
ಮಾಗಡಿ: ತಾಲ್ಲೂಕಿನಲ್ಲಿ ಕಾಯಿ ಬಿಡುವ ಹಂತದಲ್ಲಿರುವ ಮಾವಿನ ಕಾಯಿ ಗೊಂಚಲಿಗೆ ಬೂದಿರೋಗ ಹಾಗೂ ಜಿಗಿಹುಳು ಭಾದೆ ಶುರುವಾಗಿದೆ. ಥ್ರಿಪ್ಸ್ ಕೀಟಗಳಿಂದ ಮಾವಿನ ಪೀಚುಗಳು ಉದುರಲು ಶುರುವಾಗಿವೆ.
ಚಂದುರಾಯನಹಳ್ಳಿ ಕೆ.ವಿ.ಕೆ ವಿಜ್ಞಾನಿಗಳು ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ತಾಂತ್ರಿಕ ಸಮಿತಿ ತಾಲ್ಲೂಕಿನ ವಿವಿಧ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಶೀಘ್ರ ಮತ್ತು ಪರಿಣಾಮಕಾರಿ ಸಸ್ಯ ಸಂರಕ್ಷಣಾ ಕ್ರಮ ಕೈಗೊಳ್ಳದಿದ್ದರೆ ಹಾನಿ ಪ್ರಮಾಣ ಹೆಚ್ಚಾಗುವ ಲಕ್ಷಣಗಳಿವೆ ಎಂದು ಕೃಷಿ ವಿಜ್ಞಾನಿಗಳು ತಿಳಿಸಿದ್ದಾರೆ.
ಶಿಲೀಂಧ್ರ ರೋಗ, ಜಿಗಿ ಹುಳು, ಮತ್ತು ಥ್ರಿಪ್ಸ್ ಕೀಟ ಸಾಕಷ್ಟು ಸಂಖ್ಯೆಯಲ್ಲಿ ಕಾಣಬರುತ್ತಿದೆ. ಪ್ರಸ್ತುತ ಈ ಕೀಟ/ರೋಗಗಳಿಗೆ ಅನುಕೂಲಕರ ವಾತಾವರಣವಿದ್ದು, ಇದನ್ನು ನಿಯಂತ್ರಿಸುವುದು ಅಗತ್ಯವಿರುತ್ತದೆ. ಸಸ್ಯ ಸಂರಕ್ಷಣಾ ಕ್ರಮ ಕೈಗೊಳ್ಳಲು ತಾಂತ್ರಿಕ ಸಮಿತಿ ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.