ಮಾಗಡಿ: ಪಟ್ಟಣದ ಕೋಟೆ ಮೈದಾನದಲ್ಲಿ ಹಲವು ದಶಕಗಳಿಂದಲೂ ಪ್ರತಿ ಶುಕ್ರವಾರ ನಡೆಯುತ್ತಿದ್ದ ಕುರಿ, ಕೋಳಿ, ಮೇಕೆ ಸಂತೆ ಭವಿಷ್ಯ ಈಗ ಅನಿಶ್ಚಿತವಾಗಿದೆ. ಸರ್ಕಾರ ಮಾಗಡಿ ಕೋಟೆ ಪುನರುಜ್ಜೀವನ ಮತ್ತು ಅಭಿವೃದ್ಧಿಗೆ ₹103 ಕೋಟಿ ಬಜೆಟ್ ಅನುಮೋದನೆ ನೀಡಿದೆ. ಈಗ ಸಂತೆಗೆ ಪರ್ಯಾಯ ಜಾಗದ ಹುಡುಕಾಟ ಪ್ರಾರಂಭವಾಗಿದೆ.
ಕೋಟೆ ಮೈದಾನ ಪ್ರಾಚ್ಯ ವಸ್ತು ಸಂಗ್ರಹಾಲಯ ಇಲಾಖೆ ಆಸ್ತಿಯಾಗಿದೆ. ಆದರೆ, ದೀರ್ಘಕಾಲದಿಂದ ಪುರಸಭೆಯು ಈ ಜಾಗದಲ್ಲಿ ಸಂತೆಯನ್ನು ನಡೆಸಿಕೊಂಡು ಬಂದಿದೆ. ಅದರ ನಿರ್ವಹಣಾ ಹಕ್ಕನ್ನು ವಾರ್ಷಿಕ ಹರಾಜಿನ ಮೂಲಕ ಖಾಸಗಿಯವರಿಗೆ ನೀಡುತ್ತಿದೆ. 2025-26 ಆರ್ಥಿಕ ವರ್ಷಕ್ಕೆ ಈ ಹರಾಜನ್ನು ₹8.50ಲಕ್ಷಕ್ಕೆ ನೀಡಲಾಗಿದೆ.
ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್, ಕೋಟೆ ಕಾಮಗಾರಿ ಆರಂಭವಾದ ನಂತರ ಈ ಜಾಗದಲ್ಲಿ ಸಂತೆ ನಡೆಸಲು ಅವಕಾಶವಿರುವುದಿಲ್ಲ. ಆದರೆ, ಹರಾಜುದಾರರು ಪುರಸಭೆ ಗುರುತಿಸುವ ಹೊಸ ಜಾಗದಲ್ಲಿ ತಮ್ಮ ಒಪ್ಪಂದದ ಅವಧಿ ಮುಗಿಯುವವರೆಗೂ ಸಂತೆ ನಡೆಸಲು ಅವಕಾಶ ಪಡೆಯುತ್ತಾರೆ ಎಂದರು.
ಈ ಸಮಸ್ಯೆ ಪರಿಹರಿಸಲು ಶಾಸಕ ಬಾಲಕೃಷ್ಣ ಹಸ್ತಕ್ಷೇಪ ಮಾಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಪುರಸಭೆಯು ಪಟ್ಟಣದ ಸೋಮೇಶ್ವರ ಬಡಾವಣೆ ಸಮೀಪ ಸುಮಾರು ಎರಡು ಎಕರೆ ವಿಸ್ತೀರ್ಣದ ಸರ್ಕಾರಿ ಜಾಗವನ್ನು ಗುರುತಿಸುವ ಪ್ರಕ್ರಿಯೆಯಲ್ಲಿ ಈಗಾಗಲೇ ತೊಡಗಿದೆ. ಈ ಜಾಗ ಲಭ್ಯವಾಗದಿದ್ದರೆ ಪುರಸಭೆಯು ಅಗತ್ಯವಿರುವ ಜಾಗವನ್ನು ಖರೀದಿಸುವ ಸಿದ್ಧತೆ ಮಾಡಲಿದೆ ಎಂದರು.
