ADVERTISEMENT

ಮಾಗಡಿ: ಗಾಯಾಳು ಸ್ನೇಹಿತನ ಕೆರೆಯಲ್ಲಿ ಮುಳುಗಿಸಿ ಕೊಂದರು!

ಕಾಣೆಯಾಗಿದ್ದ ಯುವಕನ ಶವ ಬಾವಿಯಲ್ಲಿ ಪತ್ತೆ; ಪಾರ್ಟಿಗೆ ಕರೆದೊಯ್ದ ಕೊಲೆ ಮಾಡಿದ ಗೆಳೆಯರು

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 5:06 IST
Last Updated 23 ಜನವರಿ 2026, 5:06 IST
ವಿನೋದ್, ಮೃತ ಯುವಕ
ವಿನೋದ್, ಮೃತ ಯುವಕ   

ಕುದೂರು (ಮಾಗಡಿ): ಸ್ನೇಹಿತರೆಂದರೆ ಆಪತ್ಭಾಂದವರು. ಕಷ್ಟ–ಸುಖ ಸೇರಿದಂತೆ ಏನೇ ಸಮಸ್ಯೆಯಾದರೂ ಮೊದಲಿಗೆ ಸ್ಪಂದಿಸಿ ಬೆನ್ನಿಗೆ ನಿಲ್ಲುವ ನಂಬಿಕಸ್ಥರು. ಬದುಕಿನಲ್ಲಿ ಕುಟುಂಬದವರಷ್ಟೇ ಸ್ನೇಹಿತರೂ ಮುಖ್ಯ ಮಾತು ಜನಜನಿತವಾದುದು. ಮನೆ ಮಗ ಸ್ನೇಹಿತರ ಜೊತೆ ಹೋಗಿದ್ದಾನೆ ಎಂದರೆ, ಕುಟುಂಬದವರಿಗೂ ಒಂದು ರೀತಿಯಲ್ಲಿ ಸುರಕ್ಷತೆಯ ಭಾವ ಇರುತ್ತದೆ.

ಆದರೆ ಇದಕ್ಕೆ ವ್ಯತಿರಿಕ್ತ ಎಂಬಂತೆ, ಯುವಕನೊಬ್ಬನನ್ನು ಆತನ ಸ್ನೇಹಿತರೇ ನೀರಲ್ಲಿ ಮುಳುಗಿಸಿ ಕೊಂದು, ಆನಂತರ ಬಾವಿಗೆ ಎಸೆದಿರುವ ಘಟನೆ ನಡೆದಿದೆ. ತಾಲ್ಲೂಕಿನ ಕಲ್ಯಾಣಪುರದ ವಿನೋದ್(26) ಸ್ನೇಹಿತರಿಂದಲೇ ಕೊಲೆಯಾದವರು. ಘಟನೆಗೆ ಸಂಬಂಧಿಸಿದಂತೆ ಆತನ ಸ್ನೇಹಿತರಾದ ಗಾರೆ ಕೆಲಸಗಾರ ಅದೇ ಗ್ರಾಮದ ಸುದೀಪ್ ಅಲಿಯಾಸ್ ಆಫ್ರಿಕಾ ಮತ್ತು ಲಾರಿ ಚಾಲಕ ಪ್ರಜ್ವಲ್‌ನನ್ನು ಕುದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹೊಸ ವರ್ಷದ ಹಿನ್ನೆಲೆಯಲ್ಲಿ ಜ. 1ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ವಿನೋದ್ ಸೇರಿದಂತೆ ಐದಾರು ಮಂದಿಗೆ ಗ್ರಾಮದ ತೆಂಗಿನ ತೋಟದಲ್ಲಿ ಮದ್ಯದ ಪಾರ್ಟಿಗೆ ಸೇರಿದ್ದರು. ಈ ವೇಳೆ, ಮದ್ಯಕ್ಕೆ ಎಳನೀರು ಮಿಕ್ಸ್ ಮಾಡಿಕೊಂಡು ಕುಡಿಯೋಣ ಎಂದ ಸುದೀಪ್ ಮತ್ತು ಪ್ರಜ್ವಲ್‌ ಇಬ್ಬರೂ, ವಿನೋದ್ ಅವರನ್ನು ತೆಂಗಿನ ಮರಕ್ಕೆ ಹತ್ತಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು.

