ADVERTISEMENT

ಬಿಜೆಪಿ ಸುಳ್ಳಿಗೆ ಜನರಿಂದ ತಕ್ಕ ಶಾಸ್ತಿ: ಎಂ.ವೀರಪ್ಪ ಮೊಯಿಲಿ

ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಭವಿಷ್ಯ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2022, 3:09 IST
Last Updated 23 ಆಗಸ್ಟ್ 2022, 3:09 IST
ಮಾಗಡಿ ತಾಲ್ಲೂಕಿನ ಸೋಲೂರಿನಲ್ಲಿ ನಡೆದ ಕಾಂಗ್ರೆಸ್‌ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಅವರ ನೇತೃತ್ವದಲ್ಲಿ ನೂರಾರು ಜನರು ಸೇರ್ಪಡೆಯಾದರು
ಮಾಗಡಿ ತಾಲ್ಲೂಕಿನ ಸೋಲೂರಿನಲ್ಲಿ ನಡೆದ ಕಾಂಗ್ರೆಸ್‌ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಅವರ ನೇತೃತ್ವದಲ್ಲಿ ನೂರಾರು ಜನರು ಸೇರ್ಪಡೆಯಾದರು   

ಮಾಗಡಿ: ಬಿಜೆಪಿ ಸುಳ್ಳಿನ ಸರಮಾಲೆಗೆ ರಾಜ್ಯದ ಜನ ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಹೇಳಿದರು.

ಸೋಲೂರಿನಲ್ಲಿ ವಿವಿಧ ಪಕ್ಷಗಳನ್ನು ತ್ಯಜಿಸಿ ಬಂದವರನ್ನು ಕಾಂಗ್ರೆಸ್‌ಗೆ ಬರ ಮಾಡಿಕೊಂಡು ಮಾತನಾಡಿದರು.

‘ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಮತ್ತು ಬೆಂಗಳೂರಿನಲ್ಲಿ ಡಿ.ಕೆ.ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಕಾಂಗ್ರೆಸ್‌ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದಲ್ಲಿ ಸೇರಿದ್ದ ಜನರನ್ನು ಕಂಡು ಬಿಜೆಪಿಗೆ ದಿಗಿಲುಂಟಾಗಿದೆ’ ಎಂದರು.

ADVERTISEMENT

‘ಬಿಜೆಪಿ ಸರ್ಕಾರದ ಸಾಧನೆ ಶೂನ್ಯ. ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿರುವುದೇ ಸಾಧನೆಯಾಗಿದೆ. ಖಾಸಗಿ ಉದ್ಯಮಿಗಳ ಲಕ್ಷಾಂತರ ಕೋಟಿ ಸಾಲಮನ್ನಾ ಮಾಡಿರುವ ಮೋದಿ ಸರ್ಕಾರ, ರೈತರ ಸಾಲಮನ್ನಾ ಮಾಡಲು ಮೀನಾಮೇಷ ಎಣಿಸುತ್ತಿದೆ’ ಎಂದು
ದೂರಿದರು.

‘ರಾಜ್ಯದಲ್ಲಿ 2023ರ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರುವುದು ಖಚಿತವಾಗಿದೆ. ಚುನಾವಣೆಗೆ ಮುನ್ನ ಕಾಂಗ್ರೆಸ್‌ ಪಕ್ಷ ಅಭ್ಯರ್ಥಿಗಳನ್ನು ಘೋಷಣೆ ಮಾಡುವುದು ವಾಡಿಕೆ. ಚುನಾವಣೆಯಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಎಐಸಿಸಿ ಬಿಡುಗಡೆ ಮಾಡಲಿದೆ. ಕಾಂಗ್ರೆಸ್‌ ಕಾರ್ಯಕರ್ತರು ಮತದಾರರ ಮನೆಗೆ ತೆರಳಿ ಸಮಸ್ಯೆಗಳನ್ನು ಪಟ್ಟಿಮಾಡಿಕೊಂಡು ಕಾನೂನು ರೀತಿ ನೆರವುಕೊಡಿಸಲು ಮುಂದಾಗಬೇಕು’ ಎಂದು ಕರೆ ನೀಡಿದರು.

ಎಂಎಲ್‌ಸಿ ರವಿ, ಮಾಜಿ ಶಾಸಕ ಎಚ್‌.ಸಿ.ಬಾಲಕೃಷ್ಣ, ವಿಧಾನ ಪರಿಷತ್‌ ಮಾಜಿ ಸದಸ್ಯ ಬೆಮೆಲ್‌ ಕಾಂತರಾಜ್‌, ಕಾಂಗ್ರೆಸ್‌ ಮುಖಂಡರಾದ ಚನ್ನರಂಗೇಗೌಡ, ಬಿ.ವಿ.ಜಯರಾಮು, ರಂಗಸ್ವಾಮಿ, ಶ್ರೀನಿವಾಸ್‌, ಬೆಮೆಲ್‌ ಕಾಂತರಾಜ್‌, ಯಾಗನಹಳ್ಳಿ ಚಂದ್ರಣ್ಣ, ಸಿ.ಆರ್‌.ಗೌಡ, ಬಿ.ವಿ.ಜಯರಾಮ್‌, ಶ್ರೀನಿವಾಸ್‌ ಇದ್ದರು.

ಕಾರ್ಯಕ್ರಮಕ್ಕೂ ಮುನ್ನ ಬೈಕ್‌ ರ‍್ಯಾಲಿ ನಡೆಯಿತು.

ಸೇರ್ಪಡೆ: ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಗೀತಾ ಗಂಗರಂಗಯ್ಯ, ತಟ್ಟೆಕೆರೆ ಬಾಬು, ಚಂದ್ರೇಗೌಡ,ಮಹದೇವ್‌, ಸಿದ್ದಪ್ಪ ಕಾಂಗ್ರೆಸ್‌ ಪಕ್ಷ ಸೇರ್ಪಡೆಯಾದರು.

‘ಪ್ರಜಾಪ್ರಭುತ್ವ ಹೆಸರಲ್ಲಿ ಸರ್ವಾಧಿಕಾರ’

‘ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪ್ರಜಾಪ್ರಭುತ್ವದ ಹೆಸರಿನಲ್ಲಿ ನಡೆಯುತ್ತಿರುವ ಸರ್ವಾಧಿಕಾರ ಸರ್ಕಾರದಂತಿದೆ ಎಂದು ಎಂ.ವೀರಪ್ಪ ಮೊಯಿಲಿ ಹೇಳಿದರು.

‘ಬಿಜೆಪಿ ಕೋಮುಗಲಭೆ ಸೃಷ್ಟಿಸುವ ಮೂಲಕ ಜನರ ದಿಕ್ಕು ತಪ್ಪಿಸುವುದನ್ನು ನಿಲ್ಲಿಸಬೇಕು. ಮುಖ್ಯಮಂತ್ರಿ ಎಲ್ಲಾ ಧರ್ಮ, ಜಾತಿಗಳ ಜನರನ್ನು ಸಮಾನತೆಯಿಂದ ನೋಡಬೇಕು. ಬಿಜೆಪಿ ಪಕ್ಷದ ಮುಖ್ಯಮಂತ್ರಿಗಳು ಒಂದು ಧರ್ಮದವರ ಪರವಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.