ಸಂತೆಯನ್ನು ಪಟ್ಟಣದ ಹೊಸಪೇಟೆ ರಾಮನಗರದ ಖಾಸಗಿ ಜಾಗ ಅಥವಾ ಖಾಸಗಿ ಬಸ್ ನಿಲ್ದಾಣ ಬಳಿ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗುತ್ತದೆ. ಈ ತಾತ್ಕಾಲಿಕ ಏರ್ಪಾಡಿನಿಂದ ಗ್ರಾಹಕರು ಮತ್ತು ರೈತರಿಗೆ ತೊಂದರೆ ಉಂಟಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಪುರಸಭೆ ತಕ್ಷಣವೇ ಸ್ಥಿರ ಮತ್ತು ಶಾಶ್ವತವಾದ ಪರ್ಯಾಯ ಸ್ಥಳ ಗುರುತಿಸಿ ಘೋಷಿಸಬೇಕು ಎಂದು ರೈತರು ಮತ್ತು ನಾಗರಿಕರು ಒತ್ತಾಯಿಸಿದ್ದಾರೆ.
ಪ್ರತಿ ಶುಕ್ರವಾರ ಬೇರೆ ಬೇರೆ ಜಿಲ್ಲೆಗಳಿಂದಲೂ ಕುರಿ–ಕೋಳಿ ಮೇಕೆ ಕೊಂಡುಕೊಳ್ಳಲು ಸಾಕಷ್ಟು ರೈತರು ದಲ್ಲಾಳಿಗಳು ಇಲ್ಲಿಗೆ ಬರುತ್ತಾರೆ. ಈಗ ಕೋಟೆ ಕಾಮಗಾರಿ ಆರಂಭವಾದ ನಂತರ ಸಂತೆ ಮಾಡಲು ಅವಕಾಶವಿಲ್ಲ. ಪುರಸಭೆಯಿಂದ 2 ಎಕರೆ ಜಾಗ ಗುರುತಿಸುವಂತೆ ಪುರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಜಾಗ ಸಿಕ್ಕ ಕೂಡಲೇ ಕುರಿ–ಕೋಳಿ ಸಂತೆ ನಿಗದಿ ಮಾಡಲಾಗುವುದು.–ಎಚ್.ಸಿ.ಬಾಲಕೃಷ್ಣ, ಶಾಸಕ
ಕೋಟೆ ಕಾಮಗಾರಿ ಆರಂಭವಾದ ನಂತರ ಆ ಜಾಗದಲ್ಲಿ ಕುರಿ–ಕೋಳಿ ಸಂತೆ ಮಾಡಲು ಅವಕಾಶ ಇರುವುದಿಲ್ಲ. ಹೊಸದಾಗಿ ಜಾಗ ಗುರುತಿಸಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕುರಿ–ಕೋಳಿ ಸಂತೆ ಮಾಡಲು ಅವಕಾಶ ಕೊಡಲಾಗುವುದು.–ಶ್ರೀನಿವಾಸ್, ಪುರಸಭೆ ಮುಖ್ಯಾಧಿಕಾರಿ
ಸೋಮೇಶ್ವರ ಬಡಾವಣೆ ಸಮೀಪ ನಿವೇಶನ ಸೋಮೇಶ್ವರ ಬಡಾವಣೆ ಸಮೀಪ ಸರ್ಕಾರಿ ಜಾಗ ಗುರುತಿಸಲಾಗುತ್ತಿದೆ. ಒಂದು ವೇಳೆ ಜಾಗ ಸಿಗದಿದ್ದರೆ ಐಡಿಎಸ್‌ಎಂಟಿ ನಿವೇಶನ ಮಾರಾಟ ಮಾಡುತ್ತಿದ್ದು ಅದರಲ್ಲಿ ಬರುವ ಹಣದಿಂದ ಎರಡು ಎಕರೆ ಜಾಗ ಖರೀದಿಸಿ ಸಂತೆ ಮಾಡಲು ಜಾಗ ನಿಗದಿ ಮಾಡುವುದು.–ಶಿವರುದ್ರಮ್ಮ, ಪುರಸಭೆ ಅಧ್ಯಕ್ಷೆ ಮಾಗಡಿ
ರೈತರು ಮಾರಾಟಗಾರರಿಗೆ ಅನುಕೂಲ ಕಲ್ಪಿಸಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೋಟೆ ಮೈದಾನದಲ್ಲಿ ಕುರಿ–ಕೋಳಿ ಸಂತೆ ಮಾಡಲಾಗುತ್ತಿತ್ತು. ಈಗ ಮೈದಾನದಲ್ಲಿ ಅವಕಾಶ ಸಿಗದಿದ್ದರೆ ಪುರಸಭೆಯವರೇ ಜಾಗ ನಿಗದಿ ಮಾಡಿ ರೈತರು ಮಾರಾಟಗಾರರಿಗೆ ಅನುಕೂಲವಾಗುವಂತೆ ಮಾಡಿಕೊಡಬೇಕು.–ರವಿಕುಮಾರ್, ರೈತ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.