ADVERTISEMENT

ಮರದಿಂದ ಬಿದ್ದ: ಸುಮಾರು 30 ಅಡಿ ಎತ್ತರದ ಮರಕ್ಕೆ ಹತ್ತಿದ್ದ ವಿನೋದ್, ಎಳನೀರು ಕೀಳುವಾಗ ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾರೆ. ಸೊಂಟ ಮತ್ತು ಕೈ–ಕಾಲಿಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಮೇಲಕ್ಕೆಳಲಾಗದ ಸ್ಥಿತಿ ತಲುಪಿದ್ದಾರೆ. ಆಗ ಜೊತೆಗಿದ್ದ ಇತರರು, ‘ಪಾರ್ಟಿಗಾಗಿ ನೀವೇ ವಿನೋದ್‌ನನ್ನು ಕರೆದುಕೊಂಡು ಬಂದಿದ್ದೀರಿ. ಮೊದಲು ಆಸ್ಪತ್ರೆಗೆ ಸೇರಿಸಿ. ಅವನಿಗೇನಾದರೂ ಅಪಾಯವಾದರೆ ನೀವೇ ಹೊಣೆಯಾಗುತ್ತೀರಿ’ ಎಂದಿದ್ದಾರೆ.

ಆಗ, ಆರೋಪಿಗಳಿಬ್ಬರು ಆಸ್ಪತ್ರೆಗೆಂದು ವಿನೋದ್ ಅವರನ್ನು ಬೈಕ್‌ಗೆ ಹತ್ತಿಸಿಕೊಂಡಿದ್ದಾರೆ. ಮಾರ್ಗಮಧ್ಯೆ ಬೈಕ್ ನಿಲ್ಲಿಸಿದ ಆರೋಪಿಗಳು, ಈತನನ್ನು ಆಸ್ಪತ್ರೆಗೆ ಸೇರಿಸಿದರೆ ಅದರ ಸಂಪೂರ್ಣ ವೆಚ್ಚವನ್ನು ನಾವೇ ಕೊಡಬೇಕು. ಜೀವಕ್ಕೆನಾದರೂ ತೊಂದರೆಯಾದರೆ ಅದಕ್ಕೂ ನಾವೇ ಹೊಣೆ ಆಗುತ್ತೇವೆ. ಹಾಗಾಗಿ, ಈತನನ್ನು ಮುಗಿಸಿದರೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಮಾತನಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರು.

ಮುಳುಗಿಸಿ ಕೊಂದರು: ಕೊಲೆ ಮಾಡಲು ಸಂಚು ರೂಪಿಸಿದ ಆರೋಪಿಗಳು, ನೋವಿನಿಂದ ನರಳುತ್ತಿದ್ದ ವಿನೋದ್ ಅವರನ್ನು ಸಮೀಪದ ಕೆರೆಗೆ ಕರೆದೊಯ್ದು ಮುಳುಗಿಸಿ ಕೊಲೆ ಮಾಡಿದ್ದಾರೆ. ನಂತರ ಅನತಿ ದೂರದ ಜಮೀನಲ್ಲಿದ್ದ ರುದ್ರಮ್ಮನ ಬಾವಿ ಬಳಿಗೆ ಶವ ಹೊತ್ತೊಯ್ದು, ಶವಕ್ಕೆ ತಂತಿಯಿಂದ ಕಲ್ಲು ಕಟ್ಟಿ ಬಾವಿಗೆ ಎಸೆದಿದ್ದಾರೆ. ನಂತರ ಪಾರ್ಟಿ ಸ್ಥಳಕ್ಕೆ ವಾಪಸ್ ಬಂದು ಮತ್ತೆ ಮದ್ಯ ಸೇವಿಸಿದ್ದಾರೆ.

ಸ್ನೇಹಿತರೊಂದಿಗೆ ಹೋದ ತನ್ನ ಮೊಮ್ಮಗ ರಾತ್ರಿಯಾದರೂ ಮನೆಗೆ ಬಾರದಿದ್ದರಿಂದ ಆತಂಕಗೊಂಡ ವಿನೋದ್ ಅವರ ಅಜ್ಜ, ಹಲವೆಡೆ ಹುಡುಕಾಡಿ ವಿಚಾರಿಸಿದರೂ ವಿನೋದ್ ಅವರ ಸುಳಿವು ಸಿಕ್ಕಿಲ್ಲ. ಕಡೆಗೆ ವಿನೋದ್ ಕಾಣೆಯಾಗಿರುವ ಕುರಿತು ಜ. 7ರಂದು ಠಾಣೆಗೆ ದೂರು ಕೊಟ್ಟಿದ್ದರು. ಪ್ರಕರಣ ದಾಖಲಿಸಿಕೊಂಡು ವಿನೋದ್ ಪತ್ತೆಗೆ ತನಿಖೆ ಕೈಗೊಳ್ಳಲಾಗಿತ್ತು ಎಂದು ಪೊಲೀಸರು ತಿಳಿಸಿದರು.

