನೀಡಿದರು.
ರಾಮನಗರದಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ. ಸುರೇಶ್ ಪ್ರಚಾರದ ಜುಗಲ್ಬಂದಿ
ದೇಶದ ಅಭಿವೃದ್ಧಿಗಾಗಿ ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳಿಗೆ ಮತದಾರರು ಮಣೆ ಹಾಕಲಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಹೆಸರು ಮಾಡಿರುವ ಡಾ. ಮಂಜುನಾಥ್ ಸೇವೆ ರಾಷ್ಟ್ರಮಟ್ಟಕ್ಕೆ ವಿಸ್ತರಿಸುವುದು ನಿಶ್ಚಿತಎಚ್.ಡಿ. ದೇವೇಗೌಡ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ
‘ಕಮಲ’ ಕೆರೆಯಲ್ಲಿದ್ದರೆ ಚಂದ. ‘ತೆನೆ’ ಗದ್ದೆಯಲ್ಲಿದ್ದರೆ ಚಂದ. ದಾನ– ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ಗ್ಯಾರಂಟಿ ಯೋಜನೆಗಳ ರಾಜ್ಯದಲ್ಲಿ ಬದಲಾವಣೆಗೆ ನಾದಿ ಹಾಡಿರುವ ‘ಕೈ’ಗೆ, ದೇಶದಲ್ಲೂ ಜನ ಅಧಿಕಾರ ಕೊಡಬೇಕುಡಿ.ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.