ಡಿವೈಎಸ್ಪಿ ಪಿ. ರವಿ ಮಾರ್ಗದರ್ಶನದಲ್ಲಿ ಕುದೂರು ಇನ್‌ಸ್ಪೆಕ್ಟರ್ ಚಂದ್ರಶೇಖರ್ ನೇತೃತ್ವದಲ್ಲಿ ಎಸ್‌ಐ ಸರ್ದಾರ್ ಸಾಬ್, ಸಿಬ್ಬಂದಿ ಸೂರ್ಯಕುಮಾರ್, ಮಾರುತಿ, ನಾಗರಾಜ್, ಶಿವರಾಜ್, ದರ್ಶನ್, ರಾಜೇಶ್, ಲೋಹಿತ್, ಮಹದೇವ್ ಶೆಟ್ಟಿ, ಅಭಿಷೇಕ್, ಸಂತೋಷ್ ಅವರನ್ನು ಒಳಗೊಂಡ ತಂಡ ಆರೋಪಿಗಳನ್ನು ಬಂಧಿಸಿತು.

ಕೊಲೆ ಮಾಡಿ ಊರಲ್ಲೇ ಓಡಾಡಿಕೊಂಡಿದ್ದರು!

ಬಾವಿಗೆ ಎಸೆದಿದ್ದ ಶವವು ಜ. 17ರಂದು ಬಾವಿಯಲ್ಲಿ ತೇಲುತ್ತಿರುವುದನ್ನು ಗಮನಿಸಿದ ಸ್ಥಳೀಯರೊಬ್ಬರು ಠಾಣೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಹೋಗಿ ಕೊಳೆತ ಸ್ಥಿತಿಯಲ್ಲಿದ್ದ ಶವವನ್ನು ಮೇಲಕ್ಕೆತ್ತಿಸಲಾಯಿತು. ಸ್ಥಳಕ್ಕೆ ವಿನೋದ್ ಕುಟುಂಬದವರನ್ನು ಕರೆಯಿಸಿ ತೋರಿಸಿದಾಗ ಶವ ವಿನೋದ್ ಅವರದ್ದೇ ಎಂದು ಖಚಿತಪಡಿಸಿದರು. ವಿನೋದ್ ಹೆಚ್ಚಾಗಿ ಸುದೀಪ್ ಜೊತೆ ಓಡಾಡಿಕೊಂಡಿದ್ದರಿಂದ ಕಾಣೆಯಾದ ದಿನವೂ ಆತನ ಜೊತೆಗೇ ಹೋಗಿದ್ದ. ಹಾಗಾಗಿ ಆತನೇ ಕೊಲೆ ಮಾಡಿ ಬಾವಿಗೆ ಎಸೆದಿರಬಹುದು ಎಂದು ಅನುಮಾನ ವ್ಯಕ್ತಪಡಿಸಿ ವಿನೋದ್ ಅವರ ಅಜ್ಜ ಮತ್ತೆ ದೂರು ಕೊಟ್ಟಿದ್ದರು. ಆ ಮೇರೆಗೆ ಏನೂ ಗೊತ್ತಿಲ್ಲದವರಂತೆ ಊರಿನಲ್ಲೇ ಓಡಾಡಿಕೊಂಡಿದ್ದ ಸುದೀಪ್‌ನನ್ನು ಕರೆದು ವಿಚಾರಣೆ ನಡೆಸಿದಾಗ ಕೃತ್ಯ ಒಪ್ಪಿಕೊಂಡ. ಬಳಿಕ ಮತ್ತೊಬ್ಬ ಆರೋಪಿ ಪ್ರಜ್ವಲ್‌ನನ್ನು ಸಹ ಬಂಧಿಸಲಾಯಿತು. ಸದ್ಯ ಇಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.